ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಅಧಿವೇಶನ: ನಿತ್ಯ 5ಸಾವಿರ ಮಂದಿಗೆ ಊಟೋಪಹಾರ

₹ 1.62 ಕೋಟಿ ವೆಚ್ಚವಾಗುವ ಅಂದಾಜು
Last Updated 11 ಡಿಸೆಂಬರ್ 2021, 12:36 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇದೇ 13ರಿಂದ ಆರಂಭವಾಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು, ಸಿಬ್ಬಂದಿ, ಪತ್ರಕರ್ತರು ಹಾಗೂ ಚಾಲಕರಿಗೆ ಊಟೋಪಹಾರ ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಿತ್ಯ 5ಸಾವಿರ ಮಂದಿಗೆ (ಪೊಲೀಸರನ್ನು ಹೊರತುಪಡಿಸಿ, ಅವರಿಗೆ ಇಲಾಖೆಯಿಂದ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ) ಉಪಾಹಾರ ಹಾಗೂ ಊಟ ನೀಡಲಾಗುವುದು. ಇದಕ್ಕಾಗಿ ಸುವರ್ಣ ವಿಧಾನಸೌಧವೊಂದರಲ್ಲೇ 400 ಮಂದಿ ಕೇಟರಿಂಗ್‌ನವರು ಕಾರ್ಯನಿರ್ವಹಿಸಲಿದ್ದಾರೆ.

ಮುಖ್ಯಮಂತ್ರಿ, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಅಧಿಕಾರಿಗಳು, ಸಚಿವಾಲಯದ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಊಟೋಪಹಾರದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಅಲ್ಲಿ ಊಟ ಒದಗಿಸಲಾಗುವುದು. ರಾತ್ರಿ ಊಟವನ್ನು ಅವರಿಗೆ ವಾಸ್ತವ್ಯ ಕಲ್ಪಿಸಿರುವ ಸ್ಥಳದಲ್ಲಿ ನೀಡಲಾಗುವುದು. ಒಟ್ಟು ಐದು ಸ್ಥಳಗಳಲ್ಲಿ ವ್ಯವಸ್ಥೆ ಇರುತ್ತದೆ. ಮೇಲುಸ್ತುವಾರಿಗೆ ‘ಕಾಡಾ’ ಆಡಳಿತಾಧಿಕಾರಿ ಶಶಿಧರ ಕುರೇರ ಅವರ ನೇತೃತ್ವದಲ್ಲಿ ಆಹಾರ ಸಮಿತಿ ರಚಿಸಲಾಗಿದೆ.

ವಿವಿಧೆಡೆ ವಾಸ್ತವ್ಯ: ಜೆಎನ್‌ಎಂಸಿ ಆವರಣದ ಕೆಎಲ್‌ಇ ಬಾಲಕರ ಹಾಸ್ಟೆಲ್‌ನಲ್ಲಿ 250 ಮಂದಿ ಮಾರ್ಷಲ್‌ಗಳಿಗೆ, ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ 400 ಮಂದಿ ‘ಡಿ’ ದರ್ಜೆ ನೌಕರರಿಗೆ ಮತ್ತು ವಿಟಿಯು ಅತಿಥಿಗೃಹ–ಕ್ಯಾಂಪಸ್‌ನಲ್ಲಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಸಚಿವಾಲಯದ 100ರಿಂದ 150 ಮಂದಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

‘ಉಪಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸುವುದಕ್ಕಾಗಿ ಅಗತ್ಯ ಸಿದ್ಧತೆ ಆಗಿದೆ. ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಗುವುದು. ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲನೆಗೆ ಆದ್ಯತೆ ಕೊಡಲಾಗಿದೆ. ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದಿರುವವರನ್ನು ಮಾತ್ರ ಕೆಲಸಕ್ಕೆ ಬಳಸಬೇಕು ಎಂದು ಕೇಟರಿಂಗ್‌ನವರಿಗೆ ಸೂಚಿಸಲಾಗಿದೆ. ಬಿಸಿ ನೀರಿನ ವ್ಯವಸ್ಥೆ ಇರುತ್ತದೆ’ ಎಂದು ಆಹಾರ ಸಮಿತಿ ಉಸ್ತುವಾರಿ ಅಧಿಕಾರಿ ಶಶಿಧರ ಕುರೇರ ‘ಪ್ರಜಾವಾಣಿಗೆ’ ಮಾಹಿತಿ ನೀಡಿದರು.

ಪ್ರತ್ಯೇಕ ಮೆನು: ‘ಪ್ರತ್ಯೇಕವಾಗಿ ಮೆನು ನಿಗದಿಪಡಿಸಲಾಗಿದೆ. ದಕ್ಷಿಣ ಕರ್ನಾಟಕದವರಿಗೆ ಅನುಕೂಲ ಆಗುವಂತೆ ಮುದ್ದೆ, ಚಪಾತಿ ಹಾಗೂ ರೊಟ್ಟಿಯನ್ನು ಪರ್ಯಾಯವಾಗಿ ನೀಡಲಾಗುವುದು. ರೊಟ್ಟಿ, ಗೋಧಿ ಉಗ್ಗಿ, ಶೇಂಗಾ ಹೋಳಿಗೆ, ಚಕ್ಕುಲಿ ಹೀಗೆ... ನಿತ್ಯ ಒಂದಿಲ್ಲೊಂದು ವಿಶೇಷ ಇರುತ್ತದೆ’ ಎನ್ನುತ್ತಾರೆ ಅವರು.

‘ಸುವರ್ಣ ವಿಧಾನಸೌಧದಲ್ಲಿ ಗಣ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು, ಐಎಎಸ್‌ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿ 500 ಮಂದಿಗೆ, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಚಿವಾಲಯ ಸಿಬ್ಬಂದಿಗೆ ಸೇರಿ 2,500 ಮಂದಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. 2ಸಾವಿರ ಮಂದಿ ಚಾಲಕರು ಮತ್ತಿತರ ಸಿಬ್ಬಂದಿಗೆ ಸುವರ್ಣ ವಿಧಾನಸೌಧದ ಮುಂದೆ ಪೆಂಡಾಲ್‌ನಲ್ಲಿ ಒದಗಿಸಲಾಗುವುದು’ ಎಂದು ಮಾಹಿತಿ ನೀಡಿದರು.

ವರದಿ ನೀಡಿದ ನಂತರ...
ಹೋದ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದಲ್ಲಿ ನೀಡಿದ್ದ ಊಟ ಮಾಡಿದ್ದ ಬಹಳ ಮಂದಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ, ಈ ಬಾರಿ ಗುಣಮಟ್ಟ ಹಾಗೂ ಸುರಕ್ಷತೆಗೆ ಆದ್ಯತೆ ಕೊಡಲಾಗಿದೆ. 10 ಮಂದಿ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ಆಹಾರದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ, ಸುರಕ್ಷಿತವಾಗಿದೆ ಎಂದು ಲಿಖಿತ ವರದಿ ನೀಡಿದ ನಂತರವಷ್ಟೆ ಬಡಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ವಿಐಪಿ ಊಟಕ್ಕೆ ₹ 403
ವಿಐಪಿಗಳಿಗೆ ಬಡಿಸುವ ಒಂದು ಊಟಕ್ಕೆ ₹ 403, ಅಧಿಕಾರಿಗಳು, ನೌಕರರು ಹಾಗೂ ಪತ್ರಕರ್ತರ ಊಟಕ್ಕೆ ₹ 354 ಹಾಗೂ ಚಾಲಕರ ಊಟಕ್ಕೆ ₹ 99 ದರ ನಿಗದಿಪಡಿಸಲಾಗಿದೆ. 2018ರಲ್ಲಿ ನಡೆದಿದ್ದ ಅಧಿವೇಶನದಲ್ಲಿ ನಿಗದಿಪಡಿಸಿದ್ದ ದರವನ್ನೇ ಉಳಿಸಿಕೊಳ್ಳಲಾಗಿದೆ. ಆಗ, ₹ 1.61 ಕೋಟಿ ವೆಚ್ಚವಾಗಿತ್ತು. ಈ ಬಾರಿ ₹ 1.62 ಕೋಟಿ ಆಗುವ ನಿರೀಕ್ಷೆ ಇದೆ. ಇದಕ್ಕೆ ಅನುಮೋದನೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT