ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಸಂಚಾರ ಸ್ತಬ್ಧ; ಪ್ರಯಾಣಿಕರ ಪರದಾಟ

ಕೇಂದ್ರ ಬಸ್ ನಿಲ್ದಾಣದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ನೌಕರರು
Last Updated 11 ಡಿಸೆಂಬರ್ 2020, 12:09 IST
ಅಕ್ಷರ ಗಾತ್ರ

ಬೆಳಗಾವಿ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಕೆಲಸದಿಂದ ದೂರ ಉಳಿದಿದ್ದರಿಂದ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಪರದಾಡಿದರು.

ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಸೇರಿದ ನೌಕರರು ಇಡೀ ದಿನ ಮುಷ್ಕರ ನಡೆಸಿದರು. ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಇಲ್ಲಿಂದ ಆ ರಾಜ್ಯಗಳಿಗೆ ಬಸ್‌ಗಳು ಬರಲಿಲ್ಲ ಮತ್ತು ಇಲ್ಲಿಂದ ಅಲ್ಲಿಗೆ ಹೋಗಲಿಲ್ಲ. ಪರಿಣಾಮ ಅಂತರರಾಜ್ಯ ಪ್ರಯಾಣಿಕರಿಗೂ ತೊಂದರೆಯಾಯಿತು. ಇಲ್ಲಿನ ವಿದ್ಯಾರ್ಥಿಗಳು ಆರ್‌ಸಿಯು, ವಿಟಿಯು ಮೊದಲಾದ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಹಾಗೂ ವಿವಿಧ ಕಾಲೇಜುಗಳಿಗೆ ಮತ್ತು ಪರೀಕ್ಷೆಗೆ ಹೋಗುವುದಕ್ಕೆ ಆಗದೆ ಪರದಾಡಿದರು. ಬಳಿಕ ಪರ್ಯಾಯ ವ್ಯವಸ್ಥೆಯ ಮೊರೆ ಹೋದರು. ಬಹಳಷ್ಟು ಮಂದಿ ಪ್ರಯಾಣ ಮೊಟಕುಗೊಳಿಸಿ, ಮನೆಗಳಿಗೆ ತೆರಳಿದರು.

ಪೂರ್ವ ಮಾಹಿತಿ ಇಲ್ಲದೆ:

ಮುಷ್ಕರದ ನಡುವೆಯೂ ಬೆಳಗಾವಿಯಿಂದ ಸಂಕೇಶ್ವರಕ್ಕೆ ಹೊರಟಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾದ ಘಟನೆ ವರದಿಯಾಗಿದೆ.

‘ನೌಕರರು ಪೂರ್ವ ಸೂಚನೆ ಇಲ್ಲದೆ ದಿಢೀರನೆ ಹೋರಾಟಕ್ಕೆ ಇಳಿದಿದ್ದರಿಂದ ನಮಗೆ ತೀವ್ರವಾಗಿ ತೊಂದರೆಯಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ನೌಕರರ ಬೇಡಿಕೆ ನ್ಯಾಯಸಮ್ಮತವಾಗಿದ್ದಲ್ಲಿ ತಕ್ಷಣ ಸ್ಪಂದಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಪ್ರಯಾಣಿಕರು ಒತ್ತಾಯಿಸಿದರು.

ಪೊಲೀಸರು ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿ ಅಧಿಕಾರಿಗಳ ಮನವೊಲಿಕೆಗೆ ಜಗ್ಗದ ನೌಕರರು, ಬಸ್‌ಗಳ ಕಾರ್ಯಾಚರಣೆಗೆ ಮುಂದಾಗಲಿಲ್ಲ. ಇದರಿಂದಾಗಿ ಬಸ್‌ಗಳು ನಿಲ್ದಾಣ ಹಾಗೂ ಡಿಪೊಗಳಲ್ಲೇ ಇದ್ದವು.

ಕೆಲವು ಪ್ರಯಾಣಿಕರು, ಮುಷ್ಕರ ಈಗ ಮುಕ್ತಾಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಮಧ್ಯಾಹ್ನದವರೆಗೂ ಕಾದು ಕುಳಿತಿದ್ದರು. ಕೊನೆಗೆ, ಹೆಚ್ಚಿನ ಹಣ ನೀಡಿ ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು.

ಹೊಟ್ಟೆ ಮೇಲೆ ಕಲ್ಲಿಟ್ಟುಕೊಂಡು:

ನಿಲ್ದಾಣದಲ್ಲೇ ಮಧ್ಯಾಹ್ನದ ಊಟ ಸೇವಿಸಿದ ನೌಕರರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪುರುಷ ನೌಕರರು ಅರೆಬೆತ್ತಲೆಯಾಗಿ ಹೊಟ್ಟೆ ಹೊಟ್ಟೆ ಮೇಲೆ ಕಲ್ಲು ಇಟ್ಟುಕೊಂಡು ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಅಳಲು ತೋಡಿಕೊಂಡರು. ಕಂಡಕ್ಟರ್‌ಗಳು ಒಮ್ಮೆಲೇ ಸೀಟಿ ಊದುವ ಮೂಲಕ ಗಮನಸೆಳೆದರು.

ಕನ್ನಡಪರ ಸಂಘಟನೆಗಳು, ರೈತ ಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ಮುಷ್ಕರದ ನಡುವೆಯೂ ಅಶೋಕ ವೃತ್ತದಿಂದ ಕೆಲವು ಬಸ್‌ಗಳ ಕಾರ್ಯಾಚರಣೆಗೆ ಅಧಿಕಾರಿಗಳು ಯತ್ನಿಸಿದರು. ಆದರೆ, ಅದಕ್ಕೆ ನೌಕರರು ಅವಕಾಶ ಕೊಡಲಿಲ್ಲ. ವಿರೋಧದ ಮಧ್ಯೆಯೂ ಕಾರ್ಯಾಚರಣೆ ನಡೆಸಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

***

‘ನೀಲಿ ಪ್ರಿಯ’ ಸವದಿಗೆ ಧಿಕ್ಕಾರ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ನೌಕರರ ಮಷ್ಕರ ಬೆಂಬಲಿಸಿದರು. ಉಪ ಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ವಿರುದ್ಧ ತವರಿನಲ್ಲೂ ತೀವ್ರ ಆಕ್ರೋಶ ವ್ಯಕ್ತವಾಯಿತು. ಆ ಸಂಘಟನೆ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ ‘ನೀಲಿ ಪ್ರಿಯ ಲಕ್ಷ್ಮಣ ಸವದಿ’ಗೆ ಧಿಕ್ಕಾರ ಎಂದು ಕೂಗಿದರು. ಅದನ್ನು ಕಾರ್ಯಕರ್ತರು ಹಾಗೂ ನೌಕರರು ಬೆಂಬಲಿಸಿ ಸಚಿವರ ವಿರುದ್ಧ ಧಿಕ್ಕಾರ ಮೊಳಗಿಸಿದರು.

ಸರ್ಕಾರ ತಮ್ಮ ಬೇಡಿಕೆ ಈಡೇರಿಸುವವವರೆಗೂ ಮುಷ್ಕರ ಕೈ ಬಿಡುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ‘ನಮ್ಮನ್ನು ಸರ್ಕಾರಿ ನೌಕರರೆಂದು ಮಾಡಿದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಫೋಟೊಗಳಿಗೆ ನಿತ್ಯ ಪೂಜೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT