ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ; ಜಲಸಂವರ್ಧನೆಗೆ ಒತ್ತು

ಹ್ಯಾರಡ ಪಂಚಾಯ್ತಿಗೆ ಎರಡನೇ ಬಾರಿ ಗಾಂಧಿ ಪುರಸ್ಕಾರ
Last Updated 1 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹೂವಿನಹಡಗಲಿ: ಜನರಿಗೆ ಮೂಲಸೌಕರ್ಯ ಒದಗಿಸುವ ಜತೆಗೆ ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿರುವ ತಾಲ್ಲೂಕಿನ ಹ್ಯಾರಡ ಗ್ರಾಮ ಪಂಚಾಯ್ತಿಯು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ರಾಜ್ಯ ಸರ್ಕಾರದಿಂದ ಎರಡನೇ ಬಾರಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾಲ್ಲೂಕಿನ 26 ಗ್ರಾಮ ಪಂಚಾಯ್ತಿಗಳ ಪೈಕಿ ಹ್ಯಾರಡ ಪಂಚಾಯ್ತಿಗೆ ಮಾತ್ರ ಪುರಸ್ಕಾರ ಲಭಿಸಿದೆ. 2017ರಲ್ಲಿಯೂ ಈ ಪಂಚಾಯ್ತಿಗೆ ಪುರಸ್ಕಾರ ಸಿಕ್ಕಿದೆ.

ಬುಧವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಿ.ಎಂ., ಪಂಚಾಯ್ತಿ ಅಧ್ಯಕ್ಷೆ ಭೀಮಕ್ಕನವರ ದುರುಗಮ್ಮ, ಉಪಾಧ್ಯಕ್ಷ ಪ್ರಕಾಶ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯು.ಮೂಕಪ್ಪ ಅವರನ್ನು ಗೌರವಿಸುವರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ ಉತ್ತಮವಾಗಿದೆ. ಬೇಸಿಗೆಯ ದಿನಗಳಲ್ಲೂ ಇಲ್ಲಿ ದಿನ ಬಿಟ್ಟು ದಿನ ನೀರು ಪೂರೈಕೆ ಮಾಡಲಾಗಿದೆ. ಪ್ರತಿದಿನವೂ ಚರಂಡಿ ಸ್ವಚ್ಛಗೊಳಿಸಿ, ತ್ಯಾಜ್ಯವನ್ನು ಹೊರ ಸಾಗಿಸಲಾಗುತ್ತದೆ.

ಪಂಚಾಯ್ತಿಯ ಈ ತರಹದ ಸೇವೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಆದ್ದರಿಂದಲೇ ಇಲ್ಲಿನ ಜನರು ಸ್ವಯಂ ಪ್ರೇರಣೆಯಿಂದ ಪಂಚಾಯ್ತಿಗೆ ತೆರಿಗೆ ಪಾವತಿಸುತ್ತಾರೆ. ಕಳೆದ ವರ್ಷ ₹9.29 ಲಕ್ಷ ತೆರಿಗೆ ವಸೂಲಿಯ ಗುರಿ ಇದ್ದರೆ, ₹6.68 ಲಕ್ಷ ತೆರಿಗೆ ಸಂಗ್ರಹಿಸಿ ಶೇ 72 ರಷ್ಟು ಸಾಧಿಸಿದ್ದಾರೆ.

ಪಂಚಾಯ್ತಿ ಆಡಳಿತ ವ್ಯವಸ್ಥೆ ಸಂಪೂರ್ಣ ಗಣಕೀಕರಣಗೊಂಡಿದೆ. ಗ್ರಾಮ ಪಂಚಾಯ್ತಿ ಸೇವೆಗಳ ಜತೆಗೆ ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಸಾಮಾಜಿಕ ಭದ್ರತಾ ಯೋಜನೆಯ ಹಲವು ಪಿಂಚಣಿ ಯೋಜನೆಯ ಅರ್ಜಿಗಳನ್ನೂ ಪಂಚಾಯ್ತಿಯಲ್ಲೇ ಸ್ವೀಕರಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಜನರು ಕಚೇರಿಗಳ ಅಲೆದಾಟ ತಪ್ಪಿಸಿ, ಸಕಾಲದಲ್ಲಿ ಪ್ರಮಾಣ ಪತ್ರ ಒದಗಿಸುವ ವ್ಯವಸ್ಥೆ ಇಲ್ಲಿ ಜಾರಿಯಲ್ಲಿದೆ.

ಹ್ಯಾರಡ ಗ್ರಾಮದಲ್ಲಿ 4,126 ಜನಸಂಖ್ಯೆ ಇದ್ದು, 991 ಕುಟುಂಬಗಳಿವೆ. ಪ್ರತಿ ಮನೆಗೂ ಶೌಚಾಲಯ ಕಟ್ಟಿಕೊಡಲಾಗಿದ್ದು, ಪಂಚಾಯ್ತಿಯನ್ನು ‘ಬಯಲು ಬಹಿರ್ದೆಸೆ ಮುಕ್ತ ಪಂಚಾಯ್ತಿ’ ಘೋಷಿಸಲಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲೂ ಹ್ಯಾರಡ ಪಂಚಾಯಿತಿ ಮುಂಚೂಣಿಯಲ್ಲಿದೆ. ನೋಂದಾಯಿತ 986 ಜನರಿಗೂ ಉದ್ಯೋಗ ನೀಡಿ, ನಿಗದಿತ ದಿನಗಳಲ್ಲೇ ಕೂಲಿ ಹಣ ಪಾವತಿಸಲಾಗಿದೆ. ನರೇಗಾ ಯೋಜನೆಯಲ್ಲಿ ಹೊಸ ಕೆರೆ ನಿರ್ಮಿಸಲಾಗಿದೆ. 10 ಗೋಕಟ್ಟೆ, 5 ಬಹುಕಮಾನು ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. ಈಚೆಗೆ ಸುರಿದ ಮಳೆಯಿಂದ ಕೆಲವು ಗೋಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ. ನರೇಗಾ ಅಡಿ ₹2.90 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ.

ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುವಲ್ಲಿ ಬದ್ದತೆ ಮೆರೆದಿರುವ ಈ ಪಂಚಾಯ್ತಿಯನ್ನು ಗುರುತಿಸಿ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT