ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ ವೃತ್ತಿಪರತೆ, ಕೌಶಲ್ಯ ಕಲಿಸಲಿ: ಪ್ರೊ ಅನಿಲ್‌ ಸಹಸ್ರಬುಧೆ

Last Updated 14 ಮೇ 2019, 7:14 IST
ಅಕ್ಷರ ಗಾತ್ರ

ಬಳ್ಳಾರಿ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆಯ ಜೊತೆಗೆ ಪದವೀಧರರಿಗೆ ವೃತ್ತಿಪರತೆ ಮತ್ತು ಕೌಶಲ್ಯಗಳನ್ನು ಹೇಳಿಕೊಡಬೇಕಾದ ತುರ್ತು ಸನ್ನಿವೇಶವಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುಧೆ ಪ್ರತಿಪಾದಿಸಿದರು.

ನಗರದಲ್ಲಿ‌ ಮಂಗಳವಾರ ನಡೆದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, 'ಬಹುತೇಕ ಪದವೀಧರರಿಗೆ ಏಕೆ ಉದ್ಯೋಗಗಳು‌ ದೊರಕುತ್ತಿಲ್ಲ ಎಂಬುದಕ್ಕೆ, ಅವರಲ್ಲಿ ಸಂವಹನ ‌ಕೌಶಲ್ಯ, ತಂಡದಲ್ಲಿ ಕೆಲಸ ಮಾಡಲು ಬೇಕಾದ ಶಿಸ್ತು, ಬದ್ಧತೆ, ವಿಶ್ಲೇಷಣಾತ್ಮಕ ಚಿಂತನೆಯ ಶಕ್ತಿ, ಕಷ್ಟಕರ ಸನ್ನಿವೇಶದಲ್ಲಿ ನಿರ್ಣಯ ಕೈಗೊಳ್ಳಲು ಬೇಕಾದ ಸಾಮರ್ಥ್ಯ ಇಲ್ಲ ಎಂಬ ಪ್ರಮುಖ ಕಾರಣಗಳನ್ನು ಕೆಲವು ಕೈಗಾರಿಕೆಗಳು ಕೊಟ್ಟಿವೆ. ಈ ನಿಟ್ಟಿನಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಹೊಸ ಬೋಧನಾ ಕ್ರಮಗಳನ್ನು ಅನುಸರಿಸಬೇಕು ಎಂದರು.

ಉದ್ಯಮ ಮತ್ತು ಶಿಕ್ಷಣ ‌ಸಂಸ್ಥೆಗಳ‌ ನಡುವೆ ವಿದ್ಯಾರ್ಥಿ ಸ್ನೇಹಿಯಾದ ಸಂಪರ್ಕಗಳು ಏರ್ಪಡುವುದು ಅತ್ಯವಶ್ಯ. ಕನಿಷ್ಠ ಒಂದು‌ ಸೆಮಿಸ್ಟರ್ ನಲ್ಲಿಯಾದರೂ ಉದ್ಯಮ ಕೈಗಾರಿಕಾ ಮಾಧ್ಯಮದಲ್ಲಿ ಅನುಭವ ಪಡೆಯಲು ಅವಕಾಶ ನೀಡಬೇಕು.‌ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ‌ಇಂಡಿಯಾದಂಥ ಯೋಜನೆಗಳ ಪ್ರಯೋಜನ ಪಡೆಯುವುದು ಅನಿವಾರ್ಯ ಎಂದರು.

ಸ್ವಚ್ಛ ‌ಭಾರತ್ ಅಭಿಯಾನದಂಥ ಕಾರ್ಯಕ್ರಮಗಳು ಸಂಶೋಧನೆಗಳಿಂದ ನಾವೀನ್ಯತೆಯನ್ನು ಪಡೆಯುಬೇಕು. ದೇಶವನ್ನು ಕಟ್ಟುವ ಇಂಥ ಪ್ರಯತ್ನಗಳಲ್ಲಿ ವಿಶ್ವವಿದ್ಯಾಲಯಗಳೂ ಪಾಲ್ಗೊಳ್ಳಬೇಕು. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಯ ಪಾಠಗಳನ್ನು ಹೇಳಿಕೊಡಬೇಕು ಎಂದರು.

ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜಾಲವನ್ನು ಸಮರ್ಪಕವಾಗಿ‌ ಬಳಸಿಕೊಳ್ಳಬೇಕು. ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಗಳು ಸ್ಥಾಪನೆಯಾಗಬೇಕು.‌ ಹಳೆಯ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯೂ ಅತ್ಯಗತ್ಯ ಎಂದರು.

ವಿಶ್ವವಿದ್ಯಲಯಗಳು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸರ್ಕಾರಿ ಕಚೇರಿಗಳಂತೆ ಕೆಲಸ ಮಾಡದೆ, 24ಗಂಟೆಯೂ ಕಾರ್ಯಾಚರಣೆಯಲ್ಲಿರಬೇಕು. ಪೇಟೆಂಟ್, ಸಂಶೋಧನಾ ಪ್ರಕಟಣೆಗಳು ಮತ್ತು ಸಾಮಾಜಿಕ ಬದಲಾವಣೆ ಗಳಿಂದ ಇದು ವ್ಯಕ್ತಗೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಂಸೆ, ಅಪರಾಧ ಮುಕ್ತ, ರೋಗ ಮುಕ್ತ ಮತ್ತು ಬಡತನಮುಕ್ತ ಸಮಾಜ ನಿರ್ಮಿಸುವಂಥ ಶಿಕ್ಷಣವನ್ನು ನೀಡಬೇಕಾಗಿದೆ ಎಂದು
ಮೌಂಟು‌ ಅಬು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಯೋಗ ವಿಭಾಗದ ಅಧ್ಯಕ್ಷ ಮೃತ್ಯುಂಜಯ ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯದ ಹೆಚ್ಚುವರಿ ಮುಖ್ಯಸ್ಥೆ ರಾಜಯೋಗಿನಿ ದಾದಿ ಹೃದಯ ಮೋಹಿನಿಯವರ ಪರವಾಗಿ ಗೌರವ ಡಾಕ್ಟರೇಟ್ ಪದವಿ‌ ಸ್ವೀಕರಿಸಿ ಮಾತನಾಡಿದ ಅವರು, ಅಧ್ಯಾತ್ಮದ ಅಂಶಗಳು ಶಿಕ್ಷಣದಲ್ಲಿ ಇಲ್ಲದಿರುವುದರಿಂದಲೇ ಸಮಾಜ ಅಶಾಂತವಾಗಿರಲು ಕಾರಣ. ವಿಶ್ವವಿದ್ಯಾಲಯಗಳು ಈ ನಿಟ್ಟಿನಲ್ಲಿ ಹೊಸ ಪ್ರಯತ್ನವನ್ನು ಆರಂಭಿಸಬೇಕು ಎಂದರು.

ಕುಲಪತಿ‌ ಪ್ರೊ. ಎಂ.ಎಸ್.ಸುಭಾಷ್, ಆಡಳಿತ ಕುಲಸಚಿವೆ‌ ಪ್ರೊ.ಬಿ.ಕೆ.ತುಳಸಿ ಮಾಲಾ, ಮೌಲ್ಯಮಾಪನ ಕುಲಸಚಿವ ‌ಪ್ರೊ.ಜೆ.ರಮೇಶ್ ಇದ್ದರು.

ಕುಲಾಧಿಪತಿಯಾದ ರಾಜ್ಯಪಾಲ ವಾಜುಭಾಯಿ ವಾಲ, ಉನ್ನತ ಶಿಕ್ಷಣ ಸಚಿವ ‌ಜಿ.ಟಿ.ದೇವೇಗೌಡ ಘಟಿಕೋತ್ಸವದಲ್ಲಿ ಪಾಲ್ಗೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT