ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರ ಎಸೆತದಲ್ಲಿ ಚಿನ್ನದ ಸಾಧನೆ ಮಾಡಿದ ಸಂಚಿತಾ ಹಿರೇಮಠಗೆ ಏಷ್ಯನ್ ಗೇಮ್ ಕನಸು

ಮಲ್ಲಿಗೆ ನಾಡಿನ ಕ್ರೀಡಾ ಪ್ರತಿಭೆ
Last Updated 19 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಹೂವಿನಹಡಗಲಿ: ರಾಷ್ಟ್ರ ಮಟ್ಟದ ಕ್ರೀಡಾ ಪ್ರತಿಭೆಯಾಗಿ ರೂಪುಗೊಳ್ಳುವ ಆ ಬಾಲಕಿಯ ಕನಸು ಸತತ ನಾಲ್ಕು ವರ್ಷದ ಪ್ರಯತ್ನದ ಬಳಿಕ ನನಸಾಗಿದೆ. ಇದಕ್ಕಾಗಿ ಆಕೆ ಕ್ರೀಡಾಂಗಣದಲ್ಲಿ ಹರಿಸಿದ ಬೆವರು, ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ.

ತಾಲ್ಲೂಕಿನ ಲಿಂಗನಾಯಕನಹಳ್ಳಿ ಪ್ಲಾಟ್ 50-60 ಕುಟುಂಬಗಳು ನೆಲೆಸಿರುವ ಪುಟ್ಟ ಹಳ್ಳಿ. ಅಲ್ಲಿನ ಬಸ್ ನಿಲ್ದಾಣದ ಬಳಿ ಇದ್ದವರನ್ನು ಇಲ್ಲಿ ವಿದ್ಯಾರ್ಥಿನಿ ಸಂಚಿತಾ ಮನೆ ಎಲ್ಲಿ ಎಂದು ವಿಚಾರಿಸಿದರೆ ಯಾರಿಗೂ ಹೊಳೆಯಲಿಲ್ಲ. ಚಕ್ರ ಎಸೆತದಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ ಹುಡುಗಿ ಎಂದ ತಕ್ಷಣ ‘ಓ ಕೊಟ್ರಯ್ಯ ಮೇಷ್ಟ್ರು ಮೊಮ್ಮಗಳಾ..? ಇದೋ ಇಲ್ಲೇ ಇದೆ ನೋಡಿ ಎಂದು ಯುವಕನೊಬ್ಬ ಮನೆ ತೋರಿಸಿದ. ಹೀಗೆ ತನ್ನ ಹೆಸರಿಗಿಂತ ಕ್ರೀಡಾ ಸಾಧನೆ ಮೂಲಕ ಮನೆ ಮಾತಾಗಿದ್ದಾರೆ 15 ವರ್ಷದ ಬಾಲಕಿ ಸಂಚಿತಾ ಹಿರೇಮಠ.

ಲಿಂಗನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಈ ಬಾಲಕಿ ಈಚೆಗೆ ಮಂಡ್ಯ ಜಿಲ್ಲೆ ಆದಿಚುಂಚನಗಿರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಘಟಿಸಿದ್ದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಚಕ್ರ ಎಸೆತದಲ್ಲಿ ಮೊದಲ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ತೀವ್ರ ಪೈಪೋಟಿಯ ಸ್ಪರ್ಧೆಯಲ್ಲಿ ಈ ಗ್ರಾಮೀಣ ಪ್ರತಿಭೆ 33.28 ಮೀಟರ್ ದೂರಕ್ಕೆ ಚಕ್ರ ಎಸೆದು ದಾಖಲೆ ಬರೆದಿದ್ದಾಳೆ. ಡಿಸೆಂಬರ್ 2 ರಿಂದ 6ರವರೆಗೆ ಪಂಜಾಬ್ ನಲ್ಲಿ ಜರುಗಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾಳೆ.

ಕೊಪ್ಪಳ ತಾಲ್ಲೂಕು ನೆಲೋಗಿಪುರದ ಪರಮೇಶ್ವರಯ್ಯ ಶಾರದಾ ದಂಪತಿ ಪುತ್ರಿ ಸಂಚಿತಾ, ಬಾಲ್ಯದಿಂದಲೂ ತನ್ನ ತಾಯಿಯ ತವರು ಲಿಂಗನಾಯಕನಹಳ್ಳಿ ಪ್ಲಾಟ್ ನ ಅಜ್ಜ ಅಜ್ಜಿಯ ಮನೆಯಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಚಕ್ರ ಎಸೆತದಲ್ಲಿ ಸತತ ನಾಲ್ಕು ವರ್ಷ ರಾಜ್ಯ ಮಟ್ಟ ಪ್ರವೇಶಿಸಿ ಭರವಸೆ ಮೂಡಿಸಿದ್ದರು. ಹಿಂದಿನ ವರ್ಷ ಆರನೇ ಸ್ಥಾನ ಗಳಿಸಿದ್ದ ಸಂಚಿತಾ, ಈ ಬಾರಿ ರಾಷ್ಟ್ರ ಮಟ್ಟ ಪ್ರವೇಶಿಸುವ ಹಟ ತೊಟ್ಟಿದ್ದಳು. ಸೋದರ ಮಾವ ಎಸ್.ಎಂ.ರವಿಶಂಕರ, ಕೆ.ರಾಮಾಂಜನೇಯ ಒತ್ತಾಸೆಯಾಗಿ ನಿಂತು ಬಾಲಕಿಯ ಕನಸು ನನಸಾಗಿಸಿದ್ದಾರೆ. ಕೋಚ್ ಗಳಾದ ಮೈಸೂರಿನ ಧರ್ಮವೀರಸಿಂಗ್, ವಿನಯಕುಮಾರ್ ಅವರಲ್ಲಿ ಬಾಲಕಿಗೆ ಎರಡು ತಿಂಗಳು ತರಬೇತಿ ಕೊಡಿಸಿದ್ದಾರೆ.

ಈ ವರ್ಷ ಪ್ರಾರಂಭದಿಂದಲೇ ಸಂಚಿತಾ ಕಠಿಣ ಅಭ್ಯಾಸ ರೂಢಿಸಿಕೊಂಡಿದ್ದಳು. ಬೆಳಿಗ್ಗೆ ತೋಳ್ಬಲ ಹೆಚ್ಚಿಸಿಕೊಳ್ಳುವ ವ್ಯಾಯಾಮ, ಸಂಜೆ ಹೊತ್ತು ಚಕ್ರ ಎಸೆಯುವ ಅಭ್ಯಾಸ ಮಾಡುತ್ತಿದ್ದಳು. ಶಾಲೆ ಬಿಟ್ಟೊಡನೆ ಅಳತೆಯ ಟೇಪು, ಚಕ್ರದೊಂದಿಗೆ ಅಣಿಯಾಗುತ್ತಿದ್ದ ಈಕೆ ಪ್ರತಿದಿನವೂ ನಿರ್ದಿಷ್ಟ ಗುರಿ ತಲುಪದ ಹೊರತು ಮನೆಗೆ ಹಿಂದಿರುಗುತ್ತಿರಲಿಲ್ಲ.

‘ಈ ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗುವುದಾಗಿ ಮನೆಯಲ್ಲಿ ಅಜ್ಜ, ಮಾಮನಿಗೆ ಮಾತು ಕೊಟ್ಟಿದ್ದೆ. ಅದನ್ನು ನೆನಪು ಮಾಡಿಕೊಂಡು ನನ್ನೆಲ್ಲಾ ಶಕ್ತಿಯನ್ನು ಬಳಸಿ ಚಕ್ರವನ್ನು ಗಾಳಿಯಲ್ಲಿ ತೇಲಿ ಬಿಟ್ಟೆ. ಆ ಎಸೆತವೇ ನನಗೆ ಗೆಲುವು ತಂದುಕೊಟ್ಟಿತು. ಮೊದಲ ಸ್ಥಾನ ಘೋಷಣೆಯಾದಾಗ ಕುಣಿದು ಕುಪ್ಪಳಿಸಿದ್ದೆ’ ಎಂದು ಸಂಚಿತಾ ಹೇಳಿದರು.

‘ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಯಶಸ್ಸು ಗಳಿಸಲು ತಯಾರಿ ನಡೆಸುತ್ತಿದ್ದೇನೆ. ಮುಂದೆ ಏಷ್ಯನ್ ಗೇಮ್ಸ್ ಗಳಿಗೆ ಹೋಗುವ ಆಸೆ ಇದೆ. ನನ್ನಂಥ ಗ್ರಾಮೀಣ ಪ್ರತಿಭೆಗೆ ಅದು ಸಾಧ್ಯವಾಗುತ್ತೋ ಇಲ್ಲೋ ಗೊತ್ತಿಲ್ಲ. ನಿರಂತರ ಪ್ರಯತ್ನ ಮುಂದುವರಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT