ಶನಿವಾರ, ಆಗಸ್ಟ್ 20, 2022
21 °C
ಬಂಡಾಯ ಸಾಹಿತ್ಯ ಸಂಘಟನೆ ಕಾರ್ಯಕ್ರಮದಲ್ಲಿ ಯಲ್ಲಪ್ಪ

ಸಮಾಜಕ್ಕೆ ಬದ್ಧರಾಗಿ ಬರೆಯಬೇಕು: ಡಾ.ಯಲ್ಲಪ್ಪ ಹಿಮ್ಮಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜನರಿಂದ ಮನ್ನಣೆಗೆ ಒಳಗಾಗುವ ಸಾಹಿತಿಗಳು ಸಮಾಜಕ್ಕೆ ಬದ್ಧರಾಗಿ ಬರೆಯಬೇಕು. ರೈತರು, ಮಹಿಳೆಯರು, ದಲಿತರು ಮತ್ತು ತುಳಿತಕ್ಕೆ ಒಳಗಾದ ಸಮುದಾಯದ ಪರವಾಗಿ ಹಾಗೂ ಅವರ ದನಿಯಾಗಿ ಸಾಹಿತ್ಯ ರಚಿಸಿ, ಬದುಕಿನಲ್ಲೂ ಆ ಬದ್ಧತೆಯನ್ನು ಪ್ರದರ್ಶಿಸಬೇಕು’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.

ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿಯ ಸಭಾಭವನದಲ್ಲಿ ಮಂಗಳವಾರ ನಡೆದ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ನೂತನ ಸಂಚಾಲಕರ ಆಯ್ಕೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಪರವಾಗಿ ದನಿ ಎತ್ತಿ ಮಾನವ ಹಕ್ಕುಗಳ ರಕ್ಷಕರಾಗಬೇಕು. ಅದುವೇ ನಿಜವಾದ ಬಂಡಾಯ ಸಾಹಿತ್ಯ’ ಎಂದರು.

‘ಇಂದು ನಮ್ಮ ದೇಶದ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಅವರಿಗೆ ನೈತಿಕ ಬೆಂಬಲವನ್ನು ಎಲ್ಲರೂ ವ್ಯಕ್ತಪಡಿಸಬೇಕು. ಅನ್ನ ನೀಡುವ ನೆಲದವ್ವನ ಮಕ್ಕಳ ಕುರಿತ ಸಾಹಿತ್ಯ ರಚನೆ ನಮ್ಮ ಮೊದಲ ಆದ್ಯತೆ ಆಗಬೇಕು’ ಎಂದು ಆಶಿಸಿದರು.

‘ಇಡೀ ಕನ್ನಡ ಸಾಹಿತ್ಯವೇ ಕಾಯಕ ಜೀವಿಗಳ ಸಂವೇದನೆಯಾಗಿ ಮೂಡಿ ಬಂದಿರುವುದು ನಮ್ಮ ಸಾಹಿತ್ಯ ಪರಂಪರೆಯ ಸದಭಿರುಚಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ತಿಳಿಸಿದರು.

ಸಂಘಟನೆಯ ಜಿಲ್ಲಾ ಘಟಕದ ನೂತನ ಸಂಚಾಲಕರನ್ನಾಗಿ ಅಡಿವೆಪ್ಪ ಇಟಗಿ, ದೇಮಣ್ಣ ಸೊಗಲದ, ನದೀಮ ಸನದಿ ಮತ್ತು ಸುಧಾ ಕೊಟಬಾಗಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಸಂಘಟನೆಯ ಶಂಕರ ಬಾಗೇವಾಡಿ, ಸಿದ್ದರಾಮ ತಳವಾರ, ರಾಕೇಶ ಪೂಜೇರಿ, ಮೇಘಾ ಗೌಡ ಇದ್ದರು.

ಕಾವೇರಿ ಬುಕ್ಯಾಳಕರ ಕ್ರಾಂತಿಗೀತೆ ಹಾಡಿದರು. ಸುಧಾ ಕೊಟಬಾಗಿ ನಿರೂಪಿಸಿದರು. ದೇಮಣ್ಣ ಸೊಗಲದ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು