ಶನಿವಾರ, ಏಪ್ರಿಲ್ 1, 2023
23 °C
ಯುವಜನ ಕ್ರೀಡಾ ಇಲಾಖೆಯ ಜಿಮ್‌, ಈಜುಕೊಳದಲ್ಲಿಲ್ಲ ಸಿದ್ಧತೆ

ಬಾಗಿಲು ತೆರೆಯಲಿವೆ 700 ದೇಗುಲ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರವು ಲಾಕ್‌ಡೌನ್‌ ಸಡಿಲಗೊಳಿಸಿರುವುದರಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಸೋಮವಾರ (ಜುಲೈ 5) ಜಿಲ್ಲೆಯ ಎಲ್ಲ ದೇವಸ್ಥಾನಗಳ ಬಾಗಿಲು ತೆರೆಯಲು ಮುಂದಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಒಟ್ಟು 700 ದೇವಸ್ಥಾನಗಳಿವೆ. ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ಮೈಲಾರದ ಮೈಲಾರಲಿಂಗ ದೇವಸ್ಥಾನ ಸೇರಿದಂತೆ ಇತರೆ ಪ್ರಮುಖ ದೇಗುಲಗಳು ಸೇರಿವೆ.

ಸೋಮವಾರ ಬೆಳಿಗ್ಗೆ 6.30ಕ್ಕೆ ಎಲ್ಲ 700 ದೇಗುಲಗಳಲ್ಲಿ ಗಂಟೆ ನಾದ ಕೇಳಿಸಲಿದೆ. ಆದರೆ, ತೈಲಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಶನಿವಾರ ಸಂಜೆ ರಾಜ್ಯ ಸರ್ಕಾರವು ದೇವಸ್ಥಾನ ತೆರೆಯಲು ಅನುಮತಿ ನೀಡುತ್ತಿದ್ದಂತೆಯೇ ಭಾನುವಾರ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ನಡೆಯಿತು. ದೇವಸ್ಥಾನದ ಮಂಟಪ, ಅದರ ಆವರಣದಲ್ಲಿ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಬೆಳಿಗ್ಗೆ 6.30ರಿಂದ ಮಧ್ಯಾಹ್ನ 1.15, ಮಧ್ಯಾಹ್ನ 3.15ರಿಂದ 7.30ರ ವರೆಗೆ ದೇವಸ್ಥಾನಗಳು ತೆರೆದಿರಲಿದ್ದು, ಸಾರ್ವಜನಿಕರು ತೆರಳಿ ದರ್ಶನ ಪಡೆಯಬಹುದು. ವಿಶ್ವ ಪ್ರಸಿದ್ಧ ಹಂಪಿಯಲ್ಲಿ ವಾರದ ಹಿಂದೆಯೇ ಸಾರ್ವಜನಿಕರಿಗೆ ಅಲ್ಲಿನ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ವಿರೂಪಾಕ್ಷ ದೇವಸ್ಥಾನದ ಬಾಗಿಲು ತೆರೆದಿರಲಿಲ್ಲ. ದೇವರ ದರ್ಶನವಾಗದೆ ಜನ ನಿರಾಸೆಯಿಂದ ಹಿಂತಿರುಗಿದರು.

‘ವಿರೂಪಾಕ್ಷ ದೇಗುಲ ಹಂಪಿಯ ಜೀವಂತ ಸ್ಮಾರಕವಾಗಿದ್ದು, ಅದರ ಬಾಗಿಲು ತೆರೆಯಬೇಕು’ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿತ್ತು. ಕೋವಿಡ್‌ ಪ್ರಕರಣಗಳ ಸಂಖ್ಯೆ ಭಾರಿ ಇಳಿಕೆ ಆಗುತ್ತಿದ್ದಂತೆ ಸರ್ಕಾರ ದೇವಸ್ಥಾನಗಳ ಬಾಗಿಲು ತೆರೆಯಲು ಮುಂದಾಗಿದೆ.

ಎರಡು ವರ್ಷದಿಂದ ಈಜುಪ್ರಿಯರಿಗೆ ನಿರಾಸೆ:

ಎರಡು ವರ್ಷಗಳಾದರೂ ಇಲ್ಲಿನ ಈಜುಪ್ರಿಯರಿಗೆ ಈಜುಕೊಳದಲ್ಲಿ ಈಜಾಡುವ ಭಾಗ್ಯ ದೊರೆತಿಲ್ಲ. ಹೋದ ವರ್ಷ ಲಾಕ್‌ಡೌನ್‌ ಸಡಿಲಿಸಿ ಈಜುಕೊಳ ತೆರೆಯಲು ಅನುಮತಿ ನೀಡಿದ್ದರೂ ತೆರೆದಿರಲಿಲ್ಲ. ಈ ವರ್ಷವೂ ಸರ್ಕಾರ ತೆರೆಯಲು ಅನುಮತಿ ನೀಡಿದೆ. ಆದರೆ, ಅಲ್ಲಿ ಯಾವುದೇ ರೀತಿಯ ಸಿದ್ಧತೆ ಭಾನುವಾರ ಕಂಡು ಬರಲಿಲ್ಲ.

‘ನಗರದಲ್ಲಿ ಖಾಸಗಿ ಜಿಮ್‌ಗಳು ತೆರೆದು ಹಲವು ದಿನಗಳೇ ಕಳೆದಿವೆ. ಈಜುಕೊಳ ತೆರೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಯುವಜನ ಕ್ರೀಡಾ ಇಲಾಖೆಯ ಈಜುಕೊಳ ಸೋಮವಾರ ತೆರೆಯುವುದಿಲ್ಲ ಎಂದು ಗೊತ್ತಾಗಿದೆ. ಇನ್ನೆಷ್ಟು ದಿನ ಕಾಯಬೇಕು ಗೊತ್ತಾಗುತ್ತಿಲ್ಲ. ಸರ್ಕಾರಿ ವ್ಯವಸ್ಥೆ ಎಂದರೆ ಹೀಗೆಯೇ?’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಈಜುಪ್ರಿಯರು ಕೇಳಿದ್ದಾರೆ.

‘ಜಿಮ್‌, ಈಜುಕೊಳ, ಬ್ಯಾಡ್ಮಿಂಟನ್‌ ಕೋಟ್‌ ಯಾವಾಗ ತೆರೆಯಲಾಗುತ್ತದೆ ಎಂದು ಹೋಗಿ ವಿಚಾರಿಸಿದರೆ, ನಮಗೆ ಇದುವರೆಗೆ ಮೇಲಿನಿಂದ ಸೂಚನೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ಅನುಮತಿ ಕೊಟ್ಟರೂ ತೆರೆಯುವುದಿಲ್ಲ ಎಂದರೆ ಏನರ್ಥ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು