ಗುರುವಾರ , ಡಿಸೆಂಬರ್ 5, 2019
19 °C
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ರಾಮತೀರ್ಥನಗರದಲ್ಲಿ ಭವನ ನಿರ್ಮಾಣಕ್ಕೆ ಸಿದ್ಧತೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಹರ್ಷಿ ವಾಲ್ಮೀಕಿ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಹಾಗೂ ಸಮಾಜದ ಸಂಘಟನೆಗೆ ಸಮಾಲೋಚಿಸುವುದಕ್ಕಾಗಿ ಸ್ವಂತ ‘ಸೂರು’ ಕಲ್ಪಿಸಿಕೊಡುವ ಉದ್ದೇಶದಿಂದ ಇಲ್ಲಿನ ರಾಮತೀರ್ಥನಗರದಲ್ಲಿ ₹ 3.50 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ಧರಿಸಿದೆ.

30 ಗುಂಟೆ ನಿವೇಶನದಲ್ಲಿ ದೊಡ್ಡದಾದ ಭವನ ತಲೆಎತ್ತಲಿದೆ. ಜಾಗವನ್ನು ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. ಅಂದಾಜು ವೆಚ್ಚ ₹ 2.50 ಕೋಟಿ ಮೀರಿದರೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಹೀಗಾಗಿ, ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುಮತಿ ದೊರೆತ ನಂತರ ‌ಕಾಮಗಾರಿ ಆರಂಭಿಸಲಾಗುವುದು. ಇದು ಸಾಧ್ಯವಾದಲ್ಲಿ, ಇಲ್ಲಿ ವಾಲ್ಮೀಕಿ ಸಮುದಾಯದವರಿಗೆ ತಮ್ಮದೇ ಆದ ಭವನವೊಂದು ದೊರೆತಂತಾಗುತ್ತದೆ.

ಜಿಲ್ಲಾ ಕೇಂದ್ರವಾಗಿರುವ ನಗರದಲ್ಲಿ ಈವರೆಗೂ ವಾಲ್ಮೀಕಿ ಭವನ ಇಲ್ಲ. ಪ್ರಸ್ತುತ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕೂಡ, ಕುಮಾರಗಂಧರ್ವ ರಂಗಮಂದಿರದಲ್ಲಿ ಆಯೋಜಿಸಲಾಗುತ್ತಿದೆ. ತಮಗೆ ಪ್ರತ್ಯೇಕವಾಗಿ ಸ್ಥಳಾವಕಾಶ ಕಲ್ಪಿಸಬೇಕು ಎನ್ನುವುದು ಸಮಾಜದವರ ಆಗ್ರಹವಾಗಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಿದ್ದು, ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದೆ. ಜಾಗವೂ ದೊರೆತಿದೆ. ₹ 1 ಕೋಟಿ ಬಿಡುಗಡೆಯೂ ಆಗಿದೆ.

ಅನುಕೂಲವಾಗಲೆಂದು

‘ವಾಲ್ಮೀಕಿ ಸಮಾಜದವರ ಸಂಘಟನೆ, ಸಭೆ, ಸಮಾರಂಭಗಳು ಮೊದಲಾದ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಭವನ ನಿರ್ಮಿಸಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಗ್ರಾಮಗಳಲ್ಲಿ ನಿರ್ಮಾಣಕ್ಕೆ ಹಿಂದೆ ₹ 10 ಲಕ್ಷ ಅನುದಾನ ನೀಡಲಾಗುತ್ತಿತ್ತು. 2015–16ನೇ ಸಾಲಿನಿಂದ ಇದನ್ನು ₹ 12 ಲಕ್ಷಕ್ಕೆ ಏರಿಸಲಾಗಿದೆ. ಹೋಬಳಿ ಮಟ್ಟದಲ್ಲಿ ₹ 50 ಲಕ್ಷ ಕೊಡಲಾಗುತ್ತಿದೆ. ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ₹ 3.50 ಕೋಟಿವರೆಗೂ ಅನುದಾನ ದೊರೆಯುತ್ತದೆ’ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸದಾಶಿವ ಬಡಿಗೇರ ‘ಪ‍್ರಜಾವಾಣಿ’ಗೆ ತಿಳಿಸಿದರು.

31 ಪೂರ್ಣ:

‘ಜಿಲ್ಲೆಯಲ್ಲಿ ವಾಲ್ಮೀಕಿ ಭವನಗಳ ನಿರ್ಮಾಣಕ್ಕೆ ₹ 9.88 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ ₹ 7.37 ಕೋಟಿ ಖರ್ಚಾಗಿದೆ. ವಿವಿಧ ಏಜೆನ್ಸಿಗಳಿಗೆ ನಿರ್ಮಾಣ ಜವಾಬ್ದಾರಿ ವಹಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದಲೇ ನೇರವಾಗಿ ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ನಗರದಲ್ಲೂ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘2012–13ರಿಂದ 2017–18ರವರೆಗೆ 177 ಭವನಗಳು ಮಂಜೂರಾಗಿದ್ದು, 31 ಪೂರ್ಣಗೊಂಡಿವೆ. 105 ಪ್ರಗತಿಯಲ್ಲಿವೆ. 41 ಭವನಗಳ ಕಾಮಗಾರಿ ಬಾಕಿ ಇದೆ. 2014–15ನೇ ಸಾಲಿನಲ್ಲಿ ಮಂಜೂರಾತಿ ದೊರೆತಿರಲಿಲ್ಲ. 2015–16ನೇ ಸಾಲಿನಲ್ಲಿ ಅತಿ ಹೆಚ್ಚು ಅಂದರೆ 60 ಭವನಗಳು ಮಂಜೂರಾಗಿದ್ದವು. 2017–18ನೇ ಸಾಲಿನಲ್ಲಿ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು