ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಸಿಸಿ ಬ್ಯಾಂಕ್ ಚುನಾವಣೆ: ಆನಂದ್ ಸಿಂಗ್ ಅವಿರೋಧ ಆಯ್ಕೆ ಖಚಿತ

Last Updated 9 ಫೆಬ್ರುವರಿ 2021, 6:14 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ನಾಮಪತ್ರ ಸಲ್ಲಿಕೆಗೆ ಬೆಳಿಗ್ಗೆ ಹನ್ನೊಂದು ಗಂಟೆಯ ವರೆಗೆ ಕಾಲಾವಕಾಶ ಇತ್ತು. ಸಿಂಗ್ ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಆನಂದ್ ಸಿಂಗ್ ಒಟ್ಟು ಮೂರು ನಾಮಪತ್ರ ಸಲ್ಲಿಸಿದ್ದಾರೆ. ಮಧ್ಯಾಹ್ನ 1.30ರಿಂದ 2ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಇದೆ. ಬಳಿಕ ನಾಮಪತ್ರ ಪರಿಶೀಲನೆ ನಡೆಯಲಿದೆ. 3.30ಕ್ಕೆ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಾಗುವುದುಎಂದು ಚುನಾವಣಾಧಿಕಾರಿ ಎಚ್. ವಿಶ್ವನಾಥ್ ತಿಳಿಸಿದರು.

ಇತ್ತೀಚೆಗೆ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಟಿ.ಎಂ.ಚಂದ್ರಶೇಖರಯ್ಯ ರಾಜೀನಾಮೆ ಸಲ್ಲಿಸಿದ್ದರು. ತೆರವಾದ ಸ್ಥಾನಕ್ಕೆ‌ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಹದಿಮೂರು ಜನ ನಿರ್ದೇಶಕರನ್ನು ಒಳಗೊಂಡಿರುವ ಬ್ಯಾಂಕಿನ ಹಾಲಿ ಅವಧಿ ಇನ್ನೂ ಮೂರು ವರ್ಷ ಇದೆ.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ‌ ಆನಂದ್ ಸಿಂಗ್, ಎಲ್ಲ ನಿರ್ದೇಶಕರು ಸಹಕಾರ ಕೊಡುವ ಭರವಸೆ ನೀಡಿದ್ದಾರೆ. ಅವಿರೋಧವಾಗಿ ಆಯ್ಕೆಯಾಗುವ ಭರವಸೆ ಇದೆ. ಒಂದುವೇಳೆ ಯಾರಿಗಾದರೂ‌ ಸ್ಪರ್ಧಿಸುವ ಉಮೇದು ಇದ್ದರೆ ಸಲ್ಲಿಸಬಹುದು. ಸದ್ಯ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಜಾತ್ರೆಗೆ ಹೋಗುತ್ತಿದ್ದೇನೆ. ಮಧ್ಯಾಹ್ನ ಬರುವೆ ಎಂದು ಹೇಳಿದರು.
ಶತಮಾನೋತ್ಸವದ ಹೊಸ್ತಿಲಲ್ಲಿ ಇರುವ ಬ್ಯಾಂಕ್ ಇದುವರೆಗೆ ಕಾಂಗ್ರೆಸ್ ಹಿಡಿತದಲ್ಲಿತ್ತು. ಈಗ ಬಿಜೆಪಿ ಹಿಡಿತಕ್ಕೆ ಬರುತ್ತಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ನಾನೇನೂ ಹೇಳಲಾರೆ. ವಿಜಯನಗರದಲ್ಲಿ ಆ ಮನೋಭಾವ ಯಾರಿಗೂ ಇಲ್ಲ. ಎಲ್ಲರೂ ಸೇರಿಕೊಂಡು ಬ್ಯಾಂಕಿನ ಏಳಿಗೆಗೆ ಶ್ರಮಿಸುತ್ತೇವೆ. ಅನೇಕ ವರ್ಷಗಳಿಂದ ಬ್ಯಾಂಕಿನಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಲು ಶ್ರಮಿಸುತ್ತೇನೆ ಎಂದು ಹೇಳಿದರು.

ಸಕ್ಕರೆ ಕಾರ್ಖಾನೆ ಆರಂಭಿಸುವುದರ ಕುರಿತು ಈಗ ಏನನ್ನೂ ಹೇಳಲಾರೆ. ನನಗೆ ಗೊತ್ತಿರುವಂತೆ ಕಂಪ್ಲಿಯಲ್ಲಿ ಸಕ್ಕರೆ ಕಾರ್ಖಾನೆ ಮರು ಆರಂಭಿಸುವ ಕೆಲಸಗಳು‌ ನಡೆಯುತ್ತಿವೆ. ಅದು ಆರಂಭಗೊಂಡರೆ ಮತ್ತೊಂದು ಕಾರ್ಖಾನೆಯ ಅಗತ್ಯ ಬೀಳುವುದಿಲ್ಲ‌ ಎಂದು ಭಾವಿಸಿದ್ದೇನೆ ಎಂದರು.


ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡ ಆನಂದ್ ಸಿಂಗ್, ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಹೇಳಿದರು.
ಜನವರಿಯಲ್ಲಿ ಆನಂದ್ ಸಿಂಗ್ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT