ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿವಿ: ಪ್ರೊಬೆಷನರಿ ಅವಧಿ ಘೋಷಿಸಲು ಲಕ್ಷ ಲಕ್ಷ ಹಣಕ್ಕೆ ಬೇಡಿಕೆ!

9 ಜನ ಬೋಧಕ, 5 ಮಂದಿ ಬೋಧಕೇತರ ಸಿಬ್ಬಂದಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ
Last Updated 21 ನವೆಂಬರ್ 2021, 8:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಯ ಪ್ರೊಬೆಷನರಿ ಅವಧಿ ಕೊನೆಗೊಂಡಿದೆ ಎಂದು ಘೋಷಿಸಲು ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

2018ರ ಮಾರ್ಚ್‌ 27ರಂದು ಇಬ್ಬರು ಸಹ ಪ್ರಾಧ್ಯಾಪಕ, 7 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಸಹ ಪ್ರಾಧ್ಯಾಪಕರಾಗಿ ವೆಂಕಟಗಿರಿ ದಳವಾಯಿ, ಅಮರೇಶ ಯತಗಲ್‌, ಸಹಾಯಕ ಪ್ರಾಧ್ಯಾಪಕರಾಗಿ ಯರ‍್ರಿಸ್ವಾಮಿ ಈ., ಶಾಂತಪ್ಪ, ಗೋವರ್ಧನ್‌, ಗೀತಮ್ಮ, ಮೋಹನ್‌ರಾವ್‌ ಪಾಂಚಾಳ, ಗೋವಿಂದ, ಜಯದೇವಿ ಜಂಗಮಶೆಟ್ಟಿ ಆಯ್ಕೆಯಾಗಿದ್ದರು.

ಜಯದೇವಿ ಜಂಗಮಶೆಟ್ಟಿ ಅವರು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ತೆರಳಿದ್ದಾರೆ. ಇವರೆಲ್ಲರ ಜೊತೆಯಲ್ಲೇ 5 ಜನ ಬೋಧಕೇತರ ಸಿಬ್ಬಂದಿಯೂ ನೇಮಕಗೊಂಡಿದ್ದರು. ಎಲ್ಲ 14 ಜನರ ಪ್ರೊಬೆಷನರಿ ಅವಧಿ 2020ರ ಮಾರ್ಚ್‌ನಲ್ಲೇ ಮುಗಿದಿದೆ. ವಿಶ್ವವಿದ್ಯಾಲಯದ ಪರಿನಿಯಮದ ಪ್ರಕಾರ, ಇವರ ಪ್ರೊಬೆಷನರಿ ಅವಧಿ ಕೊನೆಗೊಂಡಿದೆ ಎಂದು ಘೋಷಿಸಿ ಕಾಯಂ ನೌಕರರೆಂದು ಮಾನ್ಯ ಮಾಡಬೇಕು. ಆದರೆ, ಈ ಕೆಲಸ ಮಾಡಿಲ್ಲ.

ಪ್ರೊಬೆಷನರಿ ಅವಧಿಯಲ್ಲಿ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಾದರು ಕೂಡ ನ್ಯಾಯಾಲಯದ ತೀರ್ಪಿಗೆ ಒಳಪಟ್ಟು ಪ್ರೊಬೆಷನರಿ ಅವಧಿ ಮುಗಿದಿದೆ ಎಂದು ಘೋಷಿಸಬೇಕು. ಆದರೆ, 14 ಜನರಲ್ಲಿ ಯಾರ ವಿರುದ್ಧವೂ ಮೊಕದ್ದಮೆ ಇಲ್ಲ. ಅಲ್ಲದೇ, ಕಳೆದ ಎಂಟು ತಿಂಗಳಿಂದ ಇವರ ವೇತನ ತಡೆ ಹಿಡಿಯಲಾಗಿದೆ. ಎರಡು ಸಲ ವಾರ್ಷಿಕ ವೇತನ ಬಡ್ತಿ ಕಡಿತಗೊಳಿಸಲಾಗಿದೆ. ಇಷ್ಟೇ ಅಲ್ಲ, ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ, ರಾಜ್ಯಪಾಲರ ಅನುಮೋದನೆ ನಂತರ ಘೋಷಿಸಲಾಗುವುದು ಎಂದು ಹಿಂಬರಹ ಕೊಟ್ಟಿದ್ದಾರೆ. ಆದರೆ, ರಾಜ್ಯಪಾಲರ ಅನುಮೋದನೆಯ ನಿರೀಕ್ಷೆಯಲ್ಲಿ ಪ್ರೊಬೆಷನರಿ ಅವಧಿ ಮುಗಿದಿದೆ ಎಂದು ಘೋಷಿಸುವ ಅಧಿಕಾರ ಕುಲಪತಿ, ಕುಲಸಚಿವರಿಗೆ ಇದೆ.

ಅದಕ್ಕೆ ನಿದರ್ಶನ 2000ನೇ ಇಸ್ವಿ ಜೂನ್‌ 30ರಂದು ಪ್ರೊಬೆಷನರಿ ಅವಧಿ ಮುಗಿಸಿರುವ 44 ಸಿಬ್ಬಂದಿ. ಹಾಲಿ ಕುಲಪತಿ ಪ್ರೊ. ಸ.ಚಿ. ರಮೇಶ, ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಸೇರಿದಂತೆ ಒಟ್ಟು 44 ಜನರ ಪ್ರೊಬೆಷನರಿ ಅವಧಿ ಮುಗಿದಿತ್ತು. ‘1995–96, 1997ರಲ್ಲಿ ನೇಮಕಗೊಂಡ ಬೋಧಕರು ಪ್ರೊಬೆಷನರಿ ಅವಧಿಯನ್ನು ಸಮರ್ಪಕವಾಗಿ ಪೂರೈಸಿದ್ದಾರೆ. ರಾಜ್ಯಪಾಲರ (ಕುಲಾಧಿಪತಿ) ಅನುಮೋದನೆಯನ್ನು ನಿರೀಕ್ಷಿಸಿ ಘೋಷಿಸಲು ತೀರ್ಮಾನಿಸಿದೆ’ ಎಂದು ಕುಲಸಚಿವರು 2000ನೇ ಇಸ್ವಿ ಜೂನ್‌ 30ರಂದು ಆದೇಶಿಸಿದ್ದರು.

‘ವಾಸ್ತವ ಹೀಗಿರುವಾಗ ಸದ್ಯ ಅಧಿಕಾರದಲ್ಲಿರುವವರು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಅವರು ಬೇಡಿಕೆ ಇಟ್ಟಷ್ಟು ಹಣ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಪ್ರೊಬೆಷನರಿ ಸಿಬ್ಬಂದಿ ಆರೋಪಿಸಿದರು.

ಕಾರಣ ಕೇಳಿ ನೋಟಿಸ್‌
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರ ಅನುಮತಿಯಿಲ್ಲದೇ ಸಹ ಪ್ರಾಧ್ಯಾಪಕ ಎಂ. ಮಲ್ಲಿಕಾರ್ಜುನಗೌಡ ಅವರಿಗೆ ವಿಭಾಗದ ಕೀಲಿ ಕೈ, ಹಾಜರಾತಿ ಪುಸ್ತಕ ಮತ್ತು ಇತರೆ ದಾಖಲೆಗಳನ್ನು ಕೊಟ್ಟಿರುವ ಕಿರಿಯ ಸಹಾಯಕ ಸೋಮಣ್ಣ ಸೂಡಿ ಅವರಿಗೆ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರು ಕಾರಣ ಕೇಳಿ ನೋಟಿಸ್‌ ಕೊಟ್ಟಿದ್ದಾರೆ.

ಅಕ್ಟೋಬರ್‌ 30ಕ್ಕೆ ಮಲ್ಲಿಕಾರ್ಜುನಗೌಡ ಅವರನ್ನು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಕೂಡಲಸಂಗಮ ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರಕ್ಕೆ ವರ್ಗಾವಣೆಗೊಳಿಸಲಾಗಿತ್ತು. ‘ನನಗೆ ನ. 2ರಂದು ವರ್ಗಾವಣೆ ಪತ್ರ ಸಿಕ್ಕಿತ್ತು. ಆದರೆ, ನಾನು ಕರ್ತವ್ಯದಿಂದ ಬಿಡುಗಡೆ ಹೊಂದಿಲ್ಲ. ಮುಖ್ಯಸ್ಥರ ಹುದ್ದೆ ಹೊಸಬರಿಗೆ ವಹಿಸಿಲ್ಲ. ರಜೆ ಮೇಲಿರುವೆ. ನ. 18ರಂದು ವರ್ಗಾವಣೆಗೆ ಸಂಬಂಧಿಸಿದ ನ್ಯಾಯಾಲಯದ ಮಧ್ಯಂತರ ಆದೇಶ ಪತ್ರ ಕೊಟ್ಟು, ನನ್ನ ವಿಭಾಗದ ಸೀಲ್‌, ಹಾಜರಾತಿ ಪುಸ್ತಕಗಳನ್ನು ತೆಗೆದುಕೊಂಡು ಹೋಗಿರುವೆ’ ಎಂದು ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ. ಆದರೆ, ಕುಲಸಚಿವರು ಮಹಿಳಾ ಅಧ್ಯಯನ ವಿಭಾಗದ ಶೈಲಜಾ ಹಿರೇಮಠ ಅವರಿಗೆ ಮುಖ್ಯಸ್ಥರ ಹೊಣೆ ವಹಿಸಿದ್ದಾರೆ. ಈಗಾಗಲೇ ಅವರು ಅಧಿಕಾರ ಕೂಡ ವಹಿಸಿದ್ದಾರೆ. ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಅನೇಕ ಜನ ಇದ್ದರೂ ಅನ್ಯ ವಿಭಾಗದ ಶೈಲಜಾ ಅವರಿಗೆ ಹೊಣೆ ವಹಿಸಿದ್ದಕ್ಕೆ ಟೀಕೆ ವ್ಯಕ್ತವಾಗಿದೆ.

₹5ರಿಂದ ₹12 ಲಕ್ಷ ತನಕ ಬೇಡಿಕೆ
‘ಬೇಡಿಕೆ ಇಟ್ಟಷ್ಟೂ ಹಣ ಕೊಟ್ಟರೆ ತಕ್ಷಣವೇ ಪ್ರೊಬೆಷನರಿ ಅವಧಿ ಮುಗಿದಿದೆ ಎಂದು ಘೋಷಿಸಲಾಗುವುದು ಎಂದು ಯಾವುದೇ ಮುಚ್ಚು ಮರೆಯಿಲ್ಲದೇ ಕೇಳುತ್ತಿದ್ದಾರೆ. ಸಹ ಪ್ರಾಧ್ಯಾಪಕರಿಗೆ ₹10ರಿಂದ ₹12 ಲಕ್ಷ, ಸಹಾಯಕ ಪ್ರಾಧ್ಯಾಪಕರಿಗೆ ₹7ರಿಂದ ₹8 ಲಕ್ಷ, ಬೋಧಕೇತರ ಸಿಬ್ಬಂದಿಗೆ ತಲಾ ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ನಿರಾಕರಿಸಿದ್ದಕ್ಕೆ ಎಂಟು ತಿಂಗಳಿಂದ ವೇತನ ಬಿಡುಗಡೆಗೊಳಿಸದೇ ತಡೆ ಹಿಡಿದಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಆರೋಪಿಸಿದ್ದಾರೆ.

‘ಪ್ರೊಬೆಷನರಿ ಅವಧಿ ಮುಗಿದಿದೆ ಎಂದು ಕುಲಾಧಿಪತಿಯೂ ಆಗಿರುವ ರಾಜ್ಯಪಾಲರಿಂದ ಅನುಮೋದನೆ ಸಿಗಬೇಕು ಎಂದು ಕುಂಟು ನೆಪ ಹೇಳುತ್ತಿದ್ದಾರೆ. ಆದರೆ, 17 ಬೋಧಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಪರಿನಿಯಮಕ್ಕೆ ರಾಜ್ಯಪಾಲರಿಂದ ಅನುಮೋದನೆಯೇ ಪಡೆದಿಲ್ಲ. ನಿಯಮ ಎಂದರೆ ಎಲ್ಲದಕ್ಕೂ ಒಂದೇ ಇರಬೇಕಲ್ಲ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT