ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ ಬಟ್ಟೆಯಲ್ಲಿ ಹಗ್ಗ ತಯಾರಿಕೆ!

ಕಸವನ್ನು ರಸ ಮಾಡುವ ಅಲೆಮಾರಿಗಳು
Last Updated 12 ನವೆಂಬರ್ 2020, 8:12 IST
ಅಕ್ಷರ ಗಾತ್ರ

ತೆಲಸಂಗ (ಬೆಳಗಾವಿ ಜಿಲ್ಲೆ): ಹಳ್ಳಿ ಹಳ್ಳಿಗೆ ಸುತ್ತಿ ಹಳೆ ಸೀರೆಯಲ್ಲಿ ಹಗ್ಗ ತಯಾರಿಸಿ ಕೊಡುವ ಅಲೆಮಾರಿ ಕುಟುಂಬದವರು ಪ್ರದರ್ಶಿಸುವ ‘ಕಸದಲ್ಲಿ ರಸ ತೆಗೆಯುವ ಕಲೆ’ ಗಮನಸೆಳೆಯುತ್ತದೆ.

ಪ್ಲಾಸ್ಟಿಕ್ ಹಗ್ಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆಯೇ ಹಗ್ಗ ತಯಾರಿಸುವ ಗುಡಿ ಕೈಗಾರಿಕೆಗಳು ಮೂಲೆಗುಂಪಾಗಿವೆ. ಈ ಮೊದಲು ನಿಸರ್ಗದತ್ತವಾದ ವಸ್ತುಗಳನ್ನು ಬಳಸಿ ಹಗ್ಗ ಸಿದ್ಧಪಡಿಸುವ ಕೆಲಸ ಅಪಾರ ಶ್ರಮ ಮತ್ತು ಹೆಚ್ಚಿನ ಸಮಯ ಬೇಡುತ್ತಿತ್ತು. ರೈತರ ಈ ಅಗತ್ಯ ಅರಿತ ಕೆಲ ಅಲಮಾರಿ ಕುಟುಂಬಗಳು ಕೆಲವೇ ನಿಮಿಷಗಳಲ್ಲಿ, ಹಳೆ ಸೀರೆ ಬಳಸಿ ಹಗ್ಗ ತಯಾರಿಸಿ ಕೊಡುತ್ತವೆ.

ಹಳೆ ಸೀರೆಯನ್ನು ಉದ್ದವಾಗಿ 6 ಭಾಗವಾಗಿ ಕತ್ತರಿಸುತ್ತಾರೆ. ತಮ್ಮಲ್ಲಿನ ಒಂದು ಸ್ಟ್ಯಾಂಡ್‍ಗೆ ಹಾಕಿದ ಕಬ್ಬಿಣದ ಮೂರು ಕೊಂಡಿಗಳಿಗೆ ಕತ್ತರಿಸಿದ ಸಿರೆಯ ತುಂಡಗಳನ್ನು ಹಾಕಿ ತಿರುಗಿಸಿ ಕಣ್ಣು ಮುಚ್ಚಿ ತೆರಯುವಷ್ಟರಲ್ಲಿ ಹಗ್ಗ ತಯಾರಿಸುತ್ತಾರೆ. ಇಂಥದೊಂದು ಅಲೆಮಾರಿ ಕುಟುಂಬದವರು ಗ್ರಾಮಕ್ಕೆ ಈಚೆಗೆ ಬಂದಿದ್ದರು. ಮನೆ ಮನೆಗಳ ಬಳಿಗೆ ಹೋಗಿ, ಹಳೆ ಸೀರೆ ಪಡೆದು ಅಗತ್ಯವಿರುವವರಿಗೆ ಹಗ್ಗ ತಯಾರಿಸಿಕೊಟ್ಟರು. ಸೀರೆಯೊಂದಕ್ಕೆ ₹ 20 ಪಡೆದು ಒಂದು ಸೀರೆಯಲ್ಲಿ ಎರಡು ಮಾರುದ್ದದ ಎರಡು ಹಗ್ಗ ಸಿದ್ಧಪಡಿಸಿಕೊಟ್ಟರು. ‘ಈ ಹಗ್ಗ ಗಟ್ಟಿಯಾಗಿಯೂ ಇರುತ್ತದೆ. ಕೇವಲ ₹ 20ಕ್ಕೆ, ಅದರಲ್ಲೂ ಉಪಯೋಗಕ್ಕೆ ಬಾರದ ಸೀರೆಯಿಂದ ಎರಡು ಹಗ್ಗ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ ಅವರು.

‘ಗಂಡ–ಹೆಂಡತಿ ಸೇರಿ ದಿನಕ್ಕೆ ಸರಾಸರಿ ₹ 1ಸಾವಿರ ಸಂಪಾದಿಸುತ್ತೇವೆ. ಇದರಲ್ಲಿ ಜೀವನ ನಿರ್ವಹಿಸುತ್ತೇವೆ’ ಎಂದು ರಾಯಚೂರು ಜಿಲ್ಲೆಯ ಮುದಗಲ್ ಗ್ರಾಮದ ನಿವಾಸಿಗಳಾದ ಪ್ರಭುದೇವ ತಿಳಿಸಿದರು. ‘12 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಬೈಕ್‌ನಲ್ಲಿ ಗ್ರಾಮಗಳನ್ನು ಸುತ್ತುತ್ತೇವೆ. ವರ್ಷದಲ್ಲಿ ಕೇವಲ 2 ತಿಂಗಳು ಮಾತ್ರ ನಮ್ಮೂರಲ್ಲಿರುತ್ತೇವೆ. ಕರ್ನಾಟಕದ ಜೊತೆಗೆ ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು ಮೊದಲಾದ ಕಡೆಗಳಿಗೂ ಹೋಗುತ್ತೇವೆ. ಇಡೀ ಗ್ರಾಮವೇ ಈ ಕಸುಬು ಅವಲಂಬಿಸಿದೆ. ಹೀಗಾಗಿ, ಅಲೆಮಾರಿ ಜೀವನ ಅನಿವಾರ್ಯ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆ ತಂದೆ ಈ ಕೆಲಸ ಮಾಡುತ್ತಿದ್ದರು. ಅವರಿಗೆ ವಯಸ್ಸಾಗಿದ್ದು, ಮೊಮ್ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿರುತ್ತಾರೆ. ನಾವು ಕಸುಬು ಮುಂದುವರಿಸುತ್ತಿದ್ದೇವೆ. ಇದನ್ನು ಬಿಟ್ಟರೆ ಮಗೆ ಹೊಟ್ಟೆ ತುಂಬುವುದಿಲ್ಲ. ಊರೂರು ಸುತ್ತುವುದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗುತ್ತಿಲ್ಲ. ಅವರೂ ಇದೇ ಕಸುಬು ಮುಂದುವರಿಸಬೇಕಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT