ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರಲಿಂಗ ಕ್ಷೇತ್ರಕ್ಕೆ 'ಅಪಚಾರ': ಡಿಕೆಶಿಯಿಂದ ಬೆಳ್ಳಿ ಹೆಲಿಕಾಪ್ಟರ್ ಅರ್ಪಣೆ

Last Updated 18 ಡಿಸೆಂಬರ್ 2020, 8:54 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಕ್ರವಾರ ಭೇಟಿ ನೀಡಿ, ಮೈಲಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

2018 ರ ಫೆಬ್ರವರಿಯಲ್ಲಿ ಸುಕ್ಷೇತ್ರದಲ್ಲಿ ಜರುಗಿದ ಕಾರಣೀಕ ಮಹೋತ್ಸವಕ್ಕೆ ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು. ಸುಕ್ಷೇತ್ರದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿ ಇಲ್ಲಿನ ದೈವಿಕ ಪರಂಪರೆಗೆ ಡಿಕೆಶಿ ಅಪಚಾರ ಎಸಗಿ, ಸ್ವಾಮಿಯ ಅವಕೃಪೆಗೆ ಗುರಿಯಾಗಿದ್ದಾರೆ ಎಂದು ವ್ಯಾಖ್ಯಾನಿಸಲಾಗಿತ್ತು. ಕಾಕತಾಳೀಯ ಎಂಬಂತೆ ಕೆಲವೇ ದಿನಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿಗೆ ತುತ್ತಾಗಿ ಜೈಲು ಸೇರಿದ್ದರು. ಆಗ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಸ್ವಾಮಿಗೆ ಪೂಜೆ ಸಲ್ಲಿಸಿದ್ದರು.

ಆ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಇಂದು ಬೆಳಿಗ್ಗೆ ಸುಕ್ಷೇತ್ರಕ್ಕೆ ಭೇಟಿ ನೀಡಿ, ಸ್ವಾಮಿ ಸನ್ನಿಧಿಯಲ್ಲಿ ದೀರ್ಘದಂಡ ನಮಸ್ಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬೆಳ್ಳಿ ಹೆಲಿಕಾಪ್ಟರ್ ಮಾದರಿಯನ್ನು ಸ್ವಾಮಿಗೆ ಅರ್ಪಿಸಿದರು.

'ಮಾಹಿತಿ ಕೊರತೆಯಿಂದ ಈ ಹಿಂದೆ ಸುಕ್ಷೇತ್ರಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದು ಹೋಗಿದ್ದೆ. ಸುಕ್ಷೇತ್ರದ ಧಾರ್ಮಿಕ ಪರಂಪರೆಗೆ ಅಪಚಾರವಾಗಿದೆ ಎಂದು ನಂತರ ತಿಳಿಯಿತು. ನಮ್ಮ ಕಾರ್ಯಕರ್ತರು, ಮುಖಂಡರು ದೋಷ ಪರಿಹಾರವಾಗಿ ಈಗಾಗಲೇ ಪೂಜೆ ಸಲ್ಲಿಸಿದ್ದಾರೆ. ಕಾರ್ಯಕರ್ತರ ಅಭಿಲಾಷೆಯಂತೆ ಸ್ವಾಮಿಯಲ್ಲಿ ಕ್ಷಮಾ ಕೋರಿ ಪೂಜೆ ಸಲ್ಲಿಸಿದ್ದೇನೆ. ನನ್ನ ಕಾರ್ಯಕರ್ತರೊಬ್ಬರು ಸ್ವಾಮಿಗೆ ಬೆಳ್ಳಿ ಹೆಲಿಕಾಪ್ಟರ್ ಅರ್ಪಿಸಿದ್ದಾರೆ. ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ'ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸುಕ್ಷೇತ್ರದ ಧರ್ಮಕರ್ತ ವೆಂಕಪ್ಪಯ್ಯ ಮಾತನಾಡಿ, ಕಾರಣೀಕ ವೇಳೆ ಅಪಾರ ಭಕ್ತರು ಕಾಲ್ನಡಗಿಯಲ್ಲೇ ಸುಕ್ಷೇತ್ರಕ್ಕೆ ಬಂದು ಹೋಗುತ್ತಾರೆ. ಮೈಲಾರಲಿಂಗಸ್ವಾಮಿ ಸ್ವಾಮಿಯ ಗೋಪುರದ ಮೇಲೆ ಹೆಲಿಕಾಪ್ಟರ್ ನಲ್ಲಿ ಹಾರಾಡುವುದು ಅಪಚಾರ ಮಾಡಿದಂತಾಗುತ್ತದೆ. ಮಾಹಿತಿಕೊರತೆಯಿಂದ ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ ನಲ್ಲಿ ಬಂದು ಹೋಗಿ ತಪ್ಪು ಮಾಡಿದ್ದರು. ಇದೀಗ ಸ್ವಾಮಿಯಲ್ಲಿ ಕ್ಷಮಾ ಕೋರಿ ಪೂಜೆ ಸಲ್ಲಿಸಿದ್ದಾರೆ. ಅವರ ತಪ್ಪುಗಳನ್ನು ಮೈಲಾರಲಿಂಗಸ್ವಾಮಿ ಮನ್ನಿಸಿದ್ದಾನೆ.ಸ್ವಾಮಿಯ ಕೃಪೆಯಿಂದ ಬರುವ ದಿನಗಳಲ್ಲಿ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಬರಲಿದೆ ಎಂದು ಹೇಳಿದರು. ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT