ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೇಸ್ ಮಾರ್ಕ್ಸ್ ನೀಡಿದರೂ ಪಾಸಾಗದ ಸರ್ಕಾರ: ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ

Published 20 ಮೇ 2024, 14:37 IST
Last Updated 20 ಮೇ 2024, 14:37 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ಯಾವ ದೃಷ್ಟಿಯಿಂದ ನೋಡಿದರೂ ರಾಜ್ಯದ ಜನಜೀವನಕ್ಕೆ ತೊಂದರೆಯಾಗಿದೆ. ಎಲ್ಲ ವಿಭಾಗಗಳಲ್ಲಿ ಶೇ 100 ವಿಫಲ ಆಡಳಿತ ನಡೆಸಿದೆ. ಗ್ರೇಸ್ ಮಾರ್ಕ್ಸ್ ಕೊಟ್ಟರೂ ಪಾಸಾಗದ ಸರ್ಕಾರವಿದು’ ಎಂದು ಉತ್ತರ ಕನ್ನಡ ಲೋಕಸಭೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ ಮಾಡಿದರು.

ಇಲ್ಲಿಯ ಬಿಜೆಪಿ ಕಚೇರಿಗೆ ಮತದಾನೋತ್ತರ ಅವಲೋಕನ ಸಭೆ ನಡೆಸಲು ಸೋಮವಾರ ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಸಂವಿಧಾನ ಬದ್ಧವಾಗಿ ಆಡಳಿತ ನಡೆಸುವುದು ಸರ್ಕಾರದ ಮೊದಲ ಜವಾಬ್ದಾರಿ ಆಗಬೇಕು. ಆದರೆ ಇಲ್ಲಿ ಹಾಗಾಗುತ್ತಿಲ್ಲ. 490 ಕೊಲೆಗಳಾಗಿವೆ, ಸಾವಿರಾರು ದರೋಡೆಗಳು ಪ್ರಕರಣ ನಡೆದಿವೆ. ರಾಜ್ಯದ ಉದ್ದಗಲಕ್ಕೂ ಶಾಂತಿ ಮತ್ತು ಸುವ್ಯವಸ್ಥೆ ಹಾಳಾಗಿದೆ. ಜನರ ಆಸ್ತಿ ಮತ್ತು ಜೀವರಕ್ಷಣೆಗೆ ಈ ಸರ್ಕಾರದಲ್ಲಿ ಗ್ಯಾರಂಟಿಯೇ ಇಲ್ಲದಂತಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ರಾಷ್ಟ್ರದ್ರೋಹಿಗಳು ಮತ್ತು ಅಪರಾಧ ಮನಸ್ಥಿತಿ ಉಳ್ಳವರಿಗೆ ನಮ್ಮ ಸರ್ಕಾರ ಬಂದಿದೆ ಎನಿಸಿದೆ. ಈ ಹಿನ್ನೆಲೆಯಲ್ಲಿಯೇ ಇವೆಲ್ಲ ಘಟನೆಗಳು ನಡೆಯುತ್ತಿವೆ. ಇದಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯ ನಡವಳಿಕೆಯೇ ಕಾರಣ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಬರಗಾಲ ಇಲ್ಲ ಎಂಬ ವರ್ತನೆ ರಾಜ್ಯ ಸರ್ಕಾರದ್ದಾಗಿದೆ. ಬರದ ಪೂರ್ಣ ಅರಿವಿಲ್ಲ. ಅಧಿಕಾರ ಹಂಚಿಕೆಯ ಚರ್ಚೆ, ಜಿಜ್ಞಾಸೆಯಲ್ಲಿ ಸಿಎಂ, ಡಿಸಿಎಂ ಇದ್ದಾರೆ’ ಎಂದರು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ಕಿತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ 25,000ಕ್ಕೂ ಹೆಚ್ಚು ಮತಗಳು ವಿಶ್ವೇಶ್ವರಿ ಹೆಗಡೆ ಕಾಗೇರಿ ಅವರಿಗೆ ಸಿಗುತ್ತವೆ. ಅವರ ಗೆಲುವು ನಿಶ್ಚಿತ ಎಂದರು.

ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಮುಖಂಡರಾದ ಸಂದೀಪ ದೇಶಪಾಂಡೆ, ಚನಬಸಪ್ಪ ಮೊಕಾಶಿ, ಬಸವರಾಜ ಮಾತನವರ ಇದ್ದರು.

‘ಮುಹೂರ್ತ ನೋಡಿ ಹೆಬ್ಬಾರ ಪಕ್ಷ ಬಿಡಲಿ’

‘ಬಿಜೆಪಿ ಅಭ್ಯರ್ಥಿ ಪರ ಚುನಾವಣೆಯಲ್ಲಿ ಕೆಲಸ  ಮಾಡದ ಶಾಸಕ ಶಿವರಾಂ ಹೆಬ್ಬಾರ ಅವರು ಮುಹೂರ್ತ ನೋಡಿ ಬಿಜೆಪಿಯನ್ನು ತೊರೆಯಬೇಕು’ ಎಂದು ಉತ್ತರ ಕನ್ನಡ ಲೋಕಸಭೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ‘ಜನರನ್ನೂ ಗೊಂದಲದಲ್ಲಿ ಇಡಬಾರದು ಅವರೂ ಗೊಂದಲದಲ್ಲಿರಬಾರದು. ವ್ಯವಸ್ಥೆಯಲ್ಲಿ ಹಗುರವಾಗಿ ನಡೆದುಕೊಳ್ಳಬಾರದು. ಅವರಿಗೆ ಬಿಜೆಪಿ ಒಪ್ಪಿಗೆ ಆಗಿಲ್ಲ. ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕು’ ಎಂದರು. ‘ಉತ್ತರ ಕನ್ನಡ ಲೋಕಸಭೆ ಸದಸ್ಯ ಅನಂತಕುಮಾರ ಹೆಗಡೆ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಾರೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಬರುತ್ತಾರೆ ಎಂದು ವಿಶ್ವಾಸ ಇಟ್ಟಿದ್ದೆವು ಹಾಗಾಗಲಿಲ್ಲ. ಅವರಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ತೊಂದರೆ ಆಗುವುದಿಲ್ಲ. ಪಕ್ಷದ ಕಾರ್ಯಕರ್ತರ ದೊಡ್ಡ ಪಡೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT