ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಸಹಕಾರ ಕ್ಷೇತ್ರಕ್ಕೆ ಗಂಡಾಂತರ- ಎಚ್‌.ಕೆ. ಪಾಟೀಲ ಕಳವಳ

Last Updated 21 ಆಗಸ್ಟ್ 2021, 12:44 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಭಾರತೀಯ ರಿಸರ್ವ್‌ ಬ್ಯಾಂಕಿನ ಹೊಸ ನೀತಿಗಳಿಂದ ಸಹಕಾರ ಕ್ಷೇತ್ರಕ್ಕೆ ಗಂಡಾಂತರ ಬಂದಿದೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಎಚ್‌.ಕೆ. ಪಾಟೀಲ ಕಳವಳ ವ್ಯಕ್ತಪಡಿಸಿದರು.

ಶನಿವಾರ ಇಲ್ಲಿನ ವಿಕಾಸ ಸೌಹಾರ್ದ ಕೋ ಆಪರೇಟಿವ್‌ ಬ್ಯಾಂಕಿನ ಬೆಳ್ಳಿ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ‘ಸಹಕಾರ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆದಿದೆ. ಈ ಕ್ಷೇತ್ರದಲ್ಲಿರುವವರು ಅದನ್ನು ದಿಟ್ಟತನದಿಂದ ಎದುರಿಸಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು’ ಎಂದು ಹೇಳಿದರು.

‘ನಮ್ಮ ಹಿರಿಯರು ಸಹಕಾರ ಕ್ಷೇತ್ರವನ್ನು ಪವಿತ್ರ ಕ್ಷೇತ್ರವಾಗಿ ಬೆಳೆಸಿದ್ದಾರೆ. ಯಾರು ಎಷ್ಟೇ ಹಣ ಕೂಡಿಟ್ಟಿರಲಿ ಎಲ್ಲರೂ ಸಮಾನರು ಎಂಬ ಭಾವನೆ ಇದೆ. ರೈತರು, ಬೀದಿ ಬದಿ ವ್ಯಾಪಾರಿಗಳಿಗೆ ಮೊದಲ ಸಾಲ ಕೊಟ್ಟಿದ್ದು ಸಹಕಾರ ಬ್ಯಾಂಕುಗಳು. ಅನಂತರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಕೊಡಲು ಮುಂದೆ ಬಂದವು’ ಎಂದು ನೆನಪಿಸಿದರು.

‘ಸಣ್ಣ ಸಣ್ಣ ಬ್ಯಾಂಕುಗಳನ್ನು ವಿಲೀನಗೊಳಿಸಿ ಬ್ಯಾಂಕಿಂಗ್‌ ಕ್ಷೇತ್ರ ಹಾಳುಗೆಡವಲಾಗುತ್ತಿದೆ. ಎಲ್ಲ ಬ್ಯಾಂಕುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸುವ್ಯವಸ್ಥಿತವಾಗಿ ನಡೆಯುತ್ತಿವೆ. ಸಣ್ಣ ಬ್ಯಾಂಕುಗಳೆಂದು ಕಾರಣ ಕೊಟ್ಟು ಮುಚ್ಚಲಾಗುತ್ತಿದೆ. ಆರ್‌ಬಿಐ ಇದರಿಂದ ದೂರ ಸರಿಯಬೇಕು’ ಎಂದು ಆಗ್ರಹಿಸಿದರು.

‘ಸಹಕಾರ ಕ್ಷೇತ್ರದಲ್ಲಿ ಕೆಲವು ಲೋಪ ದೋಷಗಳಿರಬಹುದು. ಅವುಗಳನ್ನು ಸರಿಪಡಿಸುವ ಅಗತ್ಯವಿದೆ. ಸಹಕಾರ ಕ್ಷೇತ್ರ ಹಾನಿ ಅನುಭವಿಸಿದಾಗ ಸರ್ಕಾರ ನೆರವಿಗೆ ಬಂದಿಲ್ಲ. ಸಹಕಾರ ಬ್ಯಾಂಕುಗಳಲ್ಲಿ ಹಣ ಇಡದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಅವಿಶ್ವಾಸವಿದ್ದರೂ ಜನರ ಸಹಕಾರದಿಂದ ಈ ಕ್ಷೇತ್ರ ಎತ್ತರಕ್ಕೆ ಬೆಳೆದಿದೆ’ ಎಂದರು.

‘ಸಹಕಾರ ಕ್ಷೇತ್ರ ₹50,000 ಕೋಟಿ ದುಡಿಯುವ ಬಂಡವಾಳದೊಂದಿಗೆ ಕೆಲಸ ನಿರ್ವಹಿಸುತ್ತಿದೆ. ಹೋದ ವರ್ಷ ರಾಜ್ಯದಲ್ಲಿ ₹400 ಕೋಟಿ ಲಾಭ ಆಗಿದೆ. ಇಡೀ ದೇಶದಲ್ಲಿ ಇದು ₹5 ಲಕ್ಷ ಕೋಟಿ. 1,555 ಬ್ಯಾಂಕುಗಳಲ್ಲಿ ಎರಡು ಕೋಟಿ ಸದಸ್ಯರಿದ್ದಾರೆ. ಇಷ್ಟೊಂದು ದೊಡ್ಡ ಕ್ಷೇತ್ರವನ್ನು ಸರ್ಕಾರ ದುರ್ಬಲಗೊಳಿಸಲು ಹೊರಟಿದೆ. ಸಹಕಾರ ಕ್ಷೇತ್ರ, ಕಾರ್ಪೊರೇಟ್‌ನವರನ್ನು ಒಂದೇ ತಕ್ಕಡಿಯಲ್ಲಿ ತೂಕ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್‌. ಕೃಷ್ಣಾರೆಡ್ಡಿ ಮಾತನಾಡಿ, ‘ಕೇಂದ್ರ ಸರ್ಕಾರವು ಹೊಸದಾಗಿ ಸಹಕಾರ ಸಚಿವಾಲಯ ಮಾಡಿದೆ. ಸಹಕಾರ ಕ್ಷೇತ್ರದ ಮಹತ್ವ ಅರಿತು ಈ ತೀರ್ಮಾನಕ್ಕೆ ಬಂದಿರುವ ಸಾಧ್ಯತೆ ಇದೆ’ ಎಂದರು.

ಕುರುಗೋಡಿನ ಕೊಟ್ಟೂರು ಶಾಖಾ ಮಠದ ಪರ್ವತ ದೇವರು, ವಿಕಾಸ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ, ವಿಕಾಸ ಯುವಕ ಮಂಡಳದ ಸಂಸ್ಥಾಪಕ ಅಧ್ಯಕ್ಷ ಕೆ. ದಿವಾಕರ, ಬ್ಯಾಂಕಿನ ಸಿಇಒ ಪ್ರಸನ್ನ ಹಿರೇಮಠ, ವಿಭಾಗೀಯ ವ್ಯವಸ್ಥಾಪಕಿ ಮಧುಶ್ರೀ, ಛಾಯಾ ದಿವಾಕರ ಇದ್ದರು.

ಅಪಪ್ರಚಾರ ನೆನೆದು ಕಣ್ಣೀರಾದರು

‘ವಿಕಾಸ ಯುವಕ ಮಂಡಳಿಯಿಂದ ಆರಂಭಗೊಂಡಿರುವ ಬ್ಯಾಂಕು ಇಂದು ಹೆಮ್ಮರವಾಗಿ ಬೆಳೆದಿದೆ. ಇಡೀ ಬಳ್ಳಾರಿಯಲ್ಲಿ ಸಂಪೂರ್ಣ ಕಂಪ್ಯೂಟರೀಕರಣಗೊಂಡ ಮೊದಲ ಬ್ಯಾಂಕ್‌ ಇದು. 2003ರಲ್ಲಿ ಬ್ಯಾಂಕ್‌ ವಿರುದ್ಧ ಮಾಧ್ಯಮವೊಂದರಲ್ಲಿ ತಪ್ಪು ಸುದ್ದಿ ಪ್ರಕಟಿಸಿದ್ದರಿಂದ ಅನೇಕರು ಹಣ ತೆಗೆದುಕೊಂಡರು. ಆದರೆ, ಆರು ತಿಂಗಳೊಳಗೆ ಅದರ ಎರಡು ಪಟ್ಟು ಠೇವಣಿ ಬಂತು. ಇದೆಲ್ಲ ಸಾಧ್ಯವಾಗಿದ್ದು ಬ್ಯಾಂಕಿನ ಸಿಬ್ಬಂದಿಯ ಶ್ರಮದಿಂದ’ ಎಂದು ವಿಕಾಸ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಹೇಳಿ ಕಣ್ಣೀರಾದರು.

‘2013ರಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ನೀಡಿದ ಸಂದರ್ಭದಲ್ಲೂ ಬ್ಯಾಂಕಿನ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು. ಆದರೆ, ನಾವು ಎದೆಗುಂದಲಿಲ್ಲ’ ಎಂದು ಭಾವುಕರಾಗಿ ನುಡಿದರು.

ಶಂಕುಸ್ಥಾಪನೆಗೆ ಆನಂದ್‌ ಸಿಂಗ್‌

ವಿಕಾಸ ಬ್ಯಾಂಕಿನ ಪ್ರಧಾನ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಚಿವ ಆನಂದ್‌ ಸಿಂಗ್‌ ಸಭಾ ಕಾರ್ಯಕ್ರಮದಿಂದ ದೂರ ಉಳಿದರು.

ಕ್ಷೇತ್ರದಲ್ಲೇ ಇದ್ದರೂ ಜಿಂದಾಲ್‌ ವಾಯುನೆಲೆಗೆ ಶನಿವಾರ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸ್ವಾಗತಿಸಲು ಅವರು ಹೋಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT