ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನಡೆಯದ ‘ಸ್ವೀಪ್’ ಚಟುವಟಿಕೆಗಳು!

ಮತದಾನ ಪ್ರಮಾಣದ ಮೇಲೆ ಪರಿಣಾಮ ಸಾಧ್ಯತೆ
Last Updated 31 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತದಾನ ಸೆ.3ರಂದು ನಡೆಯಲಿದೆ. ಆದರೆ, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಚಟುವಟಿಕೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಹಮ್ಮಿಕೊಳ್ಳದಿರುವುದು ಅಚ್ಚರಿ ಮೂಡಿಸಿದೆ.

ಹಿಂದಿನ ಪ್ರತಿ ಚುನಾವಣೆಗಳಲ್ಲೂ ಸಂಬಂಧಿಸಿದ ಸ್ವೀಪ್ ಸಮಿತಿಯು ಜಾಥಾ, ಬೀದಿನಾಟಕ, ಮೊಂಬತ್ತಿ ಮರವಣಿಗೆ, ಪ್ರಬಂಧ ಸ್ಪರ್ಧೆ, ಸೈಕಲ್ ಜಾಥಾ, ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ನಡೆಸುತ್ತಿತ್ತು. ಅರ್ಹರನ್ನೆಲ್ಲಾ ಮತದಾನ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುವುದು ಮತ್ತು ಮತದಾನ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳುವುದು ಚಟುವಟಿಕೆಗಳ ಉದ್ದೇಶವಾಗಿತ್ತು. ಆದರೆ, ಈ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ‘ಸ್ವೀಪ್‌’ ಕೆಲಸಗಳು ನಡೆದಿಲ್ಲ.

ಚುನಾವಣೆಯಲ್ಲಿ ಅಭ್ಯರ್ಥಿಗಳು, ಬೆಂಬಲಿಗರು, ಕಾರ್ಯಕರ್ತರು ಪ್ರಚಾರ ನಡೆಸಿ ಮತ ಯಾಚಿಸುತ್ತಿದ್ದರೆ ಇನ್ನೊಂದೆಡೆ ಆಡಳಿತ ವ್ಯವಸ್ಥೆಯು ಮತದಾನಕ್ಕೆ ಬನ್ನಿ ಎಂದು ಕೋರುತ್ತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಪಕ್ಷಗಳಿಂದ ಮತಕ್ಕಾಗಿ ಪ್ರಚಾರವಷ್ಟೆ ನಡೆದಿದೆ.

ಪ್ರಯತ್ನ ನಡೆಯಲಿಲ್ಲ:ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ತಮ್ಮ ಚಿಹ್ನೆಯಲ್ಲಿ ಅಭ್ಯರ್ಥಿಗಳು ಹಾಕಿದ್ದು, ವ್ಯಾಪಕ ಪ್ರಚಾರ ನಡೆಸುತ್ತಿವೆ. ಮತದಾರರನ್ನು ಮತಗಟ್ಟೆಗೆ ಕರೆತರುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನ ನಡೆಸಿಲ್ಲ. ಈ ನಡುವೆ, ಪೊಲೀಸರು ಪ್ರತಿ ‍ಪೊಲೀಸ್ ಠಾಣೆ ವ್ಯಾ‍ಪ್ತಿಯಲ್ಲೂ ಪಥಸಂಚಲನ ನಡೆಸಿ ಧೈರ್ಯ ತುಂಬಿದ್ದಾರೆ.

58 ವಾರ್ಡ್‌ಗಳ ವಿಶಾಲವಾದ ವ್ಯಾಪ್ತಿ ಒಳಗೊಂಡಿರುವ ಮಹಾನಗರಪಾಲಿಕೆಯು ಕೆಲವು ‘ಹಳ್ಳಿಗಳ ಮಾದರಿ’ ಬಡಾವಣೆಗಳನ್ನು ಒಳಗೊಂಡಿದೆ. ಒಟ್ಟು 4,31,383 ಮತದಾರರಿದ್ದು, 13 ಉಪ ಮತಗಟ್ಟೆಗಳು ಸೇರಿದಂತೆ ಒಟ್ಟಾರೆ 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ವ್ಯಾಪ್ತಿಯಲ್ಲಿ ‘ಸ್ವೀಪ್‌’ ಚಟುವಟಿಕೆಗಳು ನಡೆದೇ ಇಲ್ಲ. ಸಾಮಾನ್ಯವಾಗಿ ಮತದಾನ ದಿನವನ್ನು ವಾರಾಂತ್ಯದಲ್ಲಿ ನಿಗದಿಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಶುಕ್ರವಾರ ಮತದಾನ ನಿಗದಿಯಾಗಿದೆ. ಹೀಗಾಗಿ, ಹೆಚ್ಚಿನ ಮತದಾರರು ಮತಗಟ್ಟೆಗಳತ್ತ ಬರುವುದು ಅನುಮಾನ ಎನ್ನುವಂತಹ ಪರಿಸ್ಥಿತಿ ಇದೆ. ಅಲ್ಲದೇ, ಅಂದು ರಜೆ ಇರುತ್ತದೆಯೋ ಇಲ್ಲವೋ ಎನ್ನುವುದನ್ನೂ ಚುನಾವಣಾ ಆಯೋಗ ಘೋಷಿಸಿಲ್ಲ.

ದೂರವೇ ಉಳಿದಿದ್ದರು
ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಗರದ ಮತದಾರರಿಂದ ಸಮಾಧಾನಕರ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಆಗಲೂ ಕೋವಿಡ್ ಸಾಂಕ್ರಾಮಿಕ ಭೀತಿಯ ಪರಿಸ್ಥಿತಿ ಇತ್ತು; ಈಗಲೂ ಇದೆ. ಆ ಸೋಂಕಿನ ಭೀತಿಯಿಂದಾಗಿ ಬಹಳಷ್ಟು ಮಂದಿ ಮತಗಟ್ಟೆಗಳಿಂದ ದೂರ ಉಳಿದಿದ್ದರು. ಇದು ಪಾಲಿಕೆ ಚುನಾವಣೆಯ ಮೇಲೂ ಸಾಧ್ಯತೆ ಬೀರುವ ಸಾಧ್ಯತೆಗಳಿವೆ.

‘ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯನ್ನು ಕೋವಿಡ್ ಭೀತಿಯ ನಡುವೆಯೇ ನಡೆಸಲಾಯಿತು. ಆಗ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕರು ಸೇರಿದಂತೆ ಹಲವು ನೌಕರರು ಸೋಂಕಿನಿಂದ ಸಾವಿಗೀಡಾದರು. ಈಗ ಕೋವಿಡ್ 3ನೇ ಅಲೆ ಭೀತಿ ಇರುವಾಗ ಪಾಲಿಕೆ ಚುನಾವಣೆ ನಡೆಯುತ್ತಿದೆ. ಇದು ನೌಕರರು ಮತ್ತು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ತಳ್ಳಿ ಹಾಕುವಂತಿಲ್ಲ’ ಎನ್ನುತ್ತಾರೆ ಜಿಲ್ಲಾ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಆರ್. ಲಾತೂರ.

‘ನಗರದ ಕೆಲವು ಮತದಾರರು ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಮೀರಜ್, ಪುಣೆ, ಮುಂಬೈ ಮೊದಲಾದ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮತ ಹಕ್ಕು ಚಲಾಯಿಸಲು ನಗರಕ್ಕೆ ಬರಬೇಕಾಗುತ್ತದೆ. ಆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿವೆ. ಅಲ್ಲಿಂದ ಜನರು ಇಲ್ಲಿಗೆ ಬಂದರೆ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ. ಬಾರದಿದ್ದರೆ ಮತದಾನ ಪ್ರಮಾಣ ಕುಸಿಯಲಿದೆ. ಕೋವಿಡ್ ನೆಗೆಟಿವ್ ವರದಿ ಇಲ್ಲ ಎಂಬ ಕಾರಣಕ್ಕೆ ಅವರು ಬಾರದಿದ್ದರೆ ಹಕ್ಕಿನಿಂದ ವಂಚಿತವಾಗಬೇಕಾಗುತ್ತದೆ’ ಎಂದು ಹೇಳಿದರು.

ದೊಡ್ಡ ಮಟ್ಟದಲ್ಲಿ ನಡೆದಿಲ್ಲ
ಸ್ಥಳೀಯ ಸಂಸ್ಥೆ ಚುನಾವಣೆಯಾದ್ದರಿಂದ ಸ್ವೀಪ್ ಚಟುವಟಿಕೆಗಳನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಂಡಿಲ್ಲ. ಆಯಾ ವಾರ್ಡ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಸಿದ್ದಾರೆ.
–ಎಂ.ಜಿ. ಹಿರೇಮಠ, ಜಿಲ್ಲಾ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT