ಮಂಗಳವಾರ, ನವೆಂಬರ್ 24, 2020
25 °C
ಧರ್ಮದಗುಡ್ಡದಲ್ಲಿ ವಿಜಯದಶಮಿ ಕಾರ್ಯಕ್ರಮಕ್ಕೆ ಚಾಲನೆ

ಹೊಸಪೇಟೆ: ಆಯುಧ ಪೂಜೆ, 21 ಪಲ್ಲಕ್ಕಿಗಳ ಭವ್ಯ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ತಾಲ್ಲೂಕಿನ ಬಸವನದುರ್ಗ ಸಮೀಪದ ಧರ್ಮದಗುಡ್ಡದಲ್ಲಿ ಭಾನುವಾರ ಸಂಜೆ ಆಯುಧಪೂಜೆ ಶ್ರದ್ಧಾ, ಭಕ್ತಿಯ ನಡುವೆ ನೆರವೇರಿತು.

ನೆರೆದ ನೂರಾರು ಜನರ ಉಪಸ್ಥಿತಿಯಲ್ಲಿ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ವಿಜಯದಶಮಿಯ ಒಂದು ದಿನ ಮುಂಚಿತವಾಗಿಯೇ ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು.

ಸಂಜೆ ಬಸವನದುರ್ಗದ ಓಬಳಾಪುರ ಗುಡಿಯಲ್ಲಿ ಚನ್ನಬಸವಣ್ಣ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಅಲ್ಲಿಂದ ಚನ್ನಬಸವಣ್ಣ ದೇವರ ಪಲ್ಲಕ್ಕಿಯನ್ನು ಹೊತ್ತು ಭಕ್ತರು ಧರ್ಮದಗುಡ್ಡದವರೆಗೆ ಹೆಜ್ಜೆ ಹಾಕಿದರು. ಈ ವೇಳೆ ಜಯಘೋಷ ಮುಗಿಲು ಮುಟ್ಟಿತ್ತು.

ಧರ್ಮದಗುಡ್ಡದಲ್ಲಿ ಚನ್ನಬಸವಣ್ಣನವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬನ್ನಿ ಮರದ ಸುತ್ತ ಪಲ್ಲಕ್ಕಿಯೊಂದಿಗೆ ಭಕ್ತರು ಪ್ರದಕ್ಷಿಣೆ ಹಾಕಿದರು. ನಗರದ ಮ್ಯಾಸಕೇರಿಯಲ್ಲಿ ಹುಲಿಗೆಮ್ಮ–ಕೊಂಗಮ್ಮ ದೇವಿ, ಉಕ್ಕಡಕೇರಿ–ಜಲದುರ್ಗಮ್ಮ, ತಳವಾರಕೇರಿ–ರಾಂಪುರ ದುರ್ಗಮ್ಮ, ಬಾಣದಕೇರಿ–ನಿಜಲಿಂಗಮ್ಮ, ಚಿತ್ರಕೇರಿ–ತಾಯಮ್ಮ, ಹರಿಜನಕೇರಿ–ಹುಲಿಗೆಮ್ಮ, ಮಾಯಮ್ಮ ಹಾಗೂ ರಾಂಪುರ ದುರ್ಗಮ್ಮ ದೇವಿ ಸೇರಿದಂತೆ ಒಟ್ಟು 21 ದೇವರುಗಳನ್ನು ಅಲಂಕರಿಸಿದ ಪಲ್ಲಕ್ಕಿಯನ್ನು ಹೊತ್ತು ಭಕ್ತರು ಧರ್ಮದಗುಡ್ಡಕ್ಕೆ ಬಂದರು. ಎಲ್ಲ ಪಲ್ಲಕ್ಕಿಗಳು ಬನ್ನಿ ಮರ ಸುತ್ತಿದ ನಂತರ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ಅರಣ್ಯ ಸಚಿವ ಆನಂದ್‌ ಸಿಂಗ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ ಇದ್ದರು.

ಅನಂತರ ಪುನಃ ಎಲ್ಲ ದೇವರುಗಳ ಪಲ್ಲಕ್ಕಿಗಳು ನಗರದ ರಾಮಾ ಟಾಕೀಸ್‌ಗೆ ಹಿಂತಿರುಗಿದವು. ಅಲ್ಲಿ ಭಕ್ತರು ಸ್ವಾಗತ ಕೋರಿದರು. ಆಯಾ ಕೇರಿಯ ಜನ ಅವರ ದೇವರನ್ನು ಕೋಲಾಟ, ನೃತ್ಯದ ಮೂಲಕ ಬರಮಾಡಿಕೊಂಡರು. ಅದನ್ನು ಕಣ್ತುಂಬಿಕೊಳ್ಳಲು ಜನ ಸೇರಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಈ ಸಲ ಪೊಲೀಸರು ಒಂದು ಪಲ್ಲಕ್ಕಿ ಹೊರಲು, ಅದರ ಸುತ್ತಮುತ್ತ ಇರುವುದಕ್ಕೆ 25 ಜನರಿಗಷ್ಟೇ ಅವಕಾಶ ಕಲ್ಪಿಸಿ, ಅವರಿಗೆ ಪಾಸ್‌ಗಳನ್ನು ವಿತರಿಸಿದ್ದರು. ಹೀಗಾಗಿ ನೂಕುನುಗ್ಗಲು ಉಂಟಾಗಲಿಲ್ಲ. ಆದರೆ, ಗುಡ್ಡದಿಂದ ಬನ್ನಿ ಮರದ ವರೆಗೆ ಪಲ್ಲಕ್ಕಿಗಳನ್ನು ಹೊತ್ತು ತರುವಾಗ ನೂಕು ನುಗ್ಗಲು ಕಂಡು ಬಂತು.

ನಾಗೇನಹಳ್ಳಿ, ಧರ್ಮದಗುಡ್ಡ ಮಾರ್ಗ, ಹಂಪಿ ರಸ್ತೆ, ರಾಮ ಟಾಕೀಸ್‌, ವಾಲ್ಮೀಕಿ ವೃತ್ತದಲ್ಲಿ ದಿನವಿಡೀ ಜಾತ್ರೆಯ ವಾತಾವರಣ ಇತ್ತು. ತಾಲ್ಲೂಕಿನ ಕಮಲಾಪುರದ ಏಳು ಕೇರಿಗಳಲ್ಲೂ ದಸರಾ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

ವಾಹನಗಳಿಗೆ ಪೂಜೆ: ಆಯುಧಪೂಜೆ ಪ್ರಯುಕ್ತ ಸೋಮವಾರ ನಗರದಲ್ಲಿ ಜನ ತಮ್ಮ ಮನೆಯಲ್ಲಿರುವ ವಸ್ತುಗಳು, ವಾಹನಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ನಗರದ ಏಳುಕೇರಿಗಳಲ್ಲಿ ಹಬ್ಬದ ಸಂಭ್ರಮ ಮೇರೆ ಮೀರಿತ್ತು. ಎಲ್ಲ ಕೇರಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರತಿಯೊಂದು ಕೇರಿಯ ಮನೆಯಂಗಳ ಬಗೆಬಗೆಯ ರಂಗೋಲಿಯಿಂದ ಕಂಗೊಳಿಸಿದವು.


ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ ಸಮುಹ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು