ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಮ್ಸ್‌ ಅಧಿಕಾರಿಗಳಿಗೆ ಚಿಕಿತ್ಸೆ ಕೊಡಿಸುತ್ತೇನೆ: ಅವ್ಯವಸ್ಥೆ ಬಗ್ಗೆ ಸವದಿ ಗರಂ

ಜಿಲ್ಲಾಸ್ಪತ್ರೆ ಅವ್ಯವಸ್ಥೆ: ಡಿಸಿಎಂ ಸವದಿ ಗರಂ
Last Updated 29 ಮೇ 2021, 9:12 IST
ಅಕ್ಷರ ಗಾತ್ರ

ಬೆಳಗಾವಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಇಲ್ಲಿನ ಜಿಲ್ಲಾಸ್ಪತ್ರೆ (ಬಿಮ್ಸ್)ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಪಿಪಿಇ ಉಡುಪು ಧರಿಸಿ ಕೋವಿಡ್ ವಾರ್ಡ್‌ಗೆ ಹೋಗಿದ್ದ ಅವರು ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳ ‌ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಶುಚಿತ್ವ ಇಲ್ಲದಿರುವುದನ್ನು ಕಂಡು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಕೂಡಲೇ ವ್ಯವಸ್ಥೆ ಸರಿಪಡಿಸಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು. ಸೋಂಕಿತರಿಗೆ ಪೌಷ್ಟಿಕ ಆಹಾರ ನೀಡಬೇಕು’ ಎಂದು ತಾಕೀತು ಮಾಡಿದರು.

ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಹಸ್ತಾಂತರಿಸದೆ ಕೋವಿಡ್ ವಾರ್ಡ್‌ನಲ್ಲೇ ಇಡಲಾಗಿತ್ತು. ಇದನ್ನು ಗಮನಿಸಿದ ಸವದಿ, ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.

ಸೋಂಕಿತರನ್ನು ಮಾತನಾಡಿಸಿ ಧೈರ್ಯ ತುಂಬಿದರು. ‘ಚಿಕಿತ್ಸೆ ಫಲಕಾರಿಯಾಗಲಿದ್ದು, ಯಾರೂ ಎದೆಗುಂದಬಾರದು. ಬೇಗ ಗುಣಮುಖರಾಗಿ ಬನ್ನಿ’ ಎಂದು ಹಾರೈಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೂರುಗಳ ಹಿನ್ನೆಲೆಯಲ್ಲಿ ಪ್ರತ್ಯಕ್ಷವಾಗಿ ವೀಕ್ಷಿಸುವುದಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಐಸಿಯು, ಕೋವಿಡ್ ಹಾಗೂ ನಾರ್ಮಲ್‌ ವಾರ್ಡ್‌ಗಳಿಗೆ ಭೇಟಿ ನೀಡಿದ್ದೆ. ದುರಸ್ತಿ ಮಾಡಬೇಕಾಗಿದೆ. ಅಲ್ಲಿನ ವ್ಯವಸ್ಥೆ ಬಗ್ಗೆ ಸಮಾಧಾನವಾಗಿಲ್ಲ. ದಪ್ಪ ಚರ್ಮದ ಅಧಿಕಾರಿಗಳಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಹಿಂದೊಮ್ಮೆ ಸೂಚನೆ ಕೊಟ್ಟಿದ್ದೆ. ಆದರೆ, ಆ ಭಾಷೆ ಅವರಿಗೆ ಬಹುತೇಕ ನಾಟಿಲ್ಲ ಎನಿಸುತ್ತದೆ’ ಎಂದರು.

ಎಲ್ಲವೂ ಸರಿ ಇಲ್ಲ:

ಮುಖ್ಯಮಂತ್ರಿ ಜೊತೆ ವಿಡಿಯೊ ಕಾನ್ಫರೆನ್ಸ್ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸವದಿ, ‘ಬಿಮ್ಸ್‌ನಲ್ಲಿ ಸಮನ್ವಯದ ಕೊರತೆ ಇದೆ. ಇಲ್ಲಿ ಎಲ್ಲವೂ ಸರಿ ಇಲ್ಲ. ಇಲ್ಲಿನ ಅಧಿಕಾರಿಗಳು ತಮ್ಮದೇ ಲೋಕದಲ್ಲಿ ತೇಲಾಡುತ್ತಿದ್ದಾರೆ. ಆ ಲೋಕದಿಂದ ಅವರನ್ನು ಕೆಳಗಿಳಿಸುತ್ತೇನೆ’ ಎಂದು ಸವದಿ ಹೇಳಿದರು.

‘ಅಲ್ಲಿ ರೋಗಿಗಳಿಗೆ ಅನೇಕ ತೊಂದರೆ ಆಗಿದೆ. ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ ಎನ್ನುವುದನ್ನೂ ಕೇಳಿದ್ದೇನೆ. ಈ ಆಸ್ಪತ್ರೆಯಲ್ಲಿರುವುದುಐಸಿಯು ಅಲ್ಲವೇ ಅಲ್ಲ. ರೋಗಿಗಳ ಕಡೆಯವರೂ ಕೂಡ ಇದ್ದರು. ಹಾಸಿಗೆ ಮೇಲೆ ಸೀರೆ, ಚಾದರ ಒಣ ಹಾಕಿದ್ದರು. ಬಟ್ಟೆಯ ಗಂಟು ಇಟ್ಟುಕೊಂಡು ಕುಳಿತಿದ್ದರು. ಹೀಗಾಗಿ, ಅದು ಐಸಿಯು ಅಲ್ಲ; ನನಗೆ ಬೇರೆ ರೀತಿಯೇ ಎನಿಸುತ್ತದೆ’ ಎಂದು ತಿಳಿಸಿದರು.

‘ಕಪ್ಪು ಶಿಲೀಂಧ್ರದ ಬಗ್ಗೆ ಅಲ್ಲಿನವರು ಹಾಗೂ ಡಿಎಚ್‌ಒ ಮಾಹಿತಿಗೆ ವ್ಯತ್ಯಾಸವಿದೆ. 700ಕ್ಕೂ ಹೆಚ್ಚು ಹಾಸಿಗೆ ಹೊಂದಿರುವ ಈ ಆಸ್ಪತ್ರೆಯನ್ನು ನಾವು ಸರಿಪಡಿಸಿದರೆ, ಖಾಸಗಿ ಆಸ್ಪತ್ರೆಗಳ ಅಗತ್ಯ ನಮಗೆ ಬರುವುದಿಲ್ಲ. ಎಲ್ಲೆಲ್ಲಿ ಯಾರ‍್ಯಾರಿಗೆ ಚಿಕಿತ್ಸೆ ಕೊಡಿಸಬೇಕೋ ಕೊಡಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ, ಆರೋಗ್ಯ ಸಚಿವರು ಮತ್ತು ಜಿಲ್ಲೆಯ ಸಚಿವರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಭೇಟಿಯಾಗಿ ಜಿಲ್ಲೆಯ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು ಎಲ್ಲವನ್ನೂ ಸರಿಪಡಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT