ಶನಿವಾರ, ಜನವರಿ 29, 2022
23 °C
ಆರ್ಥಿಕ ನೆರವು ಕಲ್ಪಿಸಲು ಸರ್ಕಾರದಿಂದ ಕ್ರಮ

ಬೆಳಗಾವಿ: ಕೋವಿಡ್‌ನಿಂದ ಅನಾಥರಾದ 2,762 ಮಕ್ಕಳ ಭವಿಷ್ಯ ಅತಂತ್ರ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ 1ನೇ ಹಾಗೂ 2ನೇ ಅಲೆಯ ಸಂದರ್ಭದಲ್ಲಿ 17 ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಬರೋಬ್ಬರಿ 2,745 ಮಕ್ಕಳು ತಂದೆ ಅಥವಾ ತಾಯಿಯ ಆಸರೆಯಿಂದ ದೂರಾಗಿ ಏಕ ಪೋಷಕರ ಆಶ್ರಯದಲ್ಲಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪಟ್ಟಿ ಸಿದ್ಧಪಡಿಸಿದೆ.

ಕೋವಿಡ್ ಸೋಂಕು ನೂರಾರು ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟು ಅತಂತ್ರವನ್ನಾಗಿಸಿದೆ. ಕಂಗಾಲಾಗಿರುವ ಮಕ್ಕಳು ಬಂಧುಗಳ ಆಸರೆಯಲ್ಲಿದ್ದಾರೆ. ತಂದೆ–ತಾಯಿಯ ಪ್ರೀತಿ–ಮಮತೆಯಿಂದ ವಂಚಿತವಾಗಿದ್ದಾರೆ. ಬಾಲ್ಯದಲ್ಲೇ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಮತ್ತು ಅನ್ಯರ ಆಶ್ರಯದ ಅನಿವಾರ್ಯಯಲ್ಲಿದ್ದಾರೆ.

ಸೋಂಕಿನ ಕಾರಣದಿಂದ:

17 ಮಕ್ಕಳು ಕೋವಿಡ್‌ಗಿಂತ ಮುಂಚೆ ಅನಾರೋಗ್ಯ ಮತ್ತಿತರ ಕಾರಣಗಳಿಂದ ತಂದೆ ಅಥವಾ ತಾಯಿ ಕಳೆದುಕೊಂಡು ಏಕ ಪೋಷಕರ ಆರೈಕೆಯಲ್ಲಿದ್ದರು. ಬರಸಿಡಿಲಿನಂತೆ ಬಂದೆರಗಿದ ಕೋವಿಡ್‌ ಸೋಂಕು, ಇದ್ದ ತಂದೆ ಅಥವಾ ತಾಯಿಯನ್ನೂ ಕಿತ್ತುಕೊಂಡು ಆ ಮಕ್ಕಳನ್ನು ಅನಾಥರನ್ನಾಗಿಸಿದೆ.

ಕೋವಿಡ್‌ನಿಂದಾಗಿ ಒಬ್ಬ ಪೋಷಕರನ್ನು ಕಳೆದುಕೊಂಡು, ಏಕ ಪೋಷಕರ ಆರೈಕೆಯಲ್ಲಿರುವವರೆ ಹೆಚ್ಚಿದ್ದಾರೆ. ಅವರಲ್ಲಿ ಬಹುತೇಕ ಕುಟುಂಬಗಳು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವಾಗಿವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

‘17 ಮಕ್ಕಳಲ್ಲಿ ಮಂಗಳವಾರದವರೆಗೆ 14 ಮಕ್ಕಳಿಗೆ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ಯಲ್ಲಿ ತಿಂಗಳಿಗೆ ₹ 3,500 ಆರ್ಥಿಕ ನೆರವು ಒದಗಿಸಲಾಗುತ್ತಿದೆ. 18 ವರ್ಷ ವಯಸ್ಸಿನವರೆಗೂ ಅವರಿಗೆ ಈ ಪರಿಹಾರ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ₹ 1.33 ಲಕ್ಷವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಖಸಾಗರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಳಿದ ಮೂರು ಮಕ್ಕಳ ಮಾಹಿತಿಯನ್ನೂ ನಿಗದಿತ ತಂತ್ರಾಂಶದಲ್ಲಿ ಶೀಘ್ರದಲ್ಲೇ ದಾಖಲಿಸಲಾಗುವುದು. ಅವರಿಗೂ ಪ್ರತಿ ತಿಂಗಳು ನೆರವು ಸಿಗಲಿದೆ’ ಎನ್ನುತ್ತಾರೆ ಅವರು.

23 ವರ್ಷವಾದಾಗ ₹ 10 ಲಕ್ಷ:

ಈ ಎಲ್ಲ 17 ಮಕ್ಕಳಿಗೂ ‘ಪಿಎಂ ಕೇರ್ಸ್‌’ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ನೆರವು ಸಿಗಲಿದೆ. ಸರ್ಕಾರದ ಸೂಚನೆಯಂತೆ ಬಾಲಸ್ವರಾಜ್‌ ಪೋರ್ಟಲ್‌ನಲ್ಲಿ ಸಂಪೂರ್ಣ ಮಾಹಿತಿಯನ್ನು ದಾಖಲಿಸಲಾಗಿದೆ. ಅಂಚೆ ಕಚೇರಿಗಳಲ್ಲಿ ಖಾತೆಗಳನ್ನೂ ತೆರೆಯಲಾಗಿದೆ. ಫಲಾನುಭವಿ ಹಾಗೂ ಜಿಲ್ಲಾಧಿಕಾರಿ ಹೆಸರಿನ ಜಂಟಿ ಖಾತೆ ಇದಾಗಿರುತ್ತದೆ.

ಫಲಾನುಭವಿಗೆ 18 ವರ್ಷವಾದಾಗ ₹ 10 ಲಕ್ಷ ಪರಿಹಾರ ಅವರ ಖಾತೆಗೆ ಜಮೆಯಾಗುತ್ತದೆ. 23 ವರ್ಷ ವಯಸ್ಸಾದಾಗ ದಾಖಲೆಗಳನ್ನು ಪ್ರಸ್ತುತಪಡಿಸಿ ಖಾತೆಯಿಂದ ಹಣ ಪಡೆದುಕೊಳ್ಳಬಹುದು (ವಿತ್‌ ಡ್ರಾ). ₹ 10 ಲಕ್ಷಕ್ಕೆ 5 ವರ್ಷದ ಬಡ್ಡಿಯನ್ನೂ ಸೇರಿಸಲಾಗುವುದು. ಅದೂ ಕೂಡ ಸಿಗಲಿದೆ ಎಂದು ತಿಳಿಸಲಾಗಿದೆ. ಅಂಚೆ ಕಚೇರಿಯಲ್ಲಿ ತೆರೆದಿರುವ ಖಾತೆಗೆ ಸಂಬಂಧಿಸಿದ ಪಾಸ್‌ಬುಕ್‌ ಅನ್ನು ಫಲಾನುಭವಿಗಳು ಅಥವಾ ಚಿಕ್ಕ ಮಕ್ಕಳಾಗಿದ್ದರೆ ಅವರ ಬಂಧುಗಳಿಗೆ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ 11 ಮಂದಿ ಮಕ್ಕಳು ಕೋವಿಡೇತರ ಸಮಸ್ಯೆಯಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ಶಿಕ್ಷಣಕ್ಕೆ ಹಾಗೂ ಹಾಸ್ಟೆಲ್‌ಗಳ ಪ್ರವೇಶಕ್ಕೆ ಮಾತ್ರವೇ ನೆರವು ಒದಗಿಸಲಾಗಿದೆ. ಪರಿಹಾರ ಕೊಡವುದಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಇನ್ನೂರಷ್ಟೆ ಗುರಿ!

ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ತಂದೆ ಅಥವಾ ತಾಯಿ ಕಳೆದುಕೊಂಡ 2,745 ಮಕ್ಕಳು ಏಕಪೋಷಕರ ಆರೈಕೆಯಲ್ಲಿದ್ದಾರೆ. ಅಂತಹ ಮಕ್ಕಳಿಗೆ ತಿಂಗಳಿಗೆ ₹ 1ಸಾವಿರ ನೀಡುವ ಯೋಜನೆ ಇದೆ. ಅದರಲ್ಲಿ ಜಿಲ್ಲೆಗೆ 200 ಮಕ್ಕಳ ಗುರಿಯನ್ನಷ್ಟೆ ಕೊಡಲಾಗಿದೆ! ಉಳಿದ ಮಕ್ಕಳಿಗೆ ಆರ್ಥಿಕ ನೆರವು ಸಿಗದಿರುವ ಸಾಧ್ಯತೆ ಇದೆ.

‘ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಎಲ್ಲ ಮಕ್ಕಳ ಮಾಹಿತಿ ಮತ್ತು ದಾಖಲೆಗಳನ್ನೂ ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ನಿಜವಾಗಿಯೂ ನೆರವು ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯು ಆಯ್ಕೆ ಮಾಡುತ್ತದೆ. 3 ವರ್ಷದವರೆಗೆ ಪ್ರತಿ ತಿಂಗಳು ₹ 1ಸಾವಿರ ನೆರವು ಅವರಿಗೆ ದೊರೆಯಲಿದೆ. ಹಾಸ್ಟೆಲ್‌ ಅವಶ್ಯವಿದ್ದಲ್ಲಿ ಆದ್ಯತೆ ಮೇರೆಗೆ ಮಾಡಲಾಗುವುದು. ಈವರೆಗೆ 35 ಮಕ್ಕಳಿಗೆ ಬಾಲಮಂದಿರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

18ರ ನಂತರ ‘ಉಪಕಾರ್‌’

ಸರ್ಕಾರಿ ಬಾಲಮಂದಿರದಲ್ಲಿ ಆಸರೆ ಪಡೆದವರನ್ನು 18 ವರ್ಷದ ನಂತರ ಅಲ್ಲಿಂದ ಬಿಡುಗಡೆ ಕಳುಹಿಸಬೇಕಾಗುತ್ತದೆ. ಅಂತಹ ಬಡ ಅಥವಾ ಅನಾಥ ಮಕ್ಕಳಿಗೆ ಆರ್ಥಿಕವಾಗಿ ನೆರವು ಒದಗಿಸಲು ‘ಉಪಕಾರ್‌’ ಯೋಜನೆ ಜಾರಿಗೊಳಿಸಲಾಗಿದೆ. ಅವರಿಗೆ ಪ್ರತಿ ತಿಂಗಳೂ ₹ 5ಸಾವಿರ ಕೊಡಲಾಗುವುದು. ಈ ಸಾಲಿನಲ್ಲಿ 10 ಮಂದಿ ಆ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಇನ್ನೂ 12 ಮಂದಿಗೆ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು