ಬುಧವಾರ, ಮಾರ್ಚ್ 3, 2021
19 °C
ಜೋಳದರಾಶಿ ಚೆಕ್‌ ಪೋಸ್ಟ್‌ನಲ್ಲಷ್ಟೇ ಅವಕಾಶ; ಗುಂಟೂರು, ಚಿತ್ತೂರಿನಿಂದ ಬಂದವರ ಕ್ವಾರಂಟೈನ್

ಬಳ್ಳಾರಿ | ಜಿಲ್ಲೆಯ ಪ್ರವೇಶಕ್ಕೆ ಒಂದೇ ದಾರಿ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಆಂಧ್ರದಿಂದ ಜಿಲ್ಲೆಗೆ ಬರಲು ಇದ್ದ ಎಲ್ಲ ದಾರಿಗಳನ್ನೂ ಈಗ ಮುಚ್ಚಲಾಗಿದೆ. ಚೆಕ್‌ಪೋಸ್ಟ್‌ಗಳೂ ಪೂರ್ಣ ಬಂದ್‌ ಆಗಿವೆ.

ಬರುವವರು ಯಾರೇ ಆಗಿದ್ದರೂ ಜೋಳದರಾಶಿಯಲ್ಲಿರುವ ಅಂತರರಾಜ್ಯ ಚೆಕ್‌ ಪೋಸ್ಟ್‌ ಮೂಲಕವೇ ಬರಬೇಕು. ಕರ್ನೂಲು ಮತ್ತು ಅನಂತಪುರದಿಂದ ಬರುವವರ ಸಂಖ್ಯೆ ಇದರಿಂದ ಗಣನೀಯವಾಗಿ ಕಡಿಮೆಯಾಗಿದೆ.

ರಾಜ್ಯ ಸರ್ಕಾರವು ಸೂಚನೆ ನೀಡಿದ ಬಳಿಕ ಜಿಲ್ಲಾಡಳಿತ ಎಲ್ಲ ಅಂತರರಾಜ್ಯ ಚೆಕ್‌ ಪೋಸ್ಟ್‌ಗಳನ್ನು ಮುಚ್ಚಿದ್ದು, ಜೋಳದರಾಶಿ ಚೆಕ್‌ಪೋಸ್ಟ್‌ನಲ್ಲೇ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್‌ಗೆ ಕಳಿಸುತ್ತಿದೆ. ಸೇವಾ ಸಿಂಧುವಿನ ಮೂಲಕ ಅರ್ಜಿ ಸಲ್ಲಿಸಿ ಪಾಸ್‌ ಪಡೆದವರಿಗಷ್ಟೇ ಪ್ರವೇಶಕ್ಕೆ ಅನುವು ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಈ ಮುನ್ನ 14 ಅಂತರರಾಜ್ಯ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಸಲಾಗಿದ್ದು, ಲಾಕ್‌ಡೌನ್‌ ಸಡಿಲಿಕೆ ಬಳಿಕ ಅವುಗಳನ್ನು 11ಕ್ಕೆ ಇಳಿಸಲಾಗಿದೆ. ಈಗ ಈ ಜೋಳದರಾಶಿ ಚೆಕ್‌ ಪೋಸ್ಟ್‌ ಹೊರತುಪಡಿಸಿ ಮಿಕ್ಕೆಲ್ಲ ಚೆಕ್‌ಪೋಸ್ಟ್‌ಗಳ ಮೂಲಕ ವಾಹನ ಸಂಚಾರ ಸಂಪೂರ್ಣ ಬಂದ್‌ ಮಾಡಲಾಗಿದೆ.

ಆಂಧ್ರದ ಗಡಿಭಾಗದಲ್ಲಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಸೇರಿದ ಚೇಳಗುರ್ಕಿ ಕ್ರಾಸ್‌, ಕಾರೇಕಲ್ಲು, ರೂಪನಗುಡಿ, ಹಲಕುಂದಿ, ಎತ್ತಿನ ಬೂದಿಹಾಳ್‌, ಸಿಂಧುವಾಳ ಕ್ರಾಸ್‌, ಬಿ.ಡಿ.ಹಳ್ಳಿ, ಗೋಡೆಹಾಳ್‌ ಕ್ರಾಸ್‌, ಸಿರುಗುಪ್ಪ ತಾಲ್ಲೂಕಿನ ವತ್ತುಮುರಣಿ, ಇಟಗಿಹಾಳ್‌ ಹಾಗೂ ಕೆ.ಬೆಳಗಲ್‌ನಲ್ಲಿ ಚೆಕ್‌ಪೋಸ್ಟ್‌ಗಳನ್ನು ಬಂದ್‌ ಆಗಿವೆ.

ಚೇಳಗುರ್ಕಿ ಕ್ರಾಸ್‌ನಲ್ಲಿರುವ ಜೋಳದರಾಶಿ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರದಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೊರ
ರಾಜ್ಯಗಳಿಂದ ಜಿಲ್ಲೆಗೆ ಪಾಸ್‌ ಜೊತೆಗೆ ಬರುವ ಸ್ಥಳೀಯರ ಆರೋಗ್ಯ ತಪಾಸಣೆ ಮಾಡಿ, ಕಡ್ಡಾಯವಾಗಿ ಸಾಂಸ್ಥಿಕ
ಕ್ವಾರಂಟೈನ್‌ಗೆ ಕಳಿಸಲಾಗುತ್ತಿದೆ. ಚೆಕ್‌ಪೋಸ್ಟ್‌ ಬಳಿಕ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈಗಾಗಲೇ 130ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ನಿಯಂತ್ರಣವೇ ಸವಾಲು: ಆಂಧ್ರ ಪ್ರದೇಶ ರಾಜ್ಯದ ಕರ್ನೂಲು ಮತ್ತು ಅನಂತಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿನ ಗಡಿಭಾಗದ ಜನ ಜಿಲ್ಲೆಗೆ ಅಡ್ಡದಾರಿಗಳಿಂದ ಬರುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಒಂದೇ ಚೆಕ್‌ಪೋಸ್ಟ್‌ ಮೂಲಕ ಬರುವ ಅವಕಾಶವಿರುವುದರಿಂದ ಸನ್ನಿವೇಶ ಈಗ ಸುಧಾರಿಸಿದೆ.

ಏಳು ತಂಡ, ಮೂರು ಪಾಳಿ
ಬಳ್ಳಾರಿ: ಚೆಕ್‌ಪೋಸ್ಟ್‌ನಲ್ಲಿ ಕಂದಾಯ ಇಲಾಖೆಯ ಏಳು ತಂಡಗಳ 45 ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಎರಡು ತಂಡಗಳ ಹತ್ತು ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರಿಗೂ ಶಾಲೆಯಲ್ಲೇ ಊಟ, ವಸತಿ ಸೌಕರ್ಯವನ್ನು ನೀಡಲಾಗಿದೆ.

ಶನಿವಾರ ಗುಂಟೂರು ಮತ್ತು ಚಿತ್ತೂರಿನಿಂದ ಬಂದ 130 ಮಂದಿಯನ್ನು ಶಾಲೆಯಲ್ಲೇ ಕ್ವಾರಂಟೈನ್‌ನಲ್ಲಿಡಲಾಗಿದೆ. ಸುಮಾರು 5 ಸಾವಿರ ಮಂದಿ ಜಿಲ್ಲೆಗೆ ವಾಪಸಾಗುವ ನಿರೀಕ್ಷೆ ಇದೆ’ ಎಂದು ಚೆಕ್‌ಪೋಸ್ಟ್‌ಗಳ ನೋಡಲ್‌ ಅಧಿಕಾರಿ ಈರಣ್ಣ ಬಿರಾದಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ವಾರಂಟೈನ್‌ಗೆ ಹೆದರಿದ ದಂಪತಿ!
ಬಳ್ಳಾರಿ: ಚೆಕ್‌ಪೋಸ್ಟ್‌ ಸಮೀಪದ ಚಾನಾಳ್‌ ಗ್ರಾಮದಲ್ಲಿರುವ ತಮ್ಮ ಮಗಳ ಮನೆಗೆ ಹೋಗಲೆಂದು ಶನಿವಾರ ಬಂದಿದ್ದ ಕರ್ನೂಲ್‌ ಜಿಲ್ಲೆಯ ಧೋನ್‌ ಪಟ್ಟಣದ ಮಲ್ಲಪ್ಪ ದಂಪತಿ ವಾಪಸು ಹೋದರು.

ಕಾರಿನಲ್ಲಿ ಆಂಧ್ರದ ಪತ್ರಕರ್ತರೊಬ್ಬರ ಸಹಾಯದೊಂದಿಗೆ ಕಾರಿನಲ್ಲಿ ಬಂದಿದ್ದ ಅವರಿಗೆ ನೋಡಲ್‌ ಅಧಿಕಾರಿ ಈರಣ್ಣ ಬಿರಾದಾರ್‌, ‘ಕಡ್ಡಾಯವಾಗಿ 14 ದಿನ ಕ್ವಾರಂಟೈನ್‌ಗೆ ಕಳಿಸಲಾಗುವುದು. ಅದಕ್ಕೆ ಒಪ್ಪಿಗೆ ಇದ್ದರೆ ಮಾತ್ರ ಬನ್ನಿ’ ಎಂದು ಸ್ಪಷ್ಟಪಡಿಸಿದ್ದರು.

‘ಕ್ವಾರಂಟೈನ್‌ಗೆ ಕಳಿಸಬೇಡಿ’ ಎಂದು ದಂಪತಿ ಕೈಮುಗಿದು ಪರಿಪರಿಯಾಗಿ ಕೇಳಿದರೂ ಒಪ್ಪಲಿಲ್ಲ. ಹೀಗಾಗಿ ‘ಕ್ವಾರಂಟೈನ್‌ ಬೇಡ. ನಾವು ನಮ್ಮೂರಿಗೆ ವಾಪಸು ಹೋಗುತ್ತೇವೆ’ ಎಂದು ದಂಪತಿ ಅಲ್ಲಿಂದ ತೆರಳಿದರು.

*
ಹೊರರಾಜ್ಯಗಳಿಂದ ಬರುವವರೆಲ್ಲರ ಆರೋಗ್ಯ ತಪಾಸಣೆ ಮಾಡಿ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿಡಲಾಗುತ್ತಿದೆ.
-ಈರಣ್ಣ ಬಿರಾದಾರ್‌, ಚೆಕ್‌ಪೋಸ್ಟ್‌ ನೋಡಲ್‌ ಅಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು