ಶನಿವಾರ, ಅಕ್ಟೋಬರ್ 24, 2020
18 °C
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿಕೆ

ಬಿಜೆಪಿ ಸರ್ಕಾರಕ್ಕೆ ಶಾಪ ತಟ್ಟಲಿದೆ: ಸನ್ನಾನಂದಪುರಿ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮೀಸಲಾತಿ ಹೆಚ್ಚಿಸದಿದ್ದಲ್ಲಿ ವಾಲ್ಮೀಕಿ ಸಮುದಾಯದ ಶಾಪ ಬಿಜೆಪಿ ಸರ್ಕಾರಕ್ಕೂ ತಟ್ಟಲಿದೆ’ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ರೂಪಿಸಲು ಇಲ್ಲಿ ಬುಧವಾರ ನಡೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಪಂಗಡದ ಮೀಸಲಾತಿಯಿಂದ ರಾಜ್ಯದಲ್ಲಿ 15 ಶಾಸಕರು, ಇಬ್ಬರು ಸಂಸದರು ಆಯ್ಕೆ ಆಗಿದ್ದಾರೆ. ಔದ್ಯೋಗಿಕವಾಗಿ ಮೀಸಲಾತಿಯನ್ನು ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸಬೇಕು ಎಂದು ದಶಕಗಳಿಂದ ಹೋರಾಡುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇನ್ಮುಂದೆ ನಮ್ಮನ್ನು ಯಾಮಾರಿಸಲು ಆಗುವುದಿಲ್ಲ’ ಎಂದರು.

‘ಮೀಸಲಾತಿ ಹೆಚ್ಚಿಸಲು ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಹಿಂದೇಟು ಹಾಕಿತು. ಸಮಾಜದ ಶಾಪವೇ ಆ ಸರ್ಕಾರದ ಪತನಕ್ಕೆ ಕಾರಣವಾಯಿತು. ಮೀಸಲಾತಿ ಹೆಚ್ಚಿಸುವುದಾಗಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. ಅಧಿಕಾರಕ್ಕೆ ಬಂದು ವರ್ಷ ಉರುಳಿದ್ದರೂ ಮೀಸಲಾತಿ ಹೆಚ್ಚಿಸಿಲ್ಲವೇಕೆ ಎನ್ನುವುದು ನಮ್ಮ ಪ್ರಶ್ನೆಯಾಗಿದೆ’ ಎಂದು ಹೇಳಿದರು.

‘ಬೇಡ ಸಮಾಜದ ಶಕ್ತಿ ಕಾಂಗ್ರೆಸ್, ಜೆಡಿಎಸ್‌ಗೆ ಗೊತ್ತಿದೆ. ಈ ಸರ್ಕಾರಕ್ಕೂ ತಿಳಿಸಲು ಮುಖ್ಯಮಂತ್ರಿ ಪ್ರತಿನಿಧಿಸುವ ಶಿಕಾರಿಪುರದಿಂದಲೇ ನಾನು ಸಮಾಲೋಚನೆ ಸಭೆಗೆ ಚಾಲನೆ ನೀಡಿದ್ದೇನೆ. ಅ. 20ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ 10 ದಿನ ಧರಣಿ ನಡೆಸುತ್ತೇನೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅ.31ಕ್ಕೆ ಬೆಂಗಳೂರು ಚಲೋ ಆರಂಭಿಸಲು ಸಮಾಜದವರು ಸಿದ್ಧವಾಗಬೇಕು. ನಮ್ಮ ಸಾಂವಿಧಾನಿಕ ಹಕ್ಕು ಪಡೆಯಲು ಹೋರಾಡಬೇಕು’ ಎಂದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಮಾಜ ಸಂಘಟನೆಗಾಗಿ ಪ್ರವಾಸದಲ್ಲಿದ್ದೇನೆ. ಬಿ. ಶ್ರೀರಾಮುಲು ಖಾತೆ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ಆದರೆ, ಬಿಜೆಪಿ ಸರ್ಕಾರ ವಾಲ್ಮೀಕಿ ‌ಸಮಾಜ ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗಿದೆ. ರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಂಡಿದ್ದೆವು. ಆದರೆ, ಬೇರೆಯವರಿಗೆ ಅವಕಾಶ ಕೊಟ್ಟರು’ ಎಂದು ಅಸಮಾಧಾನ ವ್ಯಕ್ತ‍ಪಡಿಸಿದರು.

‘ವಾಲ್ಮೀಕಿ ಜಯಂತಿಗೂ ಮುನ್ನ ಬೇಡಿಕೆ ಈಡೇರಬೇಕು. ಮುಖ್ಯಮಂತ್ರಿಗೆ ಮತ್ತೆ ಮನವಿ ಸಲ್ಲಿಸುತ್ತೇವೆ’ ಎಂದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು