ಬೆಳಗಾವಿ: ‘ಕೋವಿಡ್-19 ಕಾರಣದಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ. 31ರಂದು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಇಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಅಂದು ಕಿಲ್ಲಾ ಕೋಟೆ ಬಳಿ ವಾಲ್ಮೀಕಿ ಫೋಟೊಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಗುವುದು. ಕುಮಾರಗಂಧರ್ವ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮೆರವಣಿಗೆಗೆ ಅವಕಾಶ ಇರುವುದಿಲ್ಲ’ ಎಂದು ಹೇಳಿದರು.
‘ಕಾರ್ಯಕ್ರಮದಲ್ಲಿ 100ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ತಾಲ್ಲೂಕು ಮಟ್ಟದಲ್ಲೂ ಆಚರಿಸಲಾಗುವುದು. ಹೀಗಾಗಿ, ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ಜನರು ಬರದಂತೆ ಸಮಾಜದ ಮುಖಂಡರು ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಮಾಸ್ಕ್, ಸಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಉಪನ್ಯಾಸಕರನ್ನು ಕರೆಸಲಾಗುವುದು. ಗೊಂದಲಕ್ಕೆ ಆಸ್ಪದ ನೀಡದೆ ಮಾರ್ಗಸೂಚಿ ಪಾಲನೆಗೆ ಸಹಕರಿಸಬೇಕು’ ಎಂದರು.
‘ಪಂಚಾಯತಿ ಮಟ್ಟದಲ್ಲೂ ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡರಯ ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ., ಡಿಸಿಪಿ ವಿಕ್ರಂ ಅಮಟೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಟಗುಂಟಿ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್., ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.