ಭಾನುವಾರ, ಅಕ್ಟೋಬರ್ 25, 2020
24 °C
ಸಾಧಕರ ಪರಿಚಯ; ಹಿನ್ನೆಲೆಯಲ್ಲಿ ಕನ್ನಡ ಚಿತ್ರಗೀತೆಗಳು

PV Web Exclusive | ಬೆಳಗಾವಿಯ ಈ ಹೋಟೆಲ್‌ನಲ್ಲಿ ಊಟದೊಂದಿಗೆ ‘ಜ್ಞಾನ ದಾಸೋಹ’!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಹೋಟೆಲ್‌ ಪ್ರವೇಶಿಸುತ್ತಿದ್ದಂತೆಯೇ ಸ್ವಾಗತಿಸುವ ಸಾಧಕರ ಫೋಟೊಗಳು...ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ಈ ಹೋಟೆಲ್‌ಗೆ ಬಂದವರಿಗೆ ಊಟ, ಉಪಾಹಾರದೊಂದಿಗೆ ಜ್ಞಾನ ದಾಸೋಹ ಬೋನಸ್!

ಹೌದು. ಗಡಿ ನಾಡು ಬೆಳಗಾವಿಯ ಈ ಹೋಟೆಲ್‌ ಅಪ್ಪಟ ಕನ್ನಡದ ಕಂಪಿನ ವಾತಾವರಣ, ಸಾಧಕರ ಪರಿಚಯದಿಂದ ತುಂಬಿ ಹೋಗಿದೆ.  ಶ್ರೀಸಾಮಾನ್ಯರಾದರೂ ಅದ್ಭುತ ಸಾಧನೆ ತೋರಿದವರ ಸ್ಫೂರ್ತಿಯ ಚಿತ್ರ–ಕಥೆಗಳಿವೆ. ಆಹಾರ ಸೇವಿಸಿ ವಾಪಸಾಗುವಾಗ ನವ ಚೈತನ್ಯ ಹಾಗೂ ಪ್ರೇರಣೆಯೊಂದಿಗೆ ಹೆಜ್ಜೆ ಹಾಕಬಹುದು.

ಹೆಸರು ಪಂಜುರ್ಲಿ ಲಂಚ್ ಅಂಡ್ ಡಿನ್ನರ್. ಮಾಲೀಕರು ಕನ್ನಡದ ಅಭಿಮಾನ ಮೆರೆಯುವುದರೊಂದಿಗೆ, ದೇಶದ ವಿವಿಧೆಡೆಯ ಸಕ್ಸಸ್‌ ಸ್ಟೋರಿಗಳನ್ನು ಒಂದೇ ಸೂರಿನಲ್ಲಿ ದಾಖಲಿಸುವ ಪ್ರಯತ್ನ ಮಾಡಿರುವುದು ಗಮನಸೆಳೆಯುತ್ತಿದೆ. ಆಹಾರ ಬರುವರೆಗೆ ಈ ಕಥೆಗಳನ್ನು ಓದುತ್ತಾ, ಚಿತ್ರಗಳನ್ನು ನೋಡುತ್ತಾ ಹೋದರೆ ಹೊಸದೊಂದು ಲೋಕವೇ ತೆರೆದುಕೊಳ್ಳುತ್ತದೆ.


ಹೋಟೆಲ್ ಒಳಾವರಣದಲ್ಲಿ ಸಾಧಕರು ಹಾಗೂ ಸಮಾಜಸೇವೆ ಮಾಡುತ್ತಿರುವವರ ಪರಿಚಯ

ಸ್ವಾಗತಿಸುವ ಸಾಧಕರ ಫೋಟೊಗಳು

ಹೋಟೆಲ್‌ ಪ್ರವೇಶಿಸುತ್ತಿದ್ದಂತೆಯೇ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕೃಷ್ಣನನ್ನು ಪೂಜಿಸುತ್ತಿರುವ ಆಕರ್ಷಕವಾದ ದೊಡ್ಡ ಫೋಟೊ ಗಮಸೆಳೆಯುತ್ತದೆ. ಅದರ ಎಡ ಹಾಗೂ ಬಲ ಭಾಗದಲ್ಲಿ ಸಿದ್ಧಗಂಗಾ ಮಠದ ಲಿಂ. ಶಿವಕುಮಾರ ಸ್ವಾಮೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್.ಎಂ.  ವಿಶ್ವೇಶ್ವರಯ್ಯ, ಮುತ್ಸದ್ದಿ ಜಾರ್ಜ್ ಫರ್ನಾಂಡೀಸ್, ಸಂಗೀತ ಕ್ಷೇತ್ರದ ದಿಗ್ಗಜ ಪಿ.ಬಿ. ಶ್ರೀನಿವಾಸ್, ಬಾಲಿವುಟ್‌ ತಾರೆ ರಾಜ್ ಕಪೂರ್, ಅಪ್ರತಿಮ ದೇಶಭಕ್ತರಾದ ಸುಭಾಷ್ ಚಂದ್ರ ಭೋಸ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ವಿನಾಯಕ‌ ಸಾವರ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ವರನಟ ಡಾ.ರಾಜಕುಮಾರ್, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಬಾಳ ಠಾಕ್ರೆ, ಸೂಪರ್‌ಸ್ಟಾರ್‌ ರಜನಿಕಾಂತ್, ಗಾಯಕ ಕಿಶೋರ್ ಕುಮಾರ್, ಚಲನಚಿತ್ರ ನಟ ದಿ. ಶಂಕರ್ ನಾಗ್, ಹಾಕಿ ದಂತ ಕಥೆ ಧ್ಯಾನ್ ಚಂದ್, ಸಾಹಿತಿ ದ.ರಾ. ಬೇಂದ್ರೆ, ಅಟಲ್ ಬಿಹಾರಿ ವಾಜಪೇಯಿ, ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಸಾಹಸ ಸಿಂಹ ವಿಷ್ಣುವರ್ಧನ್, ಗಾನಯೋಗಿ ಪುಟ್ಟರಾಜ ಗವಾಯಿ, ಕ್ರಿಕೆಟಿಗ ಕಪಿಲ್ ದೇವ್, ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್, ಬಿಸ್ಮಿಲ್ಲಾ ಖಾನ್, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್, ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಮಹಮ್ಮದ್ ರಫಿ ಹೀಗೆ... ಹಲವರ ವಿಶೇಷ ಫೊಟೊಗಳು ಗೋಡೆಗಳನ್ನು ಅಲಂಕರಿದ್ದು ನೋಡುಗರ ಮನವನ್ನೂ ಸಿಂಗರಿಸುತ್ತವೆ!


ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳು

ಸಲ್ಯೂಟ್ ಮಾಡದಿರದು!

ಗೋಡೆಯ ಮೇಲೆ ಅಲ್ಲಲ್ಲಿ ಸಂದೇಶಗಳನ್ನು ಕೂಡ ಬರೆಯಲಾಗಿದೆ. ‘ರಾಷ್ಟ್ರವೇ ನಮ್ಮ‌ ದೇವರು, ರಾಷ್ಟ್ರೀಯತೆಯೇ ನಮ್ಮ ಧರ್ಮ’ ಎನ್ನುವುದು ದೇಶಭಕ್ತಿ  ಉದ್ದೀಪಿಸಿದರೆ, ‘ಪಕ್ಷಿಗಳ ಕಲರವ ಆಲಿಸಲು ಪಂಜರ ಖರೀದಿಸಬೇಡಿ ಗಿಡ ಮರಗಳನ್ನು ಬೆಳೆಸಿ’ ಎನ್ನುವ ಸಾಲುಗಳು ಚಿಂತನೆಗೂ ಹಚ್ಚುತ್ತವೆ; ಪರಿಸರ  ಪ್ರೇಮ ಬೆಳೆಸಿಕೊಳ್ಳಬೇಕು ಎಂಬ ಮಹತ್ವವನ್ನೂ ಸಾರುತ್ತವೆ. ಜಿಲ್ಲೆಯ 9 ಮಂದಿ ಹುತಾತ್ಮ ಸೈನಿಕರ ಫೋಟೊ ಹಾಗೂ ವಿವರ ನೋಡಿದರೆ ಮನಸ್ಸು  ತಾನಾಗಿಯೇ ಅವರಿಗೆ ಸಲ್ಯೂಟ್ ಮಾಡದಿರದು!

ದೇಶದ ವಿವಿಧ ಸಂಸ್ಕೃತಿ, ಧರ್ಮ ಬಿಂಬಿಸುವ ಮೇರಾ ಭಾರತ್ ಮಹಾನ್ ಕಲಾಕೃತಿ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರ ದೊಡ್ಡ ಕಲಾಕೃತಿಗಳು ಗೋಡೆಯ ಮೆರುಗು ಹೆಚ್ಚಿಸಿವೆ.


ಬೆಳಗಾವಿಯ ಹುತಾತ್ಮರ ಫೋಟೊಗಳನ್ನು ಹಾಕಿ ಸ್ಮರಿಸಲಾಗಿದೆ

ಪ್ರೇರಣಾದಾಯಕ:

ಅಂಗವೈಕಲ್ಯ ಮಟ್ಟಿ ನಿಂತು ಸಾಧನೆ ತೋರಿದ, ದೇಶದ ಮೊದಲ ದೃಷ್ಟಿಹೀನ ಐಎಎಸ್‌ ಅಧಿಕಾರಿ ಪ್ರಾಂಜಲ್‌ ಪಾಟೀಲ್‌, ಬಡತನದ ಬೇಗೆಯಲ್ಲೇ ಅರಳಿದ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ, ಸೂಲಗಿತ್ತಿ ನರಸಮ್ಮ, ಸಾಲು ಮರದ ತಿಮ್ಮಕ್ಕ, ದೇವದಾಸಿಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು  ಶ್ರಮಿಸುತ್ತಿರುವ ಬೆಳಗಾವಿಯವರೇ ಆದ ಸೀತವ್ವ ಜೋಡಟ್ಟಿ, ಕಂಬಳದಲ್ಲಿ ದಾಖಲೆ ಬರೆದಿರುವ ಶ್ರೀನಿವಾಸಗೌಡ ಹಾಗೂ ನಿಶಾಂತ್‌ ಶೆಟ್ಟಿ, ಕಿತ್ತಲೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ...

ಏಕಾಂಗಿಯಾಗಿ ಶ್ರಮ ದಾನ ಮಾಡಿ 3 ಕಿ.ಮೀ. ಕಾಲುವೆ ಕೊರೆದು ನೆರೆ ಹೊರೆಯ ರೈತರೆಲ್ಲರಿಗೂ ನೆರವಾದ ಒಡಿಸಾದ ಕೆಯೋನಜಾರ್ ಜಿಲ್ಲೆಯ ಬೈತಾನಿಯ ಬುಡಕಟ್ಟು ಜನಾಂಗದ ‘ಕೆನಾಲ್‌ ಮನುಷ್ಯ’ ಎಂದೇ ಖ್ಯಾತಿ ಗಳಿಸಿದ ದೈತಾರಿ ನಾಯಕ್, ಫಾರೆಸ್ಟ್ ಮ್ಯಾನ್ ಜಾಧವ್ ಪಯೆಂಗ್, ಸಾವಿತ್ರಿಬಾಯಿ ಫುಲೆ, ‘ಮೌಂಟೇನ್ ಮ್ಯಾನ್’ ದಶರಥ ಮಾಂಜಿ, ‘ಅನಾಥ ಮಕ್ಕಳ ಮಾಯಿ’ ಮಹಾರಾಷ್ಟ್ರದ ಸಿಂಧು ತಾಯಿ ಸಪ್ಕಾಲ್, ‘ಲೇಡಿ ಟಾರ್ಜನ್’ ಜಾರ್ಖಂಡ್‌ನ ಮಥುರ್ ಖಮ್ ಗ್ರಾಮದ ಜಮುನಾ ತುಡು...


ಹೋಟೆಲ್‌ ಒಳಾವರಣದ ಗೋಡೆಗಳ ಮೇಲೆ ಸಾಧಕರ ಚಿತ್ರಗಳು

‘ಪರಿಸರ ಬಾಬಾ’ ಬಲಬೀರ್ ಸಿಂಗ್, ಸಾವಿರಾರು ಅನಾಥ ಶವಗಳ ಅಂತಿಮ‌ ವಿಧಿವಿಧಾನ ನೆರವೇರಿಸಿರುವ ಉತ್ತರ ಪ್ರದೇಶದ ಮೊಹಮ್ಮದ್ ಷರೀಫ್, ಚಹಾ ಮಾರಿದ್ದರಿಂದ ಬರುವ ಆದಾಯದ ಅರ್ಧ ಭಾಗದಲ್ಲಿ ರಿಕ್ಷಾ ಎಳೆಯುವವರು, ದಿನಗೂಲಿ ಹಾಗೂ ಒಳಚರಂಡಿ ಸ್ವಚ್ಛ ಮಾಡುವವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರುವ ಒಡಿಶಾದ ದೇವರಪಲ್ಲಿ ಪ್ರಕಾಶ್‌ರಾವ್, ಗುಜರಾತಿನ ಅಗ್ನಿಶಾಮಕ ದಳದವರೊಂದಿಗೆ ಸ್ವಯಂ ಸೇವಕರಾಗಿ ದುಡಿಯುತ್ತಿರುವ ಬಿಪಿನ್ ಗಣತ್ರ, ಬಡವರಿಗಾಗಿ ‘ಹ್ಯೂಮಾನಿಟಿ’ ಆಸ್ಪತ್ರೆಯನ್ನು ನಿರ್ಮಿಸಿದ ಕೋಲ್ಕತ್ತಾದ ಸುಭಾಷಿಣಿ ಮಿಸ್ತ್ರಿ, ಮಿ.ಯೂನಿವರ್ಸ್‌ಗಳಾದ ಮೊನೊತೋಷ್ ರಾಯ್ ಹಾಗೂ ಮನೋಹರ್ ಐಚ್, ‘ಮೆಡಿಸಿನ್‌ ಬಾಬಾ’ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಓಂಕಾರ್ ನಾಥ್ ಶರ್ಮಾ ಅವರ ಫೋಟೊಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಪರಿಚಯ ಸಮೇತ ಹಾಕಲಾಗಿದೆ. ಕೋಡ್ ಸ್ಕ್ಯಾನ್‌ ಮಾಡಿದರೆ ಅವರ ಹೆಚ್ಚಿನ ಮಾಹಿತಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ‘ಇವರೇ ನಿಜವಾದ ಭಾರತ ರತ್ನ’ಗಳು ಎಂದೂ ‘ಬಿರುದು’ ಕೊಡಲಾಗಿದೆ.

ತಾಯಿ, ಹಸಿವಿನ ಮಹತ್ವ ಸಾರುವ ಮಹತ್ವ ತಿಳಿಸುವ ಚಿತ್ರಗಳು, ಬಸವಣ್ಣನ ಫೋಟೊದೊಂದಿಗೆ ವಚನಗಳು ಗಮನಸೆಳೆಯುತ್ತವೆ.


ವಿವಿಧ ರಾಜ್ಯದ ಶ್ರೀಸಾಮಾನ್ಯ ಸಾಧಕರ ಪರಿಚಯ

ಸ್ಫೂರ್ತಿಯಾಗಲೆಂದು...

‘ನಮ್ಮಣ್ಣ ರಾಜೇಂದ್ರ ಶೆಟ್ಟಿ ಅವರ ಪರಿಕಲ್ಪನೆ ಇದು. ಗ್ರಾಹಕರು ಊಟ–ಉಪಾಹಾರಕ್ಕೆ ಬರುತ್ತಾರೆ ನಿಜ. ಹೀಗೆ ಬಂದಾಗ ಅವರಿಗೆ ಸ್ಫೂರ್ತಿಯ ಕಥೆಗಳು  ಕಾಣಿಸಬೇಕು. ಅವರಿಂದ ಅವರೂ ಪ್ರೇರಣೆಗೊಂಡು ಸಾಧನೆಗೆ ಮುಂದಾಗಬೇಕು ಅಥವಾ ಸೇವಾ ಮನೋಭಾವ ಬೆಳೆಸಬೇಕು ಎನ್ನುವ ಉದ್ದೇಶದಿಂದ ಶ್ರೀಸಾಮಾನ್ಯ ಸಾಧಕರ ಪರಿಚಯ ಹಾಕಿದ್ದೇವೆ’ ಎನ್ನುತ್ತಾರೆ ಮಾಲೀಕರಾದ ರಂಜಿತ್ ಶೆಟ್ಟಿ ಹಾಗೂ ಉದಯ್ ಶೆಟ್ಟಿ.


ರಂಜಿತ್ ಶೆಟ್ಟಿ

‘ಇಲ್ಲಿರುವ ಚಿತ್ರಗಳು ಹಾಗೂ ಸಾಧಕರ ಮಾಹಿತಿ ಸ್ಫೂರ್ತಿ ನೀಡುವಂತಿವೆ. ಹೋಟೆಲ್‌ವೊಂದರಲ್ಲಿ ಈ ರೀತಿ ಕನ್ನಡ ಮತ್ತು ದೇಶಪ್ರೇಮ ಮೆರೆದಿರುವುದು ಕಂಡಿಲ್ಲ’ ಎಂದು ಗಜಾನನ ಪಾಟೀಲ ಪ್ರತಿಕ್ರಿಯಿಸಿದರು.

‘ಈ ವಿಶೇಷದಿಂದಾಗಿ ಹೋಟೆಲ್‌ ಗ್ರಾಹಕರ ಮನ ಗೆಲ್ಲುತ್ತಿದೆ. ಬಂದವರಲ್ಲಿ ಬಹುತೇಕರು ಈ ಬಗ್ಗೆ ವಿಚಾರಿಸುತ್ತಾರೆ. ಫೋಟೊ ತೆಗೆದುಕೊಳ್ಳುತ್ತಾರೆ. ಖುಷಿಯಿಂದ ಹೋಗುತ್ತಾರೆ. ಹೋಟೆಲ್ ತೆರೆದಿದ್ದಷ್ಟೂ ಸಮಯ ಕನ್ನಡದ ಹಳೆಯ ಚಲನಚಿತ್ರ ಗೀತೆಗಳನ್ನಷ್ಟೇ ಹಾಕಿರುತ್ತೇವೆ’ ಎಂದು ವ್ಯವಸ್ಥಾಪಕ ಮಲ್ಲಪ್ಪ ತಿಳಿಸಿದರು.

ನಾವು ಅಲ್ಲಿಂದ ಹೊರಡುವಾಗ, ‘ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ...’ ಹಾಡು ಬರುತ್ತಿತ್ತು.


ಶಿಲೆಯ ಕೌಂಟರ್‌


ಸಮಾಜಸೇವಕಿ ಸೀತವ್ವ ಜೋಡಟ್ಟಿ ಹಾಗೂ ಕಂಬಳದ ನಿಶಾಂತ್ ಶೆಟ್ಟಿ ಮತ್ತು ಶ್ರೀನಿವಾಸಗೌಡ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು