ಸೋಮವಾರ, ಆಗಸ್ಟ್ 8, 2022
22 °C
ಕೆಲವೇ ದಿನಗಳ ಅಂತರದಲ್ಲಿ ‘ಆಸರೆ’ ಕಳೆದುಕೊಂಡರು

ಅಪ್ಪ–ಅಮ್ಮನ ಅಪೇಕ್ಷೆಯಂತೆ ಓದುತ್ತೇವೆ...

ಪ್ರಸನ್ನ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಖಾನಾಪುರ (ಬೆಳಗಾವಿ ಜಿಲ್ಲೆ): ಇನ್ನೇನು ವಿದ್ಯಾಭ್ಯಾಸ ಮುಗಿದು ಬದುಕು ಕಟ್ಟಿಕೊಳ್ಳಬೇಕೆಂಬ ಹೊತ್ತಿನಲ್ಲೇ ಕೋವಿಡ್‌–19ನಿಂದಾಗಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಲ್ಲಿ ಅನಾಥಭಾವ ಆವರಿಸಿದೆ.

ಕೆಲವೇ ದಿನಗಳ ಅಂತರದಲ್ಲಿ ತಮ್ಮ ಹೆತ್ತವರು ತೀರಿಹೋದ ಕಾರಣ ಈಗ ತಮ್ಮ ಬಂಧುಗಳ ಆಸರೆಯಲ್ಲಿ ಬೆಳೆಯುತ್ತಿದ್ದಾರೆ.

ತಾಲ್ಲೂಕಿನ ಹಿರೇಮುನವಳ್ಳಿ ಗ್ರಾಮದ ದಂಪತಿ ಸಂಗನಗೌಡ ಪಾಟೀಲ ಮತ್ತು ಮಂಜುಳಾ ಕಳೆದ ತಿಂಗಳು ಕೋವಿಡ್ ಸೋಂಕಿನಿಂದಾಗಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಸಂಗನಗೌಡ ಅವರು ತಾಲ್ಲೂಕಿನ ಪಾರಿಶ್ವಾಡ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದರು. ಅವರ ಪತ್ನಿ ಮಂಜುಳಾ ತಾಲ್ಲೂಕಿನ ಅವರೊಳ್ಳಿ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಏ.17ರಂದು ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕರ್ತವ್ಯ ನಿರ್ವಹಿಸಿದ್ದ ಮಂಜುಳಾ, ಮರಳಿದ ಬಳಿಕ ಅಸ್ವಸ್ಥರಾಗಿದ್ದರು. ವೈದ್ಯಕೀಯ ಪರೀಕ್ಷೆಯ ಬಳಿಕ ಅವರಲ್ಲಿ ಕೋವಿಡ್-19 ಪಾಸಿಟಿವ್ ಸೊಂಕು ಧೃಡಪಟ್ಟಿತ್ತು.

ಅವರೊಂದಿಗೆ ಸಂಪರ್ಕ ಹೊಂದಿದ್ದ ಕಾರಣ ಅವರ ಪತಿಯನ್ನೂ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲೂ ಸೋಂಕು ಧೃಡಪಟ್ಟಿತ್ತು. ಇಬ್ಬರೂ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಒಂದು ವಾರದ ಅಂತರದಲ್ಲಿ ನಿಧನರಾದರು.

ಸಂಗನಗೌಡ-ಮಂಜುಳಾ ದಂಪತಿ ಹಿರಿಯ ಮಗಳು ಶ್ವೇತಾ ಅವರಿಗೆ ಮದುವೆಯಾಗಿ ಪತಿಯ ಮನೆಯಲ್ಲಿದ್ದಾರೆ. ದ್ವಿತೀಯ ಪುತ್ರಿ ನಯನಾ (22) ಪದವಿ ಪೂರೈಸಿದ್ದು, 3ನೇ ಮಗ ವಿಜಯ (17) ಪಿಯು ಓದುತ್ತಿದ್ದಾರೆ. ಹೆತ್ತವರ ಜೊತೆ ಇದ್ದು ತಮ್ಮ ಭವಿಷ್ಯದ ಬಗ್ಗೆ ಅಪಾರ ಕನಸನ್ನು ಹೊಂದಿ ಶಿಕ್ಷಣ ಪಡೆಯುತ್ತಿದ್ದ ನಯನಾ ಮತ್ತು ವಿಜಯ ಅವರೀಗ ಹೆತ್ತವರ ಅಕಾಲಿಕ ನಿಧನದಿಂದ ಅತಂತ್ರರಾಗಿದ್ದಾರೆ. ಹಿರಿಯ ಪುತ್ರಿ ಶ್ವೇತಾ ತಮ್ಮ ತಂಗಿ-ತಮ್ಮನ ಪಾಲನೆ-ಪೋಷಣೆಯನ್ನು ಕೈಗೆತ್ತಿಕೊಂಡು ಹೆತ್ತವರ ಸ್ಥಾನ ತುಂಬುವ ಪ್ರಯತ್ನ ಕೈಗೊಂಡಿದ್ದಾರೆ.

‘ಒಂದು ವಾರದ ಅಂತರದಲ್ಲಿ ನಮ್ಮ ತಂದೆ-ತಾಯಿ ತೀರಿಹೋದ ಬಳಿಕ ನಮ್ಮ ಅಕ್ಕ-ಭಾವ ನಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ನಮ್ಮ ಚಿಕ್ಕಪ್ಪ-ದೊಡ್ಡಪ್ಪ, ಚಿಕ್ಕಮ್ಮ-ದೊಡ್ಡಮ್ಮ, ಸೋದರ ಮಾವ ಹಾಗೂ ಅತ್ತೆ ಸೇರಿದಂತೆ ಇಡೀ ಬಂಧು-ಬಳಗ ನಮ್ಮ ಬೆಂಬಲಕ್ಕೆ ನಿಂತಿದೆ. ಎಲ್ಲರ ಸಾಂತ್ವನದ ಮಾತುಗಳಿಂದಾಗಿ ಹೆತ್ತವರ ಅಗಲಿಕೆಯ ದುಃಖ ಮರೆಯುವ ಪ್ರಯತ್ನ ಮಾಡುತ್ತಿದ್ದೇವೆ. ಅಪ್ಪ-ಅಮ್ಮನ ಅಪೇಕ್ಷೆಯಂತೆ ಇನ್ನೂ ಚೆನ್ನಾಗಿ ಓದಿ ವಿದ್ಯಾವಂತರಾಗಿ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತೇವೆ’ ಎಂದು ನಯನಾ ಹಾಗೂ ವಿಜಯ ಹೇಳುವಾಗ ಅವರ ಕಣ್ಣಾಲಿಗಳು ತುಂಬಿಬಂದಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು