ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಯ್ಕೆ ನಿಮ್ಮದು; ಅಭಿವೃದ್ಧಿ ನಮ್ಮದು–ಪ್ರಿಯಾಂಕ್

Last Updated 18 ಏಪ್ರಿಲ್ 2018, 8:54 IST
ಅಕ್ಷರ ಗಾತ್ರ

ಚಿತ್ತಾಪುರ: ‘ನಾಲ್ಕೂವರೆ ವರ್ಷ ಮಾಡಿರುವ ಅಭಿವೃದ್ಧಿ, ನೀಡಿರುವ ಸಾಮಾಜಿಕ ಆಧರಿಸಿ ಜನರ ಬಳಿ ಮತ ಕೇಳುತ್ತೇನೆ. ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆ. ಪ್ರತಿನಿಧಿ ಆಯ್ಕೆ ಮಾಡುವ ಜವಾಬ್ಧಾರಿ ನಿಮ್ಮದು. ಅಭಿವೃದ್ಧಿ ಮಾಡುವ ಕರ್ತವ್ಯ ನಮ್ಮದು’ ಎಂದು ಸಚಿವ ಪ್ರಿಯಾಂಕ್ ಎಂ. ಖರ್ಗೆ ಹೇಳಿದರು.

ತಾಲ್ಲೂಕಿನ ಭಾಗೋಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಎಂದರೆ ಎಲ್ಲ ಪಕ್ಷಗಳು, ಅಭ್ಯರ್ಥಿಗಳು ಮತದಾರರ ಬಾಗಿಲು ಬಡಿಯಬೇಕು. ಹಾಗೆ ಬಂದವರಲ್ಲಿ ಯಾರು ಉತ್ತಮರು. ಯಾರಿಂದ ಅಭಿವೃದ್ಧಿ ಸಾಧ್ಯ ಎಂದು ಅರಿತುಕೊಂಡು ಬೆಂಬಲಿಸಬೇಕು. ಮತದಾರರ ನಿರೀಕ್ಷೆಯಂತೆ ಶಿಕ್ಷಣ, ಆರೋಗ್ಯ, ರಸ್ತೆ, ಸೇತುವೆ, ಬಾಂದಾರು, ನೀರು, ಮೂಲಸೌಕರ್ಯ, ಸಾರಿಗೆ ಮುಂತಾದ ಅಭಿವೃದ್ಧಿ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆ’ ಎಂದು ಹೇಳಿದರು.

‘ರಾಜಕೀಯ ಕ್ಷೇತ್ರದಲ್ಲಿ ರಾಜಕಾರಣಿಗಳಿಗೆ ಮಾತೇ ಬಂಡವಾಳ. ಆ ಮಾತು ತೂಕದ್ದಾಗಿರಬೇಕು. ಮಾತಿನಲ್ಲಿ ಬದ್ಧತೆ ಮತ್ತು ನಂಬಿಕೆ ಇರಬೇಕು. ರಾಜಕಾರಣಿ ಆಡುವ ಮಾತು ನಂಬಿಕೆ ಆಧಾರದಲ್ಲಿ ಮತದಾರ ಮತ ನೀಡಿ, ಜನಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಂಡು ಅಧಿಕಾರ ನೀಡುತ್ತಾರೆ. ಅದನ್ನು ಅರಿತುಕೊಂಡು ಮಾತನಾಡಬೇಕು’ ಎಂದು ಪ್ರಿಯಾಂಕ್ ಬಿಜೆಪಿ ವಿರುದ್ಧ ಪರೋಕ್ಷವಾಗಿ ಪ್ರಹಾರ ನಡೆಸಿದರು.

‘ಪ್ರಬುದ್ಧತೆ ರಾಜಕಾರಣಿಗೆ ಪ್ರಬಲ ಅಸ್ತ್ರ ಮತ್ತು ಬಲ. ಆಡುವ ಮಾತು ತೂಕ್ಕದಾಗಿರದಿದ್ದರೆ, ಬೆಲೆಯೂ ಇಲ್ಲದಿದ್ದರೆ ಆ ರಾಜ ಕಾರಣಿಗೆ ಯಾವ ಭವಿಷ್ಯವೂ ಇಲ್ಲ.

ಕಾಂಗ್ರೆಸ್ ಬಿಟ್ಟು ತಮ್ಮ ಜಾತ್ಯತೀತ ತತ್ವ, ನಂಬಿಕೆ, ಸಿದ್ಧಾಂತದ ವಿರುದ್ಧವಾಗಿ ಕೋಮುವಾದ ಅಪ್ಪಿಕೊಂಡು ಮಾತನಾಡು ವವರಲ್ಲಿ ಯಾವ ನೈತಿಕತೆಯೂ ಇಲ್ಲ ಎಂದು ಅವರು ಕಾಂಗ್ರೆಸ್ ತೊರೆ ದವರಿಗೆ ಮಾತಿನಿಂದ ಕುಟುಕಿದರು.

ಕಳೆದ ನಾಲ್ಕುವರೆ ವರ್ಷಗಳ ಕಾಲ ನನ್ನ ಜೊತೆಗಿದ್ದು, ಅಭಿವೃದ್ಧಿ ಮೆಚ್ಚಿ ಜನರಿಗೆ ಹೇಳುತ್ತಿದ್ದವರು ಇಂದು ನನ್ನ ಮತ್ತು ಕಾಂಗ್ರೆಸ್ ವಿರುದ್ಧ ಏನೆಂದು ಮಾತನಾಡುತ್ತಾರೆ. ಯಾವ ಆರೋಪ ನನ್ನ ಮೇಲೆ ಹೊರಿಸುತ್ತಾರೆ.

ಪಕ್ಷ ಬಿಟ್ಟುವರು ನನ್ನಿಂದಾಗಲಿ, ಪಕ್ಷದಿಂದಾಗಲಿ ಬೇಸತ್ತು ಪಕ್ಷ ತೊರೆದಿಲ್ಲ. ಅವರ ವೈಯಕ್ತಿಕ ಸಮಸ್ಯೆ ಕಾರಣ ಇರಬಹುದು. ಜನರು ನೇರವಾಗಿ ನನ್ನೊಂದಿಗೆ ಸಂಪರ್ಕದಲ್ಲಿ ಬಂದಿದ್ದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ದಿಢೀರ್ ಮಾತು ಬದಲಾಯಿಸುವವರಿಂದ ಜನರು ಎಚ್ಚರದಿಂದ ಇರಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.

ಗ್ರಾಮದ ಮುಖಂಡರಾದ ಶರಣಬಸಪ್ಪ ಪಾಟೀಲ್, ರಾಜೇಂದ್ರ ಅರಣಕಲ್, ದೇವಿಂದ್ರ ಅರಣಕಲ್ ಅವರು ಮಾತನಾಡಿದರು. ಭೀಮಣ್ಣ ಸಾಲಿ, ರಮೇಶ ಮರಗೋಳ, ಜಯಪ್ರಕಾಶ ಕಮಕನೂರ, ಸಿದ್ಧು ಸಂಗಾವಿ, ರಾಜಶೇಖರ ತಿಮ್ಮನಾಯಕ, ಮುನಿ ಯಪ್ಪ ಕೊಳ್ಳಿ ಇದ್ದರು.

‘ವಾಲ್ಮೀಕ ನಾಯಕಗೆ ಕಚೇರಿಗಳ ವಿಳಾಸ ಗೊತ್ತಿಲ್ಲ’

ಚಿತ್ತಾಪುರ: ‘ಬಿಜೆಪಿ ಸರ್ಕಾರದಲ್ಲಿ ಶಾಸಕರಾಗಿದ್ದ ವಾಲ್ಮೀಕ ನಾಯಕ ಅವರು ಭಾಗೋಡಿ ಗ್ರಾಮಕ್ಕೆ ಬಂದಾಗ ಶಿವಲಿಂಗಪ್ಪ ಪಾಟೀಲ್ ಅವರು ಭಾಗೋಡಿ ಬಳಿ ಕಾಗಿಣಾ ನದಿಗೆ ಸೇತುವೆ ನಿರ್ಮಾಣ ಮಾಡಿಸಿ ಎಂದು ಹೇಳಿದಾಗ ಗೌಡ್ರೆ ಎಲ್ಲಿ, ಯಾವ ಆಫೀಸಿಗೆ ಹೋಗಬೇಕು ಹೇಳಿ ಎಂದು ಕೇಳಿದ್ದರು. ಅವರಿಗೆ ಯಾವ ಕಚೇರಿಯಲ್ಲಿ ಯಾವ ಕೆಲಸ ಮಾಡಬೇಕು ಎಂಬುದರ ಕುರಿತು ಅರಿವಿಲ್ಲ’ ಎಂದು ತಾ.ಪಂ ಮಾಜಿ ಅಧ್ಯಕ್ಷ ಶರಣಬಸಪ್ಪ ಪಾಟೀಲ್ ಅವರು ವ್ಯಂಗ್ಯವಾಡಿದರು.

ಭಾಗೋಡಿ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಭಾಗೋಡಿ ಅಂಡಮಾನ್, ನಿಕೋಬಾರ್ ದ್ವೀಪದಂತೆ ಇತ್ತು. ತಂದೆ ತಾಯಿ ಸತ್ತರೆ ಮಕ್ಕಳು ಶವಸಂಸ್ಕಾರಕ್ಕೆ ಬರುವಂತೆ ಇರಲಿಲ್ಲ. ರಸ್ತೆ, ಸಾರಿಗೆ ಸಂಚಾರ ಸಂಪೂರ್ಣ ವಂಚಿತವಾಗಿತ್ತು. ಪ್ರಿಯಾಂಕ್ ಅವರ ಕಳಕಳಿಯಿಂದ ನದಿಗೆ ಬೃಹತ್ ಸೇತುವೆ ನಿರ್ಮಾಣ ಮಾಡಿದ್ದರಿಂದ ಶತಮಾನಗಳ ಸಮಸ್ಯೆ ಪರಿಹಾರ ಕಂಡಿದೆ’ ಎಂದರು.

ಯುವ ಮುಖಂಡ ದೇವೀಂದ್ರ ಅರಣಕಲ್ ಮಾತನಾಡಿ, ಕಾಗಿಣಾ ನದಿಗೆ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ವಾಲ್ಮೀಕ ನಾಯಕ ಅವರ ಬಳಿ ನಿಯೋಗ ಹೋಗಿ ಮನವಿ ಮಾಡಿದ್ದೆವು.₹20 ಕೋಟಿ ಅನುದಾನ ಒಂದೇ ಗ್ರಾಮಕ್ಕೆ ಕೊಟ್ಟರೆ ಬೇರೆ ಗ್ರಾಮಗಳಲ್ಲಿ ಕೆಲಸ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT