ಸೋಮವಾರ, ಜನವರಿ 27, 2020
28 °C
ಪೌರತ್ವ ತಿದ್ದುಪಡಿ ಕಾಯ್ದೆಗೆ ಭಾರಿ ವಿರೋಧ; ವಿವಿಧ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ

ಮೊದಲು ಮನೆ, ನಂತರ ಹೊರಗಿನವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನಾ ರ್‍ಯಾಲಿ ನಡೆಸಿದರು.

‘ಬೇಡವೇ ಬೇಡ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ’, ‘ಹಮಾರಿ ಮಾಂಗ್‌, ಆಜಾದಿ, ಆಜಾದಿ’ ಎಂದು ಘೋಷಣೆಗಳನ್ನು ಕೂಗಿದರು. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ವಿರುದ್ಧ ಧಿಕ್ಕಾರ ಕೂಗಿದರು. ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ರೋಟರಿ ವೃತ್ತದವರೆಗೆ ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಚಿಂತಕ ಚಂದ್ರ ಪೂಜಾರಿ, ‘ಧಾರ್ಮಿಕ ನೆಲೆಯಲ್ಲಿ ಪೌರತ್ವ ಕೊಡುವುದು ತಪ್ಪು. ಜಗತ್ತಿನಲ್ಲಿ ಎಲ್ಲೂ ಈ ರೀತಿ ಮಾಡಿಲ್ಲ. ಇದು ಹಿಂದೂ–ಮುಸ್ಲಿಮರ ಸಮಸ್ಯೆಯಲ್ಲ. ಎಲ್ಲಾ ಜನಾಂಗದವರ ಬಡವರಿಗೆ ದಾಖಲೆ ಸಂಗ್ರಹಿಸಲು ತೊಂದರೆಯಾಗುತ್ತದೆ. ಒಂದುವೇಳೆ ದಾಖಲೆಯಿಲ್ಲದಿದ್ದರೆ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

‘ಸೂಕ್ತ ದಾಖಲೆಗಳನ್ನು ಕೊಡದಿದ್ದವರಿಗೆ ನೋಟಿಸ್‌ ಕೊಡಲಾಗುತ್ತದೆ. ಅಂತಹವರು ಸರಿಯಾದ ಸಮಜಾಯಿಷಿ ಕೊಡದಿದ್ದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ದೇಶದ 130 ಕೋಟಿ ಜನರ ಪೈಕಿ ಬಹುತೇಕರಿಗೆ ಊಟ, ವಸತಿ ಕೊಡಲು ನಮ್ಮ ಸರ್ಕಾರಕ್ಕೆ ಆಗುತ್ತಿಲ್ಲ. ಅಂತಹದ್ದರಲ್ಲಿ ಹೊರಗಿನವರು ಬಂದರೆ ಈ ದೇಶದ ಜನ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಮೊದಲು ನಮ್ಮ ಮನೆ ಉದ್ಧಾರ ಮಾಡಬೇಕು. ನಂತರ ಹೊರಗಿನವರ ಬಗ್ಗೆ ಚಿಂತಿಸಬೇಕು’ ಎಂದರು.

ಡಿ.ವೈ.ಎಫ್‌.ಐ. ರಾಜ್ಯ ಅಧ್ಯಕ್ಷ ಮುನೀರ್‌ ಕಾಟಿಪಾಳ್ಯ, ‘ಸಂಪ್ರದಾಯವಾದಿಗಳ ಶೋಷಣೆಗೆ ಒಳಗಾಗಿ ಅನೇಕ ಜನ ಮತಾಂತರಗೊಂಡಿದ್ದಾರೆ. ಅವರೆಲ್ಲ ಪೌರತ್ವ ಸಾಬೀತುಪಡಿಸಲು ಹೇಗೆ ಸಾಧ್ಯವಾಗುತ್ತದೆ. ದೇಶ ಆರ್ಥಿಕ ಹಿಂಜರಿತ, ನಿರುದ್ಯೋಗ ಸಮಸ್ಯೆಯಿಂದ ನಲುಗುತ್ತಿದೆ. ಅದರಿಂದ ಜನರ ಗಮನ ಬೇರಡೆ ಸೆಳೆಯಲು ಕೇಂದ್ರ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸಿದೆ’ ಎಂದು ಆರೋಪಿಸಿದರು.

ಪ್ರಾಂತ ರೈತ ಸಂಘದ ಮುಖಂಡ ಯು. ಬಸವರಾಜ, ‘ಎಲ್ಲಾ ಅರ್ಹರಿಗೂ ಪೌರತ್ವ ಕೊಡಲಿ. ಧರ್ಮದ ಆಧಾರದ ಮೇಲೆ ತರತಮ ಮಾಡುವುದು ಸರಿಯಲ್ಲ. ಅದಕ್ಕಾಗಿಯೇ ಜನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ’ ಎಂದರು.

ಮುಸ್ಲಿಂ ಉಲ್ಮಾ ಸಮಿತಿಯ ರೋಶನ್‌ ಜಮೀರ್‌, ‘ನಮ್ಮ ದೇಶದ ಪ್ರಧಾನಿ ಬಳಿಯೇ ಅವರ ಪದವಿ ದಾಖಲೆಗಳಿಲ್ಲ. ಹೀಗಿರುವಾಗ ಜನ ಅವರ ಪೂರ್ವಜರ ದಾಖಲೆಗಳನ್ನು ಕಲೆ ಹಾಕಲು ಹೇಗೆ ಸಾಧ್ಯ. ಆಧಾರ್‌ ಕಾರ್ಡ್‌ ಇರುವಾಗ ರಾಷ್ಟ್ರೀಯ ಪೌರತ್ವ ನೋಂದಣಿ ಏಕೆ ಬೇಕು’ ಎಂದು ಪ್ರಶ್ನಿಸಿದರು.

‘ಈ ದೇಶದಲ್ಲಿ ಏನಾದರೂ ಬದಲಾವಣೆ ತರಬಹುದು ಎಂದು ಜನ ಮೋದಿಯವರನ್ನು ಪ್ರಧಾನಿ ಮಾಡಿದ್ದಾರೆ. ಆದರೆ, ಅವರು ಜನರನ್ನು ವಿಭಜಿಸಿ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಭಾರತ ಉದ್ಧಾರವಾಗಲ್ಲ’ ಎಂದು ಹೇಳಿದರು.

ಮುಖಂಡರಾದ ಆರ್‌. ಭಾಸ್ಕರ್‌ ರೆಡ್ಡಿ, ಕರುಣಾನಿಧಿ, ಮಹೇಶ್‌ ಬಿಸಾಟಿ, ಸೋಮಶೇಖರ್‌ ಬಣ್ಣದಮನೆ, ಎಂ.ಸಿ. ವೀರಸ್ವಾಮಿ, ನಿಂಬಗಲ್‌ ರಾಮಕೃಷ್ಣ, ಫಹೀಮ್‌ ಬಾಷಾ, ಅಬ್ದುಲ್‌ ಖದೀರ್‌ ಮೊದಲಾದವರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು