ಭಾನುವಾರ, ಮೇ 29, 2022
31 °C

ರಾಮದುರ್ಗ: ಮೂವರು ಕಂದಮ್ಮಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮದುರ್ಗ (ಬೆಳಗಾವಿ): ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮಲ್ಲಾಪುರ ಮತ್ತು ಬೋಚಬಾಳದ ಮೂವರು ಮಕ್ಕಳು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ‘ಅವರು ಸಾಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ರುಬೆಲ್ಲಾ’ ಲಸಿಕೆ (ಚುಚ್ಚುಮದ್ದು) ಪಡೆದ ಕೆಲವೇ ಗಂಟೆಗಳಲ್ಲಿ ಅಸ್ವಸ್ಥಗೊಂಡಿದ್ದರು’ ಎಂದು ಪೋಷಕರು ಮತ್ತು ಗ್ರಾಮಸ್ಥರು ಅರೋಪಿಸಿದ್ದಾರೆ.

ಆ ತಾಲ್ಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಕರಗುಂದಿ (14 ತಿಂಗಳು) ಮತ್ತು ಮಲ್ಲಾಪುರ ಗ್ರಾಮದ ಚೇತನ ಪೂಜಾರಿ (15 ತಿಂಗಳು) ಮೃತರು. ಚೇತನ್ ಮತ್ತು ಪವಿತ್ರಾ 13ರಂದು ಮನೆಯಲ್ಲಿ ಮತ್ತು ಮಧು ಇಲ್ಲಿನ ಜಿಲ್ಲಾಸ್ಪತ್ರೆ (ಬಿಮ್ಸ್‌)ಯಲ್ಲಿ ಶನಿವಾರ ಸಂಜೆ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಭಾನುವಾರ ಹಸ್ತಾಂತರಿಸಲಾಯಿತು.

21 ಮಕ್ಕಳಿಗೆ ಜ.11 ಮತ್ತು 12ರಂದು ವಿವಿಧ ಲಸಿಕೆಗಳನ್ನು ನೀಡಲಾಗಿತ್ತು. ಇವರಲ್ಲಿ 4 ಮಂದಿಗೆ ‘ರುಬೆಲ್ಲಾ’ ಲಸಿಕೆ ಕೊಡಲಾಗಿತ್ತು. ಐವರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿತ್ತು. ಒಂದು ಮಗು ಗುಣಮುಖವಾಗಿದೆ. ಉಳಿದವರು ಅಸ್ವಸ್ಥರಾಗಿದ್ದರು.

ಬಿಮ್ಸ್‌ನಲ್ಲಿ ಮಗುವನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

‘ಮಕ್ಕಳಿಗೆ ವಿವಿಧ ಚುಚ್ಚುಮದ್ದನ್ನು ಒಂದೇ ಕಡೆ ನೀಡಿದ್ದಾರೆ. 15ರಿಂದ 18ವರ್ಷದವರಿಗೆ ಕೋವಿಡ್ ಲಸಿಕೆಯನ್ನೂ ಆಗಲೇ ಕೊಡಲಾಗುತ್ತಿತ್ತು. ಆಗ ಬಹಳ ಜನರು ಸೇರಿದ್ದರು. ಇದರಿಂದ ಸಿಬ್ಬಂದಿಗೆ ಗೊಂದಲ ಉಂಟಾಗಿರುವ ಸಾಧ್ಯತೆಯೂ ಇದೆ. ಜಾಗೃತಿ ವಹಿಸಬೇಕಿತ್ತು’ ಎಂದು ಬೋಚಬಾಳದ ಮುಖಂಡ ಭೀಮಶಿ ವಾರಿಮನಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಮಕ್ಕಳಿಗೆ ಕೋವಿಡ್ ಹಾಗೂ ಇತರ ಲಸಿಕೆಗಳನ್ನು ಪ್ರತ್ಯೇಕ ಕೇಂದ್ರಗಳಲ್ಲಿ ಕೊಡಲಾಗಿದೆ. ರುಬೆಲ್ಲಾ ಲಸಿಕೆ ಪಡೆದಿದ್ದ 4 ಮಕ್ಕಳು ಅಸ್ವಸ್ಥರಾಗಿದ್ದರು. ಹಿಂದೆ ಇಂತಹ ಅಡ್ಡಪರಿಣಾಮ ಬೀರಿದ್ದು ನಾವು ನೋಡಿಲ್ಲ. ಯಾವುದೇ ಲಸಿಕೆ ಪ್ರತಿಕೂಲ ಪರಿಣಾಮ ಬೀರಿದರೆ, ಆ ಬಗ್ಗೆ ಜಿಲ್ಲಾ ಮಟ್ಟದ ತಜ್ಞರ ಸಮಿತಿ ಪರಿಶೀಲಿಸಲಿದೆ. ನೀಡಲಾದ ಲಸಿಕೆ, ಮಕ್ಕಳ ಮಲ–ಮೂತ್ರ, ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ರಾಮದುರ್ಗ ಟಿಎಚ್‌ಒ ಡಾ.ಸತೀಶ ಪೋತದಾರ, ‘ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ವಿವಿಧ ಲಸಿಕೆಗಳನ್ನು ನೀಡಲಾಗುತ್ತಿದೆ. ಸಾಲಹಳ್ಳಿ ಕೇಂದ್ರದಲ್ಲಿ ಪಡೆದ ಕೆಲವು ಮಕ್ಕಳು ಮಾತ್ರ ಅಸ್ವಸ್ಥಗೊಂಡಿದ್ದರು. ಚುಚ್ಚುಮದ್ದಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಒಂದು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಬಳಿಕವಷ್ಟೇ ಸ್ಪಷ್ಟ ಕಾರಣ ಗೊತ್ತಾಗಲಿದೆ’ ಎಂದರು.

‘ಆಸ್ಪತ್ರೆಗೆ ಬಂದಾಗಲೇ ಇಬ್ಬರು ಮಕ್ಕಳು ತೀವ್ರ ಅಸ್ವಸ್ಥರಾಗಿದ್ದರು. ಒಂದು ಮಗು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯರು ಮಾಹಿತಿ ಕೊಟ್ಟಿದ್ದಾರೆ. ಇನ್ನೊಂದು ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಚೇತರಿಸಿಕೊಳ್ಳುತ್ತಿದೆ’ ಎಂದು ಬಿಮ್ಸ್‌ ನಿರ್ದೇಶಕ ಡಾ.ಆರ್‌.ಜಿ. ವಿವೇಕಿ ‍ಪ್ರತಿಕ್ರಿಯಿಸಿದರು.

ಏನಿದು ರುಬೆಲ್ಲಾ ಲಸಿಕೆ? 
‘ದಡಾರ ಬಾರದಿರಲೆಂದು ಕೊಡಲಾಗುವ ಲಸಿಕೆ ಇದಾಗಿದೆ‘ ಎಂದು ಜಿಲ್ಲಾ ಲಸಿಕಾಧಿಕಾರಿ ಡಾ.ಈಶ್ವರ ಗಡಾದ ತಿಳಿಸಿದ್ದಾರೆ.

ಇದನ್ನೂ ಓದಿ:  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು