ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಞಾನದ ಬೆಳಕು’ ಮೂಡಲಗಿಯ ಈ ಸರ್ಕಾರಿ ಶಾಲೆ

ಮೂಡಲಗಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ವಿಶೇಷ
Last Updated 7 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎನ್ನುವ ಮಾತಿದೆ. ಇದಕ್ಕೆ ಪೂರಕ ಎನ್ನುವಂತೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯು ಆರು ದಶಕಗಳಿಂದ ಜ್ಞಾನದ ಬೆಳಕು ನೀಡುತ್ತಿದೆ. ಮೂಡಲಗಿ ಶೈಕ್ಷಣಿಕ ವಲಯದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ.

1956ರಲ್ಲಿ ಪ್ರಾರಂಭವಾದ ಈ ಶಾಲೆಯು ಸಾಕಷ್ಟು ಏಳುಬೀಳಗಳನ್ನು ಕಂಡಿದೆ. ಕ್ರಮೇಣ ಮಕ್ಕಳ ಉತ್ತಮ ದಾಖಲಾತಿಯಿಂದ ಗಟ್ಟಿಯಾಗಿ ನೆಲೆ ನಿಂತಿದೆ. 1ರಿಂದ 7ನೇ ತರಗತಿಯವರೆಗೆ ಇದ್ದು, 2021ರಲ್ಲಿ 422 ಹೆಣ್ಣು ಮಕ್ಕಳ ಪ್ರವೇಶಾತಿ ಇದೆ.

‘ಶೈಕ್ಷಣಿಕ ವಲಯದಲ್ಲಿರುವ ಒಟ್ಟು 6 ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗಳ ಪೈಕಿ ಮೂಡಲಗಿಯ ಹೆಣ್ಣು ಮಕ್ಕಳ ಶಾಲೆಯು ಪ್ರವೇಶಾತಿಯಲ್ಲಿ ಪ್ರತಿ ವರ್ಷದ ದ್ವಿತೀಯ ಸ್ಥಾನದಲ್ಲಿರುತ್ತದೆ’ ಎನ್ನುತ್ತಾರೆ ಬಿಇಒ ಅಜಿತ್ ಮನ್ನಿಕೇರಿ.

‘ಶಾಲೆಯಲ್ಲಿ 17 ಕೊಠಡಿಗಳಿವೆ. 12 ಶಿಕ್ಷಕರ ಪೈಕಿ 10 ಮಂದಿ ಇದ್ದಾರೆ. ಅವರು ಉತ್ತಮವಾಗಿ ಕಲಿಸುತ್ತಿರುವುದರಿಂದ ಮಕ್ಕಳ ಪ್ರವೇಶಾತಿ ಹೆಚ್ಚಲು ಕಾರಣವಾಗಿದೆ. ಪ್ರತಿ ವರ್ಷ ಏಪ್ರಿಲ್‌ ತಿಂಗಳಿಂದ ಪ್ರವೇಶಾತಿ ಅಭಿಯಾನ ಮಾಡುತ್ತಿದ್ದು, ಶಿಕ್ಷಿಯರು ಪಟ್ಟಣದ ಪ್ರತಿಯೊಂದು ವಾರ್ಡ್‌ಗಳ ಮನೆ, ಮನೆಗೆ ತೆರಳಿ ಹೆಣ್ಣು ಮಕ್ಕಳ ಪ್ರವೇಶಾತಿಗೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಮುಖ್ಯ ಶಿಕ್ಷಕ ಬಿ.ಎಚ್. ಹುಲ್ಯಾಳ ಹೇಳಿದರು.

ಹೂದೋಟ

‘ಆವರಣದಲ್ಲಿ ಕೊಳವೆಬಾವಿ ಇದೆ. ಶೌಚಾಲಯವಿದೆ. ಇಕೊ ಕ್ಲಬ್‌ ರಚಿಸಲಾಗಿದ್ದು, ಪರಿಸರದ ಅರಿವು ಮೂಡಿಸಲಾಗುತ್ತಿದೆ. ಆವರಣದಲ್ಲಿ ಹೂದೋಟ ಮಾಡಿದ್ದು, ಸಭೆ–ಸಮಾರಂಭಗಳಿಗೆ ಮಕ್ಕಳು ಮತ್ತು ಸಿಬ್ಬಂದಿಯೇ ಸೇರು ಹೂಗುಚ್ಛಗಳನ್ನು ಸಿದ್ಧಪಡಿಸುತ್ತಾರೆ. ಶಾಲೆಗೆ ಬೇಕಾದ ಬಳಪವನ್ನು ಸಿದ್ಧಗೊಳಿಸುತ್ತಾರೆ, ಹೊಲಿಗೆ, ಕಸೂತಿ ಕೌಶಲವನ್ನು ಮಕ್ಕಳಿಗೆ ನೀಡಲಾಗುತ್ತಿದೆ.

ಸ್ಕೌಟ್ಸ್‌ನ ‘ಬುಲ್‌ಬುಲ್‌‘ ಘಟಕವಿದೆ. ಹಾಡು, ನೃತ್ಯ, ಕ್ರೀಡಾ ಸ್ಪರ್ಧೆಗಳಲ್ಲಿ ಇಲ್ಲಿನ ಮಕ್ಕಳು ವಿವಿಧೆಡೆ ಭಾಗವಹಿಸಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಮೊರಾರ್ಜಿ ದೇಸಾಯಿ, ಜವಾಹರ ನವೋದಯ ಶಾಲೆಗಳ ಪ್ರವೇಶ ಪರೀಕ್ಷೆಗಾ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಪ್ರತಿ ವರ್ಷ 3ರಿಂದ 4 ಮಕ್ಕಳು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿವೇತನ ಸೌಲಭ್ಯವಿದೆ. ಇಲ್ಲಿ ಕಲಿತ ಸಾಕಷ್ಟು ಹೆಣ್ಣು ಮಕ್ಕಳು ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಸಮುದಾಯ ದೇಣಿಗೆ

ಉದ್ಯಮಿ ನರಸಿಂಹ ಎನ್. ಉಡುಪಿ ಅವರು ನಿರ್ಮಿಸಿಕೊಟ್ಟಿರುವ ಕಲಾಮಂಟಪವು ಶಾಲೆಗೆ ಮೆರಗು ನೀಡಿದೆ. ಕಂಪ್ಯೂಟರ್‌, ಸ್ಕ್ರೀನ್‌, ಸ್ಟೀಲ್‌ ತಟ್ಟೆಗಳು, ಕ್ರೀಡಾ ಸಲಕರಣೆಗಳು ಹೀಗೆ... ಹಲವು ಸಾಮಗ್ರಿ ಸಮುದಾಯದಿಂದ ದೇಣಿಗೆಯಾಗಿ ದೊರೆತಿದೆ. ಶಿಕ್ಷಕರು ಸೇರಿ ₹1 ಲಕ್ಷ ವಂತಿಗೆ ಸಂಗ್ರಹಿಸಿ ನಿರ್ಮಿಸಿರುವ ಸ್ಮಾರ್ಟ್‌ ಕ್ಲಾಸ್‌ ರೂಂ ಮತ್ತು ಕ್ರೀಡಾ ಮೈದಾನವು ಕಳೆ ಹೆಚ್ಚಿಸಿದೆ.

ಶಾಲೆಗೆ ಸುಣ್ಣ–ಬಣ್ಣ ಮಾಡುವ ಅವಶ್ಯವಿದೆ. ಕೆಲವು ಕೊಠಡಿಗಳ ದುರಸ್ತಿಯಾಗಬೇಕಾಗಿದೆ. ಸ್ಥಳೀಯ ದಾನಿಗಳು ಮುಂದೆ ಬಂದು ನೆರವಾದರೆ ಅರ್ಧ ಶತಮಾನ ಪೂರೈಸಿರುವ ಈ ಶಾಲೆಯು ಮತ್ತಷ್ಟು ಕಂಗೊಳಿಸುವುದರಲ್ಲಿ ಸಂದೇಹವಿಲ್ಲ ಎನ್ನುವುದು ಶಿಕ್ಷಣ ಪ್ರಿಯರ ಆಶಯವಾಗಿದೆ. ಸಂಪರ್ಕಕ್ಕೆ ಮೊ.ಸಂಖ್ಯೆ: 9008477705.

ಶಿಕ್ಷಕರ ಪರಿಶ್ರಮದಿಂದ

ಮಕ್ಕಳಿಗೆ ಇಂಗ್ಲಿಷ್‌ ಗ್ರಾಮರ್, ಗಣಿತ, ವಿಜ್ಞಾನ ಕುರಿತು ವಿಶೇಷ ಪಾಠ ಮಾಡಲಾಗುತ್ತಿದೆ. ಶಿಕ್ಷಕ ವೃಂದದ ಪರಿಶ್ರಮದ ಫಲವಾಗಿ ಶಾಲೆಯ ದಾಖಲಾತಿ ವೃದ್ಧಿಗೆ ಕಾರಣವಾಗಿದೆ.

–ಬಿ.ಎಚ್. ಹುಲ್ಯಾಳ, ಹಿರಿಯ ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT