ಶನಿವಾರ, ಜೂನ್ 6, 2020
27 °C
ಲಾಕ್‌ಡೌನ್‌ ಸಮಯದಲ್ಲಿ ವಿನೂತನ ಸೇವೆ

ಬಳ್ಳಾರಿ ವೈದ್ಯರ ಫೋನ್‌ ಕನ್ಸಲ್ಟೇಷನ್‌: ಹಲವರಿಗೆ ಪ್ರಯೋಜನ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಲಾಕ್‌ಡೌನ್‌ ಪರಿಣಾಮವಾಗಿ ಮನೆಯಲ್ಲೇ ಉಳಿದಿರುವ ಜಿಲ್ಲೆಯ ಜನರಿಗೆ ನಗರದ ವೈದ್ಯರು ನೀಡುತ್ತಿರುವ ಉಚಿತ ಟೆಲಿಫೋನ್‌ ಕನ್ಸಲ್ಟೇಷನ್‌ ಸೇವೆ ವರದಾನವಾಗಿ ಪರಿಣಮಿಸಿದೆ.

ಮಕ್ಕಳ ವೈದ್ಯರು, ಶಸ್ತ್ರಚಿಕಿತ್ಸಕರು, ಮೂತ್ರಶಾಸ್ತ್ರಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಕೀಲು–ಮೂಳೆ ತಜ್ಞರು ಸೇರಿದಂತೆ ನಗರದ ಹನ್ನೊಂದು ವೈದ್ಯರು ನಿಗದಿತ ಸಮಯಗಳಲ್ಲಿ ಲಭ್ಯರಿದ್ದು, ಜನಸಾಮಾನ್ಯರ ಕರೆ ಸ್ವೀಕರಿಸಿ, ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದಾರೆ.

ಅನಿವಾರ್ಯ ಸಂದರ್ಭಗಳಲ್ಲಿ, ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಫೋಟೋ, ವೀಡಿಯೋಗಳನ್ನು ನೋಡಿಯೇ ನಿಗದಿತ ಔಷಧಿಗಳನ್ನು ಸೂಚಿಸುತ್ತಿದ್ದಾರೆ. ನಗರದ ಜನರಿಗಾಗಿ ಎಂದು ಆರಂಭವಾದ ಸೇವೆಯೂ ಇಡೀ ಜಿಲ್ಲೆಯ ಜನರ ಮನೆಯಂಗಳ ತಲುಪಿರುವುದು ವಿಶೇಷ. ವೈದ್ಯಕೀಯ ಸಲಹೆಗಳಷ್ಟೇ ಅಲ್ಲದೆ ಈ ವೈದ್ಯರು, ಲಾಕ್‌ಡೌನ್‌ ಸಮಯದಲ್ಲಿ ಪಾಲಿಸಬೇಕಾದ ಆರೋಗ್ಯ ಸಂಬಂಧಿಸಿದ ನಿಯಮಗಳ ಕಡೆಗೂ ಗಮನ ಸೆಳೆಯುತ್ತಿದ್ದಾರೆ.

ಶಸ್ತ್ರಚಿಕಿತ್ಸಕರಾದ ಡಾ.ಅರವಿಂದ ಪಟೇಲ್‌, ಡಾ.ನಾರಾಯಣರಾವ್, ಡಾ.ಎಲ್‌.ವಿ.ರಮಣ, ಡಾ.ಅರುಣಾರಾವ್, ಮಕ್ಕಳ ತಜ್ಞರಾದ ಡಾ.ಬಿ.ಕೆ.ಶ್ರೀಕಾಂತ್‌, ಡಾ.ಎಸ್‌.ಕೆ.ಅಜಯ್‌, ಫಿಸಿಶಿಯನ್‌ಗಳಾದ ಡಾ.ಲಲಿತಾ, ಡಾ.ಶಾಗುಫ್ತಾ ಶಹೀನ್‌, ಮೂಳೆ ತಜ್ಞರಾದ ಡಾ.ಕೆ.ವಿ.ಪಿ.ರಾವ್‌ ಫೋನ್‌ ಕನ್ಸಲ್ಟೇಷನ್‌ಗಾಗಿ ಸಮಯ ಮೀಸಲಿಟ್ಟಿದ್ದಾರೆ.

ವೈದ್ಯರು ತಮ್ಮ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಲೇ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ, ಸಂಜೆ 4ರಿಂದ ರಾತ್ರಿ 8ರವರೆಗೆ, ಬೆಳಿಗ್ಗೆ 10ರಿಂದ 12ರವರೆಗೆ ಕರೆ ಸ್ವೀಕರಿಸಿ ಸಲಹೆ ನೀಡುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ತಮ್ಮ ಅನುಭವ ಹಂಚಿಕೊಂಡ ಡಾ.ಬಿ.ಕೆ.ಶ್ರೀಕಾಂತ್‌, ‘ಮನೆಯಲ್ಲೇ ಇದ್ದರೂ ಮಕ್ಕಳಿಗೆ ಅನಾರೋಗ್ಯ ಕಾಡುತ್ತದೆ. ನೆಗಡಿ, ಕೆಮ್ಮು, ಜ್ವರ, ಹಲ್ಲು ನೋವು, ವಾಂತಿ–ಭೇದಿ, ಸುಸ್ತಿನಂಥ ಸಾಮಾನ್ಯ ಅನಾರೋಗ್ಯಗಳಿಗೆ ಔಷಧಿಗಳನ್ನೂ ಸೂಚಿಸುತ್ತಿದ್ದೇನೆ. ದೇಹದ ಮೇಲೆ ಗುಳ್ಳೆ, ಗಾಯವಾದರೆ ಅದರ ಫೋಟೋ, ವೀಡಿಯೋಗಳನ್ನು ವಾಟ್ಸ್‌ ಅಪ್‌ನಲ್ಲಿ ತರಿಸಿಕೊಂಡು, ಗಮನಿಸಿ ಸಲಹೆ ನೀಡುತ್ತಿದ್ದೇನೆ’ ಎಂದು ಹೇಳಿದರು.

‘ಮಗುವನ್ನು ನೋಡಿಯೇ ಚಿಕಿತ್ಸೆ ನೀಡಬೇಕು ಎಂದು ಅನ್ನಿಸಿದರೆ ಸಮೀಪದ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸುವೆ. ನಮ್ಮ ಆಸ್ಪತ್ರೆಗೆ ಹತ್ತಿರವಿದ್ದರೆ ಮಾತ್ರ ಬಂದು ಕಾಣುವಂತೆ ಹೇಳುವೆ’ ಎಂದರು.

‘ನಗರವಷ್ಟೇ ಅಲ್ಲದೆ, ಜಿಲ್ಲೆಯ ಎಲ್ಲ ಮೂಲೆಗಳಿಂದಲೂ ಜನ ಕರೆ ಮಾಡುತ್ತಿದ್ದಾರೆ. ತೋರಣಗಲ್ಲು, ಸಿರುಗುಪ್ಪ, ಹಗರಿಬೊಮ್ಮನಹಳ್ಳಿಯಿಂದಲೂ ಕರೆಗಳು ಬರುತ್ತಿವೆ. ಅವರೆಲ್ಲ ಮನೆಯಲ್ಲಿ ಇರುವುದೇ ಕ್ಷೇಮ. ಮನೆಯಲ್ಲಿದ್ದರೆ ಮಕ್ಕಳೂ ಹೆಚ್ಚು ಕ್ಷೇಮವಾಗಿರುತ್ತವೆ’ ಎಂದರು.

‘ಸಾಮಾನ್ಯ ಕಾಯಿಲೆಗಳು ಬಿಟ್ಟರೆ ಗಂಭೀರ ಸ್ವರೂಪದ ಯಾವುದೇ ಸಮಸ್ಯೆ ಇದೆ ಎಂದು ಇದುವರೆಗೆ ಯಾರೂ ಕರೆ ಮಾಡಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಪರಿಚಿತರಿಗಷ್ಟೇ ಅನಿವಾರ್ಯ ಸಂದರ್ಭಗಳಲ್ಲಿ ನೀಡುತ್ತಿದ್ದ ಫೋನ್‌ ಕನ್ಸಲ್ಟೇಷನ್‌ ಕೊರೋನಾ ಹಬ್ಬಿರುವ ದುರಿತ ಕಾಲದಲ್ಲಿ ಸಾರ್ವಜನಿಕರೆಲ್ಲರಿಗೂ ನೆರವಿಗೆ ಬರುತ್ತಿದೆ’ ಎಂದು ಡಾ.ಅರವಿಂದ ಪಟೇಲ್‌ ಅಭಿಪ್ರಾಯಪಟ್ಟರು.

‘ನಮಗೆ ಬರುವ ಒಂದು ದೂರವಾಣಿ ಕರೆಯು ಎಲ್ಲಿಯೋ ಇರುವವರ ಆರೋಗ್ಯ ಸಮಸ್ಯೆಯನ್ನು ತಕ್ಕಮಟ್ಟಿಗೆ ಪರಿಹರಿಸಿದರೆ ಲಾಕ್‌ಡೌನ್‌ ಯಶಸ್ಸಾದಂತೆಯೇ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು