ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ವಿಫಲ, ಸಂಪುಟ ವಿಸ್ತರಣೆ ಯಾವಾಗ?:ಉಗ್ರಪ್ಪ ಪ್ರಶ್ನೆ

ನೆರೆ ಹಾವಳಿ
Last Updated 6 ಆಗಸ್ಟ್ 2019, 12:23 IST
ಅಕ್ಷರ ಗಾತ್ರ

ಬಳ್ಳಾರಿ: 'ರಾಜ್ಯದ ಜನರನ್ನು ಬಾಧಿಸುತ್ತಿರುವ ನೆರೆಹಾವಳಿ ಮತ್ತು ಬರಗಾಲದ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 12 ದಿನಗಳಾದರೂ ಸಂಪುಟ ವಿಸ್ತರಣೆ ಆಗಿಲ್ಲ. ರಾಜ್ಯದಲ್ಲಿ ಈಗ ಸರ್ಕಾರವೇ ಇಲ್ಲದಂತಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆ ಎದುರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಲ್ಲ. ಉಸ್ತುವಾರಿ ಕಾರ್ಯದರ್ಶಿಗಳಿಲ್ಲದೇ ಆಡಳಿತ ಯಂತ್ರ ಸ್ಥಗಿತಗೊಂಡಿದೆ’ ಎಂದು ನಗರದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾತಿಗೆ ಪಕ್ಷದಲ್ಲಿ ಕಿಮ್ಮತ್ತಿಲ್ಲವೇ? ಇಷ್ಟು ದಿನವಾದರೂ ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಭೇಟಿಗೆ ಅವಕಾಶವನ್ನೇ ನೀಡಿಲ್ಲ. ಇದು ಯಡಿಯೂರಪ್ಪ ಅವರಿಗಿಂತಲೂ ರಾಜ್ಯದ ಜನರಿಗೆ ತೋರಿದ ಅಗೌರವ’ ಎಂದು ಪ್ರತಿಪಾದಿಸಿದರು.

‘2009ರಲ್ಲಿ ರಾಜ್ಯದಲ್ಲಿ ನೆರೆ ಹಾವಳಿ ಉಂಟಾದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ನೀಡಿದ್ದರು. ಈಗ ಪ್ರವಾಹ ಪೀಡಿತ ಪ್ರದೇಶಕ್ಕೆ ಪ್ರಧಾನಿ ಭೇಟಿ ನೀಡಬೇಕು. ಪರಿಹಾರ ನೀಡಬೇಕು ಎಂದು ಯಡಿಯೂರಪ್ಪ ಅಗ್ರಹಿಸುತ್ತಿಲ್ಲ’ ಎಂದು ದೂರಿದರು.

‘ಆಲಮಟ್ಟಿಯಿಂದ ತುಂಗಭದ್ರಾ ಜಲಾಶಯಕ್ಕೆ ಸಂಪರ್ಕ ಕಲ್ಪಿಸಿದರೆ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜನರಿಗೆ ಅನುಕೂಲ ಆಗುತ್ತದೆ’ ಎಂದು ಪ್ರತಿಪಾದಿಸಿದ ಅವರು, ‘ಮಹಾರಾಷ್ಟ್ರದ ಜೊತೆಗೆ ಕರ್ನಾಟಕದಲ್ಲೂ ವಿಧಾನಸಭೆ ಚುನಾವಣೆ ನಡೆದರೂ ಅಚ್ಷರಿಯಿಲ್ಲ. ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದೆ. ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷ ನಿಷ್ಠರಿಗೆ ಟಿಕೆಟ್ ನೀಡಲಾಗುವುದು’ ಎಂದು ತಿಳಿಸಿದರು.

ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮೊಹ್ಮದ್ ರಫೀಕ್, ಕಾರ್ಯದರ್ಶಿ ವೆಂಕಟೇಶ್, ಅಯಾಜ್ ಅಹ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT