ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು: ಎಂಜಿನಿಯರಿಂಗ್‌ ಜೊತೆ ಸಂಗೀತ, ಯೋಗ

ವಿಟಿಯು: ಮುಖ್ಯ ಪದವಿ ಜೊತೆ ‘ಉಪ ಪದವಿ’
Last Updated 12 ಆಗಸ್ಟ್ 2021, 7:20 IST
ಅಕ್ಷರ ಗಾತ್ರ

ಬೆಳಗಾವಿ: ಎಂಜಿನಿಯರಿಂಗ್‌ನ ಮುಖ್ಯ ಪದವಿಯೊಂದಿಗೆ ‘ಉಪ ಪದವಿ’ (ಮೈನರ್ ಡಿಗ್ರಿ) ಕೋರ್ಸ್‌ಗಳನ್ನು ಪರಿಚಯಿಸಲು ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಯೋಜಿಸಿದೆ.

ಎಂಜಿನಿಯರಿಂಗ್‌ (ಬಿಇ) ಕೋರ್ಸ್‌ಗಳ ಜೊತೆಗೆ ಸಂಗೀತ, ಯೋಗ, ಲಲಿತಕಲೆ, ಭೂಗೋಳ ವಿಜ್ಞಾನ, ಕನ್ನಡ ಸಾಹಿತ್ಯ, ಬೌದ್ಧಿಕ ಆಸ್ತಿ ಹಕ್ಕು, ಸಮಾಜವಿಜ್ಞಾನ, ಇತಿಹಾಸ, ರಾಜಕೀಯವಿಜ್ಞಾನ, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್‌, ಸಾಮಾಜಿಕ ಎಂಜಿನಿಯರಿಂಗ್‌, ಸೈಬರ್‌ ಕ್ರೈಂ ಮೊದಲಾದ ಕೋರ್ಸ್‌ಗಳನ್ನು ತೆಗೆದುಕೊಂಡು ಉತ್ತೀರ್ಣರಾಗುವ ಮೂಲಕ ಹೆಚ್ಚುವರಿಯಾಗಿ ಪದವಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

ಬಿ.ಇ 4ನೇ ಸೆಮಿಸ್ಟರ್ ಮುಗಿಸಿ ವಿಶ್ವವಿದ್ಯಾಲಯದಿಂದ ನಿರ್ದಿಷ್ಟ ಅಂಕಗಳನ್ನು ಗಳಿಸಿದವರಿಗೆ ಉಪ ಪದವಿಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ತಮ್ಮ ಆಸಕ್ತಿಯ ಹಾಗೂ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ವಿಷಯ ತೆಗೆದುಕೊಳ್ಳಬಹುದು. ಆಯಾ ಕಾಲೇಜಿನಲ್ಲಿ ಸೌಲಭ್ಯವಿದ್ದರೆ ಅಲ್ಲೇ ಪರೀಕ್ಷೆ ಎದುರಿಸಬಹುದು ಅಥವಾ ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಬಹುದು. ಈ ಸಂಬಂಧ ಪ್ರಸ್ತಾವ ಸಿದ್ಧಪಡಿಸಲಾಗಿದ್ದು, ಅದನ್ನು ಅನುಮೋದನೆಗಾಗಿ ರಾಜ್ಯ ಉನ್ನತ ಶಿಕ್ಷಣ ಸಂಶೋಧನಾ ಪರಿಷತ್‌ಗೆ ಕಳುಹಿಸಲಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಇದನ್ನು ಪರಿಚಯಿಸುವ ಉದ್ದೇಶ ವಿಶ್ವವಿದ್ಯಾಲಯದ್ದಾಗಿದೆ.

ನಾಲ್ಕು ಸೆಮಿಸ್ಟರ್ ಮುಗಿಸಿದವರು ತಮ್ಮ ಮುಖ್ಯ ಪದವಿಯ ವಿಷಯಗಳೊಂದಿಗೆ, ತಮ್ಮ ಆಸಕ್ತಿಯ ಇತರ ವಿಷಯದ ಆರು ಪತ್ರಿಕೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಇದರೊಂದಿಗೆ ಏಕಕಾಲದಲ್ಲಿ ಎರಡು ಪದವಿ ಪಡೆಯಬಹುದಾಗಿದೆ.

‘ಪ್ರತಿ ಬ್ರಾಂಚ್‌ನಲ್ಲೂ ಅವಕಾಶ ಇರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಕೌಶಲ ಹೊಂದಿದ ‘ಬಹುಶಿಸ್ತೀಯ ಅಧ್ಯಯನ ಸಂಪನ್ಮೂಲ ಪದವೀಧರ’ರನ್ನು ತಯಾರಿಸಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಹೆಚ್ಚುವರಿ ವಿಷಯಗಳ ಕಲಿಕೆಗೆ ಅನುವು ಮಾಡಿಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಅವರವರ ಆಸಕ್ತಿಯ ವಿಷಯಗಳನ್ನು ಅಭ್ಯಾಸ ಮಾಡಬಹುದಾಗಿದೆ’ ಎಂದು ಕುಲಪತಿ ಡಾ.ಕರಿಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೇರ್ಗಡೆಯಾದವರಿಗೆ ಪದವಿಯೊಂದಿಗೆ ಹೆಚ್ಚುವರಿಯಾಗಿ ಅಭ್ಯಸಿಸಿದ ಪದವಿಯನ್ನೂ ನೀಡಲಾಗುವುದು. ಸಾಮಾನ್ಯ ಪದವಿಯೊಂದಿಗೆ ಹೆಚ್ಚುವರಿ ವಿಷಯ ಜ್ಞಾನ ಇದ್ದವರಿಗೆ ಔದ್ಯೋಗಿಕ ಜಗತ್ತಿನಲ್ಲಿ ಹೆಚ್ಚಿನ ಮೌಲ್ಯವಿರುತ್ತದೆ. ಸಂಬಂಧಿಸಿದ ವೃತ್ತಿಯಲ್ಲಿ ಹೆಚ್ಚುವರಿ ತರಬೇತಿ ಪಡೆಯುವ ಅವಶ್ಯಕತೆ ಇರುವುದಿಲ್ಲ. ಕೌಶಲ ಉಳ್ಳವರಿಗೆ ಅಥವಾ ಬಹುಶಿಸ್ತೀಯ ಜ್ಞಾನ ಇರುವವರಿಗೆ ಕೈಗಾರಿಕೆಗಳು ಹೆಚ್ಚಿನ ಒತ್ತು ಕೊಡುತ್ತವೆ. ಇದರಿಂದ ಪದವೀಧರರು ಉತ್ತಮ ಅವಕಾಶಗಳನ್ನು ಕಂಡುಕೊಳ್ಳುವುದಕ್ಕೂ ನೆರವಾಗಲಿದೆ’ ಎನ್ನುತ್ತಾರೆ ಅವರು.

ಸಮಗ್ರವಾಗಿ ರೂಪಿಸಲು

ಕೈಗಾರಿಕೆ ಹಾಗೂ ಔದ್ಯೋಗಿಕ ಜಗತ್ತಿನ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಮಗ್ರವಾಗಿ ರೂಪಿಸುವ ಉದ್ದೇಶ ಈ ಉಪಕ್ರಮದ್ದಾಗಿದೆ. ಆನ್‌ಲೈನ್‌ ವೇದಿಕೆಯ ಅವಕಾಶವನ್ನೂ ಈ ಮೂಲಕ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು.

–ಡಾ.ಕರಿಸಿದ್ದಪ್ಪ, ಕುಲಪತಿ, ವಿಟಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT