ಭಾನುವಾರ, ಸೆಪ್ಟೆಂಬರ್ 20, 2020
22 °C

ಬದುಕಿನ ದಿಕ್ಕು ಬದಲಿಸಿ ಕೊಬ್ಬರಿ ಎಣ್ಣೆ

ಸಿ.ಶಿವಾನಂದ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ: ಕೊಬ್ಬರಿ ಎಣ್ಣೆ ತಯಾರಿಸುವ ಘಟಕ ಸ್ಥಾಪಿಸಿ ಅದರಿಂದ ಬದುಕು ರೂಪಿಸಿಕೊಂಡಿದ್ದಾರೆ ಪಟ್ಟಣದ ನಿವಾಸಿ ಜಿ. ಶಿವಕುಮಾರ.

ಡಿ. ಫಾರ್ಮಸಿ ಓದಿರುವ ಶಿವಕುಮಾರ ಕೆಲಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದರು. ಒಮ್ಮೆ ತಿಪಟೂರಿಗೆ ಹೋಗಿದ್ದ ಅವರು ಕೊಬ್ಬರಿ ಎಣ್ಣೆ ತಯಾರಿಸುವ ಘಟಕಕ್ಕೆ ಭೇಟಿ ಕೊಡುವ ಅವಕಾಶ ಸಿಕ್ಕಿತ್ತು. ಅದರ ಬಗ್ಗೆ ವಿವರವಾಗಿ ತಿಳಿದುಕೊಂಡ ಅವರು, ನಂತರ ₹6 ಲಕ್ಷ ಹೂಡಿಕೆ ಮಾಡಿ ಕೆಲಸ ಆರಂಭಿಸಿಯೇ ಬಿಟ್ಟರು. ಎಲ್ಲವೂ ಅವರು ಅಂದುಕೊಂಡಂತೆ ನಡೆದಿದ್ದರಿಂದ ಒಂದೇ ವರ್ಷದಲ್ಲಿ ಸಾಲ ಮರು ಪಾವತಿಸಿದರು.

1998ರಲ್ಲಿ ಆರಂಭಿಸಿದ ಘಟಕ ಇಂದಿಗೂ ನಡೆಸಿಕೊಂಡು ಹೋಗುತ್ತಿದ್ದಾರೆ. ಎಂದೂ ನಷ್ಟ ಅನುಭವಿಸಿಲ್ಲ. ಅವರ ಘಟಕ ಎಲ್ಲರ ಮನೆ ಮಾತಾಗಿದೆ. ಶಿವಕುಮಾರ ಅವರಿಗೆ ಜನ, ’ಕೊಬ್ಬರಿ ಎಣ್ಣಿ ಶಿವು‘ ಎಂಬ ಹೆಸರಿನಿಂದ ಕರೆಯುತ್ತಾರೆ. ಅವರ ಪ್ರಸಿದ್ಧಿಗೆ ಇದು ನಿದರ್ಶನ.

ಒಂದು ಲೀಟರ್ ಎಣ್ಣೆ ತಯಾರಿಸಲು 2 ಕೆ.ಜಿ.ಕೊಬ್ಬರಿ ಬೇಕಾಗುತ್ತದೆ. ಕಚ್ಚಾ ವಸ್ತು, ದುಡಿಯುವವರಿಗೆ ಕೂಲಿ, ಪ್ಯಾಕಿಂಗ್‌ ಖರ್ಚು ಸೇರಿದಂತೆ ಒಟ್ಟು ₹224 ವೆಚ್ಚ ತಗಲುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ ಎಣ್ಣೆ ₹300ಕ್ಕೆ ಮಾರಾಟವಾಗುತ್ತದೆ. ಕೂದಲಿಗೆ ಬಳಸುವ ಎಣ್ಣೆ ಪ್ರತಿ ಲೀಟರ್‌ಗೆ ₹200, ದೀಪ ಹಚ್ಚಲು ಬಳಸುವ ಎಣ್ಣೆಗೆ ₹110 ಸಗಟಿನಲ್ಲಿ ಮಾರಾಟ ಮಾಡುತ್ತಾರೆ. ನಾಲ್ಕು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ತಿಂಗಳಿಗೆ ಒಬ್ಬರಿಗೆ ತಲಾ ₹6 ಸಾವಿರ ಪಾವತಿಸುತ್ತಾರೆ. ದಿನಕ್ಕೆ 90 ಲೀಟರ್‌ ಎಣ್ಣೆ ತಯಾರಿಸುತ್ತಾರೆ. ತಿಂಗಳಿಗೆ ₹25 ಸಾವಿರ ನಿವ್ವಳ ಲಾಭ ಗಳಿಸುತ್ತಾರೆ.

’ಫಿಲ್ಟರ್ ಆದ ಎಣ್ಣೆಯನ್ನು ಖಾದ್ಯ ತಯಾರಿಕೆಗೆ ಬಳಸಲಾಗುತ್ತದೆ. ನರ ಸಂಬಂಧಿತ ಕಾಯಿಲೆ, ಪಾರ್ಶ್ವವಾಯು ಪೀಡಿತರಿಗೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಟಾನಿಕ್‍ನಂತೆ ಕೆಲಸ ಮಾಡುತ್ತದೆ. ದೇಹಕ ತೂಕ ಇಳಿಕೆಗೂ ಇದೇ ಎಣ್ಣೆಯನ್ನು ಬಹಳ ಜನ ಉಪಯೋಗಿಸುತ್ತಾರೆ. ಯಾವುದೇ ರೀತಿಯ ಸುಗಂಧ ದ್ರವ್ಯ, ರಾಸಾಯನಿಕ ಬಳಸುವುದಿಲ್ಲ. ಹೀಗಾಗಿ ನಮ್ಮಲ್ಲಿ ತಯಾರಾಗುವ ಎಣ್ಣೆಗೆ ಬಹಳ ಬೇಡಿಕೆ ಇದೆ. ಬರುವ ದಿನಗಳಲ್ಲಿ ಈ ಘಟಕವನ್ನು ವಿಸ್ತರಿಸುವ ಆಲೋಚನೆ ಹೊಂದಿದ್ದೇನೆ‘ ಎಂದು ಶಿವಕುಮಾರ ತಿಳಿಸಿದರು.

ಶಿವಕುಮಾರ ಅವರ ಕೆಲಸ ಅವರಿಗಷ್ಟೇ ಸೀಮಿತವಾಗಿಲ್ಲ. ಅವರು ಯುವಕರಿಗೆ ಎಣ್ಣೆ ತಯಾರಿಸುವುದರ ಕುರಿತು ತರಬೇತಿ ನೀಡುವ ಕೆಲಸವೂ ಮಾಡುತ್ತಿದ್ದಾರೆ. ಈಗಾಗಲೇ 20 ಯುವಕರು ಅದರ ಬಗ್ಗೆ ತಿಳಿದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು