ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಕನ್ನಡ ಕಟ್ಟುತ್ತಿರುವ ವೈದ್ಯರು

ವೈದ್ಯರ ದಿನಾಚರಣೆ ವಿಶೇಷ
ಅಕ್ಷರ ಗಾತ್ರ

ಚಿಕ್ಕೋಡಿ: ನಾಡಿನ ಉತ್ತರದ ಗಡಿಗೆ ಹೊಂದಿಕೊಂಡಿರುವ ಚಿಕ್ಕೋಡಿ ತಾಲ್ಲೂಕಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸುವ ಮೂಲಕ ಕನ್ನಡಿಗರಲ್ಲಿ ಕನ್ನಡತನವನ್ನು ಎಚ್ಚರಿಸುವ ಕೈಂಕರ್ಯದಲ್ಲಿ ಹಲವು ಸಂಘ–ಸಂಸ್ಥೆಗಳು ಸಕ್ರಿಯವಾಗಿವೆ. ತಾಲ್ಲೂಕಿನ ಹಲವು ಸಂವೇದನಾಶೀಲ ವೈದ್ಯರೂ ತಮ್ಮ ವೃತ್ತಿಯೊಂದಿಗೆ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಿರುವುದು ವಿಶೇಷ.

ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಸಾರಸ್ವತ ಲೋಕವನ್ನೂ ಶ್ರೀಮಂತಗೊಳಿಸುತ್ತಿದ್ದಾರೆ. ಅವರ ಸೇವೆಯ ಇಣುಕು ನೋಟ ಇಲ್ಲಿದೆ.

ಡಾ.ಅನಿಲ ಕಮತಿ: ವೃತ್ತಿಯಿಂದ ವೈದ್ಯರಾದರೂ, ಪ್ರವೃತಿಯಿಂದ ಕನ್ನಡ ಭಾಷೆ- ಸಂಸ್ಕೃತಿಯ ಚಿಕಿತ್ಸಕ. ನಾಡಿನ ಉತ್ತರದ ಗಡಿಯಲ್ಲಿ ಎಂಬತ್ತರ ದಶಕದಲ್ಲಿ ಜಡತ್ವಗೊಂಡಿದ್ದ ಕನ್ನಡದ ಕ್ರಿಯೆಗೆ ಚುರುಕು ಮುಟ್ಟಿಸಿದ ಕನ್ನಡಪ್ರೇಮಿ.

1988ರಲ್ಲಿ ಯಕ್ಸಂಬಿಯಲ್ಲಿ ಡಾ.ಕಮತಿ ಅವರು ಸಮಾನ ಮನಸ್ಕರೊಂದಿಗೆ ‘ಗೆಳೆಯರ ಬಳಗ’ ಹಚ್ಚಿದ ಕನ್ನಡದ ದೀಪ ಇನ್ನೂ ಮಿನುಗುತ್ತಿದೆ. ನಾಡಿನ ಸಾಂಸ್ಕೃತಿಕ ಲೋಕದ ದಿಗ್ಗಜರನ್ನು ಇಲ್ಲಿಗೆ ಆಹ್ವಾನಿಸಿ ಗಡಿ ಕನ್ನಡಿಗರಲ್ಲಿ ಹುರುಪು ತುಂಬಿಸಿದ್ದಾರೆ. ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ಬಳಗದ ಮೂಲಕ ‘ಶಾರದಾಲಯ’ ಕಟ್ಟಿದರು. ಇಂದು ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

‘ಸೀಮೆ’ ಸಂಪಾದಿತ ಕೃತಿ, ‘ಗಡಿಯೀಚೆ ಗಡಿಯಾಚೆ‘, ‘ಏಡ್ಸ್ ಒಂದು ಯಕ್ಷಪ್ರಶ್ನೆ’, ‘ತಂತ್ರ ಕಾದಂಬರಿ’, ‘ಪ್ರಶಸ್ತಿ ಪುರಾಣ’, ‘ಒಡನಾಡಿ’, ‘ಗಡಿಯಲ್ಲಿ ಕನ್ನಡದ ಕಲರವ’ ಮುಂತಾದ ಮೌಲಿಕ ಕೃತಿಗಳನ್ನು ಅವರು ರಚಿಸಿದ್ದಾರೆ. ಸರ್ಕಾರ ಕಮತಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. 2012ರ ಡಿ.3ರಂದು ಅವರು ನಿಧನರಾದರು.

ಡಾ.ದಯಾನಂದ ನೂಲಿ: ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷರಾಗಿರುವ ಡಾ.ದಯಾನಂದ ನೂಲಿ ವೈದ್ಯಕೀಯ ವೃತ್ತಿಯೊಂದಿಗೆ ಕನ್ನಡಪರ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. 90ರ ದಶಕದಲ್ಲಿ ಚಿಕ್ಕೋಡಿಯಲ್ಲಿ ಕನ್ನಡ ಮನಸ್ಸುಗಳೊಂದಿಗೆ ‘ಸಿರಿಗನ್ನಡ ಬಳಗ’ ಸಾಹಿತ್ಯಾನುಭವ ಮಂಟಪವನ್ನು ಹುಟ್ಟು ಹಾಕಿ ಕನ್ನಡಪರ ಚಿಂತನೆಗೆ ವೇದಿಕೆ ಕಲ್ಪಿಸಿದ್ದಾರೆ. ಇಲ್ಲಿಗೆ ಕನ್ನಡ ಮತ್ತು ಮರಾಠಿಯ ವಿದ್ವಾಂಸರು ಬಂದು ಸಾಂಸ್ಕೃತಿಕ ಮತ್ತು ವೈಚಾರಿಕ ಚಿಂತನೆಗಳನ್ನು ಬಿತ್ತಿದ್ದಾರೆ.

ಕನ್ನಡದ ಜೊತೆಗೆ ಇತರ ಭಾಷೆ–ಸಂಸ್ಕೃತಿಯನ್ನು ಪ್ರೀತಿಸುವುದು ಹಾಗೂ ಎರಡರ ನಡುವಿನ ಕೊಂಡಿಯಾಗಿ ಈ ಬಳಗ ಕೆಲಸ ಮಾಡುತ್ತಿದೆ. ಉತ್ತಮ ಕಥೆಗಾರರೂ ಆದ ಡಾ.ನೂಲಿ ಅವರು ‘ನೇಹಲ್‌’ ಕಥಾಸಂಕಲನ ಪ್ರಕಟಿಸಿದ್ದಾರೆ. ಇವರ ಹಲವು ಕಥೆಗಳು ನಿಯತಕಾಲಿಕೆಗಳಲ್ಲೂ ಪ್ರಕಟಗೊಂಡಿವೆ.

ಡಾ.ಕಲ್ಯಾಣಜೀ ಕಮತೆ: ಸದಲಗಾ ಪಟ್ಟಣದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಡಾ.ಕಮತೆ ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಅಂಕಿಗಳ ಬಳಕೆಯನ್ನು ರೂಢಿಸಿಕೊಂಡಿರುವ ಇವರು ಹಣಕಾಸು ಹಾಗೂ ಇತರ ಸಂಸ್ಥೆಗಳೂ ಕನ್ನಡ ಬಳಕೆ ಮಾಡಬೇಕು ಎಂದು ಹೋರಾಟ ನಡೆಸಿದ್ದಾರೆ. ಅನ್ಯ ಭಾಷಿಕ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವಂತೆ ಪಾಲಕರ ಮನವೊಲಿಸಿ ಯಶಸ್ಸನ್ನೂ ಕಂಡಿದ್ದಾರೆ. ಬಡ ಮಕ್ಕಳಿಗೆ ಶಾಲಾ ಸಾಮಗ್ರಿಗಳನ್ನೂ ನೀಡುತ್ತಾರೆ. ಸದಲಗಾದಲ್ಲಿ ರಾಜ್ಯೋತ್ಸವವನ್ನು ಮಹತ್ವಪೂರ್ಣವಾಗಿ ಆಚರಿಸುವ ಮೂಲಕ ಕನ್ನಡಪರ ಕಾಳಜಿ ಮೆರೆಯುತ್ತಿದ್ದಾರೆ.

ಡಾ.ಚಂದ್ರಕಾಂತ ದೇಸಾಯಿ: ಮೂಲತಃ ತಾಲ್ಲೂಕಿನ ಬೇಡಕಿಹಾಳ ಗ್ರಾಮದ ಡಾ.ಚಂದ್ರಕಾಂತ ದೇಸಾಯಿ ಹುಕ್ಕೇರಿ ತಾಲ್ಲೂಕಿನ ಯಾದಗೂಡದಲ್ಲಿ ಆರ್ಯುವೇದ ವೈದ್ಯರಾಗಿದ್ದಾರೆ. ವೃತ್ತಿಯೊಂದಿಗೆ ವಚನ, ಹಳಗನ್ನಡ ಕಾವ್ಯ, ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ತಾಡೋಲೆಗಳು, ತಾಮ್ರಪಟಗಳ ಸಂಗ್ರಹ ಮಾಡಿದ್ದಾರೆ. ಅರವತ್ತು ದೇಶಗಳ ಪ್ರಾಚೀನ ನಾಣ್ಯ ಹಾಗೂ ಅಂಚೆಚೀಟಿಗಳ ಸಂಗ್ರಹವೂ ಇವರಲ್ಲಿದೆ. ‘ಗುಳ್ಳವ್ವ’ನ ಕುರಿತು ವಿಶೇಷ ಸಂಶೋಧನೆ ಮಾಡಿ ಅದಕ್ಕೆ ಸಂಬಂಧಿತ ಕನ್ನಡ–ಮರಾಠಿಯಲ್ಲಿರುವ 500 ಹಾಡು, ನಾಣ್ಣುಡಿ, ಕಥೆಗಳನ್ನು ಸಂಗ್ರಹಿಸಿದ್ದಾರೆ.

ತಾಲ್ಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಎನ್‌.ಎ.ಮಗದುಮ್ ಅವರು ಗಡಿಯಲ್ಲಿ ಶಿಕ್ಷಣ ಕ್ರಾಂತಿಯ ಜೊತೆಗೆ ಕನ್ನಡ ನುಡಿಹಬ್ಬದ ಮೂಲಕ ಕನ್ನಡದ ಕಂಪು ಪಸರಿಸುತ್ತಿದ್ದಾರೆ. ನಿಪ್ಪಾಣಿಯ ವೈದ್ಯ ಡಾ.ಚಂದ್ರಕಾಂತ ಕುರಬೆಟ್‌ ಅವರು ಕನ್ನಡ ಸಾಂಸ್ಕೃತಿಕ ಸಂಘ, ಕರ್ನಾಟಕ ರಾಜ್ಯೋತ್ಸವ ಸಮಿತಿಗಳ ಮೂಲಕ ಗಡಿಯಲ್ಲಿ ಕನ್ನಡ ಕಟ್ಟುವ ಕಾರ್ಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT