ಶುಕ್ರವಾರ, ನವೆಂಬರ್ 27, 2020
22 °C

ಸಹಕಾರ ಇಲಾಖೆಯಿಂದ ಐದು ಸಾವಿರ ಜನಕ್ಕೆ ಉದ್ಯೋಗ: ಎಸ್‌.ಟಿ. ಸೋಮಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಸಹಕಾರ ಇಲಾಖೆಯಿಂದ ಮುಂಬರುವ ಆರು ತಿಂಗಳಲ್ಲಿ ಐದು ಸಾವಿರ ಜನರಿಗೆ ಉದ್ಯೋಗ ಕೊಡಲಾಗುವುದು’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಭರವಸೆ ನೀಡಿದರು.

ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‌ನಿಂದ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ 67ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ‘ಕೋವಿಡ್‌ ಲಾಕ್‌ಡೌನ್‌ನಿಂದ ಅನೇಕರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅಂತಹವರಿಗೆ ಇಲಾಖೆಯ ವತಿಯಿಂದ ಉದ್ಯೋಗ ದೊರಕಿಸಿಕೊಡಲಾಗುವುದು’ ಎಂದರು.

‘ಕರ್ನಾಟಕ ಹಾಲು ಮಹಾಮಂಡಳ, ಡಿಸಿಸಿ ಬ್ಯಾಂಕ್‌, ಸಹಕಾರ ಸಂಸ್ಥೆಗಳ ಮೂಲಕ ಉದ್ಯೋಗ ನೀಡಲಾಗುವುದು. ಬರುವ ಮೇ ಒಳಗೆ ಇಡೀ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು.
‘ರಾಜ್ಯದ ಅಪೆಕ್ಸ್‌ ಬ್ಯಾಂಕ್‌, 21 ಡಿಸಿಸಿ ಬ್ಯಾಂಕ್ ಗಳನ್ನು ಒಂದೇ ಸೂರಿನಡಿ ತರುವ ಚಿಂತನೆ ನಡೆದಿದೆ. ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳ ಪೈಕಿ ನಾಲ್ಕೈದು ಮಾತ್ರ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿವೆ. ಅದರಲ್ಲಿ ಬಳ್ಳಾರಿಯ ಡಿಸಿಸಿ ಬ್ಯಾಂಕ್‌ ಕೂಡ ಒಂದು’ ಎಂದು ಶ್ಲಾಘಿಸಿದರು.

‘ಬಿಜೆಪಿಯಲ್ಲಿ ಒಂದೇ ಟೀಮ್‌’:

‘ನಾವೆಲ್ಲ ಹದಿನೈಳು ಜನ ಶಾಸಕರು ಈಗಲೂ ಒಂದೇ ಟೀಮ್‌. ಆದರೆ, ಬಿಜೆಪಿಯಲ್ಲಿ ಎರಡು ಟೀಮ್‌ ಇಲ್ಲ. ಸದ್ಯ ಸರ್ಕಾರ ಸುರಕ್ಷಿತವಾಗಿದೆ. ಮತ್ತೆ ಹೊಸ ಶಾಸಕರನ್ನು ಕರೆತರುವ ಅಗತ್ಯವಿಲ್ಲ’ ಎಂದು ಸೋಮಶೇಖರ್‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಯಡಿಯೂರಪ್ಪ ನುಡಿದಂತೆ ನಡೆದುಕೊಂಡಿದ್ದಾರೆ. ಎಲ್ಲರಿಗೂ ಟಿಕೆಟ್‌ ಕೊಟ್ಟು ಗೆಲ್ಲಿಸಿದ್ದಾರೆ. ಸೋತವರಿಗೆ ಎಂಎಲ್‌ಸಿ ಮಾಡಿದ್ದಾರೆ. ಹೆಚ್ಚಿನವರು ಮಂತ್ರಿಗಳಾಗಿದ್ದಾರೆ. ಯಾರಿಗೆ ಮಂತ್ರಿ ಮಾಡಬೇಕು ಎನ್ನುವುದು ಮುಖ್ಯಮಂತ್ರಿಯ ಪರಮಾಧಿಕಾರ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು