ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Last Updated 16 ಫೆಬ್ರುವರಿ 2021, 7:27 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ತೈಲ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಿಂದ ಪ್ರಮುಖ ಮಾರ್ಗಗಳ ಮೂಲಕ ರೋಟರಿ ವೃತ್ತದವರೆಗೆ ರ್ಯಾಲಿ ನಡೆಸಿದರು. ಚಕ್ಕಡಿ, ಟ್ರ್ಯಾಕ್ಟರ್‌ಗಳು ಇದ್ದವು. ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಹಶೀಲ್ದಾರ್ ಕಚೇರಿ ಎದುರು ಸಮಾವೇಶಗೊಂಡ ಕಾರ್ಯಕರ್ತರು ಅಲ್ಲಿ ಧರಣಿ ನಡೆಸಿದರು. ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು, ರಸ್ತೆಬದಿ ಒಲೆ ಹೊತ್ತಿಸಿ ಅಡುಗೆ ಮಾಡಿ ಗಮನ ಸೆಳೆದರು.

'ಪೆಟ್ರೋಲ್, ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಿದೆ. ವಾರದೊಳಗೆ ಸಿಲಿಂಡರ್ ದರ 100 ರೂಪಾಯಿ ಹೆಚ್ಚಾಗಿದೆ. ಬೇಳೆ ಕಾಳು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದಾಗಿ ಬಡವರು, ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟವಾಗಿದೆ' ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಅಂಬಾನಿ, ಅದಾನಿ ಜತೆ ಮಾತನಾಡಲು ಸಮಯವಿದೆ. ಆದರೆ, ರೈತರ ಸಮಸ್ಯೆ ಆಲಿಸಲು ಸಮಯವಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಶ್ರಮಿಸುತ್ತಿಲ್ಲ. ಜನಸಾಮಾನ್ಯರ ಬಗ್ಗೆ ಅವರಿಗೆ ಕನಿಷ್ಠ ಕಾಳಜಿ ಇಲ್ಲ. ರಾಜ್ಯ ಸರ್ಕಾರ ಬಡವರಿಂದ ಬಿಪಿಎಲ್ ಕಾರ್ಡು ಕಸಿದುಕೊಳ್ಳಲು ಹುನ್ನಾರ ನಡೆಸಿದೆ ಎಂದು ಟೀಕಿಸಿದರು.

ಮುಖಂಡ ವೆಂಕಟರಾವ ಘೋರ್ಪಡೆ ಮಾತನಾಡಿ, ಅಗತ್ಯ ವಸ್ತುಗಳ ಕಾಯ್ದೆ ರದ್ದುಪಡಿಸಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಜನಸಾಮಾನ್ಯರು, ಬಡವರನ್ನು ಮುಗಿಸಲು ಹೊರಟಿದ್ದಾರೆ ಎಂದರು.

ಮುಖಂಡರಾದ ಗುಜ್ಜಲ್ ನಾಗರಾಜ, ಎಂ.ಸಿ.ವೀರಸ್ವಾಮಿ, ಆಶಾಲತಾ, ಮುನ್ನಿ, ನಿಂಬಗಲ್ ರಾಮಕೃಷ್ಣ, ಕುಬೇರ್ ದಲ್ಲಾಳಿ, ಭರತ್ ಕುಮಾರ್, ರಾಮನಗೌಡ, ಟಿ. ವೆಂಕಟೇಶ, ಲಿಯಾಕತ್ ಅಲಿ, ತೇಜ ನಾಯ್ಕ, ತಾಜುದ್ದೀನ್, ದೇವರಮನಿ ಕನ್ನೇಶ್ವರ, ಅಂಕ್ಲೇಶ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT