ಬೆಳಗಾವಿ: ಹುಬ್ಬಳ್ಳಿ –ಪುಣೆ ಮಧ್ಯೆ ಸೆ.16ರಿಂದ ಆರಂಭವಾಗಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುರುವಾರ ಪ್ರಾಯೋಗಿಕವಾಗಿ ಸಂಚರಿಸಿತು.
ಹುಬ್ಬಳ್ಳಿಯಿಂದ ಹೊರಟ ರೈಲು ಧಾರವಾಡ ಮಾರ್ಗವಾಗಿ ಸಂಚರಿಸಿ, ಮಧ್ಯಾಹ್ನ 12.19ಕ್ಕೆ ಬೆಳಗಾವಿ ನಿಲ್ದಾಣ ತಲುಪಿತು. ಇಲ್ಲಿಂದ ಮೀರಜ್ ಮಾರ್ಗವಾಗಿ ಪುಣೆಯತ್ತ ಸಾಗಿತು. ಈ ರೈಲು ಪ್ಲಾಟ್‌ಫಾರ್ಮ್‌ಗೆ ಬರುತ್ತಿದ್ದಂತೆ, ಪ್ರಯಾಣಿಕರು ರೈಲಿನ ಬಳಿ ಓಡಿಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ರೈಲಿನೊಳಗೆ ಹೋಗಿ, ಆಸನಗಳು ಮತ್ತು ಸೌಲಭ್ಯಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.
ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣ ತಲುಪಲು ರೈಲು ಎಷ್ಟು ಸಮಯ ತೆಗೆದುಕೊಂಡಿತು ಎಂಬುದನ್ನು ರೈಲ್ವೆ ಅಧಿಕಾರಿಗಳು ಗಮನಿಸಿದರು. ‘ಪ್ರಸ್ತುತ ರೈಲು ಚಲಿಸುವ ವೇಗ ಆಧರಿಸಿ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪ್ರಾಯೋಗಿಕ ಸಂಚಾರದಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವೇಳಾಪಟ್ಟಿ ತಯಾರಿಸಲು ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.
ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು– ಧಾರವಾಡ ಮಧ್ಯೆ ಆರಂಭವಾದ ವಂದೇ ಭಾರತ್ ರೈಲು 2023ರ ನವೆಂಬರ್‌ನಲ್ಲಿ ಬೆಳಗಾವಿಯವರೆಗೂ ಪ್ರಾಯೋಗಿಕ ಸಂಚಾರ ನಡೆಸಿತ್ತು. ಬೋಗಿಗಳ ಉದ್ದಳತೆ ಆಧರಿಸಿ, ಅದಕ್ಕೆ ನೀರುಣಿಸುವ ವ್ಯವಸ್ಥೆಗೆ ಯೋಜನೆ ಕಾರ್ಯಗತ ಮಾಡಲಾಗಿದೆ.
ಏನೇನಿದೆ?: ‘ಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಒಳಗೊಂಡಿರುವ ಈ ರೈಲಿನಲ್ಲಿ 8 ಕೋಚ್‌ಗಳಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ವೈಫೈ, ಇನ್ಫೋಟೆಕ್ ವ್ಯವಸ್ಥೆ ಇದೆ. ಜಿಪಿಎಸ್ ವ್ಯವಸ್ಥೆ ಇರುವ ಕಾರಣ, ಪ್ರಸ್ತುತ ರೈಲು ಯಾವ ಸ್ಥಳದಲ್ಲಿದೆ ಎಂಬುದನ್ನು ತಿಳಿಯಬಹುದು’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.