ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಮೀಕ್ಷೆ ಆಧಾರಿತ ಕಾರ್ಯದಲ್ಲಿ ವಿದ್ಯಾರ್ಥಿನಿಯರು

ಸರಸ್ವತಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಿಂದ ಆಯೋಜನೆ
Last Updated 13 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಎನ್‌ಎಸ್‌ಎಸ್‌ ಶಿಬಿರ ಎಂದ ಕೂಡಲೇ ಸ್ವಚ್ಛತಾ ಕಾರ್ಯಕ್ರಮ, ಶ್ರಮದಾನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತ ಎನ್ನುವುದು ತಕ್ಷಣ ಕಣ್ಮುಂದೆ ಬರುತ್ತದೆ. ಆದರೆ, ಇಲ್ಲಿನ ಶಹಾಪುರದ ಸರಸ್ವತಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಘಟಕದವರು ತಾಲ್ಲೂಕಿನ ಕನಗಾಂವ ಕೆ.ಎಚ್. ಗ್ರಾಮದಲ್ಲಿ ಸಮೀಕ್ಷೆ ಆಧರಿತ ಚಟುವಟಿಕೆಗಳನ್ನು ಹಮ್ಮಿಕೊಂಡು ಗಮನಸೆಳೆದಿದ್ದಾರೆ.

2021- 22ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ರಾಜ್ಯ ಸರ್ಕಾರದ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಲ್ಲಿ ಗುರುತಿಸಲಾಗಿರುವ 750 ಗ್ರಾಮಗಳಲ್ಲಿ ಒಂದಾದ ಕನಗಾಂವ ಕೆ.ಎಚ್. ಗ್ರಾಮದಲ್ಲಿ ಈಚೆಗೆ ನಡೆಸಲಾಗಿದೆ. ಪ್ರಾಚಾರ್ಯ ಎನ್‌.ಬಿ. ಶಿರ್ಶ್ಯಾಡ ಅವರ ಮಾರ್ಗದರ್ಶನದಲ್ಲಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಅನುಸೂಯ ವಿ. ಹಿರೇಮಠ ಅವರ ನೇತೃತ್ವದಲ್ಲಿ ಶಿಬಿರ ನಡೆದಿದೆ. ಆ ಗ್ರಾಮದ ಸ್ಥಿತಿಗತಿಯ ಮೇಲೆ ಶಿಬಿರ ಬೆಳಕು ಚೆಲ್ಲಿದೆ.

ಮಾಹಿತಿ ಸಂಗ್ರಹ:ಏಳು ದಿನಗಳ ಈ ಕಾರ್ಯಕ್ರಮಗಳಲ್ಲಿ 50 ಮಂದಿ ಶಿಬಿರಾರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ. ಅವರ ಆರ್ಥಿಕ ಜೀವನದ ಮಟ್ಟ, ಸಾಮಾಜಿಕ ಸ್ಥಾನಮಾನವನ್ನು ಗುರುತಿಸಿದ್ದಾರೆ. ಸರ್ಕಾರದ ಸೌಲಭ್ಯಗಳ ಕುರಿತು ಅವರಿಗೆ ಇರುವ ತಿಳಿವಳಿಕೆ ಮೊದಲಾದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

400 ಮನೆಗಳಿರುವ ಆ ಗ್ರಾಮದಲ್ಲಿ 500 ಮಂದಿ ಅನಕ್ಷರಸ್ಥರು ಇರುವುದನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಅವರಿಗೆ ಶಿಬಿರಾರ್ಥಿಗಳು ಹಾಗೂ ಕಾರ್ಯಕ್ರಮ ಅಧಿಕಾರಿಗಳು ಸಾಕ್ಷರತೆಯ ಮಹತ್ವವನ್ನು ತಿಳಿಸಿ, ಅವರನ್ನು ಸಾಕ್ಷರರನ್ನಾಗಿಸಲು ಮನವೊಲಿಸಿದರು. ಅನಕ್ಷರಸ್ಥರಾದ ನಿಮ್ಮ ಪೋಷಕರಿಗೆ ಅಕ್ಷರ ಜ್ಞಾನ ನೀಡುವಂತೆ ಅದೇ ಗ್ರಾಮದ ಪ್ರಾಥಮಿಕ ಶಾಲೆಯ 5 , 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿ ಮಾರ್ಗದರ್ಶನ ಮಾಡಿದ್ದಾರೆ. ಮನೆಯವರು ಹಾಗೂ ನೆರೆಹೊರೆಯ ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡಲು ಮನವೊಲಿಸಿದ್ದಾರೆ. ಇದಕ್ಕಾಗಿ ಬಳಸಲು ಅವರಿಗೆ ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಿತರಿಸಿದ್ದಾರೆ.

ದುಡಿಯುವವರಲ್ಲಿ ಮಹಿಳೆಯರೇ ಜಾಸ್ತಿ: ‘ಅದು ಅತಿ ಹಿಂದುಳಿದ ಗ್ರಾಮಗಳಲ್ಲಿ ಒಂದಾಗಿದೆ. ಅಲ್ಲಿ ನಾವು ಸಾಂಪ್ರದಾಯಿಕ ಶಿಬಿರದ ಬದಲಿಗೆ ವಿಶೇಷವಾಗಿ ಚಟುವಟಿಕೆಗಳನ್ನು ನಡೆಸಿದೆವು. ವಿದ್ಯಾರ್ಥಿನಿಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಜಮೀನುಗಳನ್ನು ಹೊಂದಿರುವವರು ಮಾತ್ರ ಆರ್ಥಿಕವಾಗಿ ಸುಧಾರಿಸಿದ್ದಾರೆ. ಉಳಿದವರು ಬಡತನದಲ್ಲಿದ್ದಾರೆ. ಕೂಲಿ ಕಾರ್ಮಿಕರು ಜಾಸ್ತಿ ಕಂಡುಬಂದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುತ್ತಿರುವವರಲ್ಲಿ ಶೇ 70ರಷ್ಟು ಮಹಿಳೆಯರೇ ಇರುವುದು ಆ ಗ್ರಾಮದಲ್ಲಿ ಕಂಡುಬಂದ ಮತ್ತೊಂದು ವಿಶೇಷವಾಗಿದೆ‘ ಎಂದು ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಅನಸೂಯಾ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲರೂ ಶೌಚಾಲಯ ಹೊಂದಿಲ್ಲ: ‘ಬಹಳಷ್ಟು ಮಂದಿ ಬಿಪಿಎಲ್‌ ಪಡಿತರ ಚೀಟಿ ಮೊದಲಾದ ಸರ್ಕಾರದ ಸೌಲಭ್ಯಗಳನ್ನು ಪಡೆದಿದ್ದಾರೆ. ಆಯುಷ್ಮಾನ್‌ ಆರೋಗ್ಯ ಚೀಟಿ ಯೋಜನೆಯಲ್ಲಿ ನೋಂದಾಯಿಸಿದ್ದಾರೆ. ಕೆಲವರು ಇಂದಿಗೂ ಶೌಚಾಲಯಗಳನ್ನು ಹೊಂದಿಲ್ಲ. ಅವರೆಲ್ಲರೂ ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಗುಟ್ಕಾ, ಮದ್ಯಪಾನದ ಚಟದಿಂದ ಹಲವರು ಹಾಳಾಗುತ್ತಿದ್ದಾರೆ ಎನ್ನುವುದು ಸ್ಥಳೀಯರಿಂದ ಕಲೆ ಹಾಕಿದ ಮಾಹಿತಿಯಿಂದ ತಿಳಿದುಬಂದಿತು. ಈ ಎಲ್ಲದರ ಬಗ್ಗೆಯೂ ಅರಿವು ಮೂಡಿಸುವ ಯತ್ನವನ್ನು ಶಿಬಿರದ ಮೂಲಕ ಮಾಡಿದ್ದೇವೆ’ ಎಂದು ಅನಸೂಯಾ ಮಾಹಿತಿ ನೀಡಿದರು.

ಶಿಬಿರದಲ್ಲಿ ಸ್ವಚ್ಛತೆಯ ಜಾಗೃತಿಯನ್ನೂ ಮೂಡಿಸಲಾಗಿದೆ. ಪ್ಲಾಸ್ಟಿಕ್ ಬಳಕೆ, ಮದ್ಯಪಾನದಿಂದ ಉಂಟಾಗುವ ಅನಾಹುತಗಳ ಬಗ್ಗೆ ತಿಳಿಸಲಾಯಿತು. ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ನೈರ್ಮಲ್ಯ ತಿಳಿವಳಿಕೆ, ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರದ ಬಗ್ಗೆಯೂ ತಿಳಿಸಲಾಗಿದೆ.

ಮತ್ತೆ ತೆರಳಿ

ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡುವಂತೆ ಮಕ್ಕಳಿಗೆ ತಿಳಿಸಲಾಗಿದೆ. ತಿಂಗಳಲ್ಲಿ ಒಂದು ದಿನ ಅಲ್ಲಿಗೆ ಹೋಗಿ ಫಾಲೋಅಪ್‌ ಮಾಡಲಾಗುವುದು.

–ಅನಸೂಯಾ ಹಿರೇಮಠ, ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ, ಸರಸ್ವತಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT