ಮಂಗಳವಾರ, ಡಿಸೆಂಬರ್ 1, 2020
20 °C
ಪದವಿ ಕಾಲೇಜುಗಳು ಆರಂಭ: ಪೂರ್ವಸಿದ್ಧತೆಗೆ ಅಡ್ಡಿಯಾದ ದೀಪಾವಳಿ ರಜೆ

ಮೊದಲ ದಿನ ನೀರಸ:ನಡೆಯದ ತರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ದೀರ್ಘಕಾಲದ ಲಾಕ್‌ಡೌನ್‌ ಬಳಿಕ ಜಿಲ್ಲೆಯಲ್ಲಿ ಮಂಗಳವಾರದಿಂದ ಮತ್ತೆ ಸರ್ಕಾರಿ ಪದವಿ ಕಾಲೇಜುಗಳು ಆರಂಭವಾದರೂ ವಿದ್ಯಾರ್ಥಿಗಳು ಬಾರದೇ ಭಣಗುಟ್ಟಿದವು. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕಾಯುತ್ತಾ ದಿನ ಕಳೆಯುವ ಸನ್ನಿವೇಶ ನಿರ್ಮಾಣವಾಗಿತ್ತು.

ಎಲ್ಲ ವಿದ್ಯಾರ್ಥಿಗಳಿಗೂ ಕೊರೊನಾ ತಪಾಸಣೆ ಬಳಿಕವೇ ಕಾಲೇಜಿನ ಒಳಕ್ಕೆ ಪ್ರವೇಶ ಕಲ್ಪಿಸಿದ್ದು, ಗಂಟಲು ದ್ರವ ಸಂಗ್ರಹದ ಸಲುವಾಗಿ ಆರೋಗ್ಯ ಸಿಬ್ಬಂದಿಯೂ ವಿದ್ಯಾರ್ಥಿಗಳು ಕಾದಿದ್ದರು. ಬಂದ ಬೆರಳೆಣಿಕೆಯಷ್ಟು ವಿದ್ಯಾಥಿಗಳು ತಪಾಸಣೆಗೆ ಒಳಗಾದರು. ಆದರೆ ತರಗತಿಗಳು ನಡೆಯಲಿಲ್ಲ.

ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿರುವ ನಗರದ ಸರಳಾದೇವಿ ಸತೀಶ್‌ಚಂದ್ರ ಅಗರವಾಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂದಿನಂತೆ ಬೆಳಿಗ್ಗೆ 9 ಗಂಟೆಯಿಂದಲೇ ಆರಂಭವಾಯಿತು. ಆದರೆ ಆ ವೇಳೆಗೆ ವಿದ್ಯಾರ್ಥಿಗಳು ಯಾರೂ ಬಂದಿರಲಿಲ್ಲ. ಬಹುತೇಕ ಉಪನ್ಯಾಸಕರು ಮಾತ್ರ ಹಾಜರಿದ್ದರು.

ಬೆಳಿಗ್ಗೆ 11 ಗಂಟೆಯಿಂದ ಕೊರೊನಾ ತಪಾಸಣೆ ಆರಂಭವಾದಾಗ ಹಾಜರಿದ್ದ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡು ನಿಂತು ಗಂಟಲು ದ್ರವದ ಮಾದರಿ ನೀಡಿದರು.

ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾರದೇ ಇರುವ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲ ಪ್ರೊ.ಹೇಮಣ್ಣ, ‘ದೀಪಾವಳಿ ಹಬ್ಬದ ರಜೆಗಳು ಬಂದ ಪರಿಣಾಮ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸಲು ಸಾಧ್ಯವಾಗಲಿಲ್ಲ. ಆದರೆ ತರಗತಿಗಳನ್ನು ನಡೆಸಲು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ತಪಾಸಣೆಯು ಕಾಲೇಜು ಆರಂಭವಾಗುವ ಮುನ್ನಾ ದಿನಗಳಲ್ಲೇ ನಡೆಯಬೇಕಿತ್ತು. ಆದರೆ ನಡೆಯಲಿಲ್ಲ’ ಎಂದು ತಿಳಿಸಿದರು.

‘ಶೇ 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜಿಗೆ ಬರಲು ಅವ ಕಾಶ ನೀಡಲಾಗಿದೆ. ಬಂದ ವಿದ್ಯಾರ್ಥಿಗಳೆಲ್ಲರ ಹೆಸರು ನೋಂದಾಯಿಸಿ ಕೊಳ್ಳ ಲಾಗುವುದು. ಬಾರದೇ ಇರುವವರು ಆನ್‌ಲೈನ್‌ ತರಗತಿಗಳಿಗೆ ಹಾಜರಾಗುತ್ತಾರೆ ಎಂದೇ ಅರ್ಥ. ಎಲ್ಲ ತರಗತಿ ಕೊಠಡಿಗಳನ್ನೂ ಸ್ಯಾನಿಟೈಸ್‌ ಮಾಡಲಾಗಿದೆ. ಎಲ್ಲ ಬೋಧಕ ಮತ್ತು ಬೋಧಕ ಸಿಬ್ಬಂದಿಯ ಕೊರೊನಾ ತಪಾಸಣೆಯೂ ನಡೆದಿದೆ’ ಎಂದು ಮಾಹಿತಿ ನೀಡಿದರು.

‘ಕಾಲೇಜಿನಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಬರಬೇಕೋ ಬೇಡವೋ ಎಂಬ ಬಗ್ಗೆ ನಿರ್ಧರಿಸುತ್ತೇವೆ. ಆನ್‌ಲೈನ್‌ ತರಗತಿಗಳಿಗೆ ತಪ್ಪದೇ ಹಾಜರಾಗುತ್ತೇವೆ’ ಎಂದು ವಿದ್ಯಾರ್ಥಿಗಳಾದ ಗುರು ಬಸವರಾಜ, ಕಾರ್ತಿಕ್, ಸುಷ್ಮಾ, ಗಾಯತ್ರಿ‌ ಹೇಳಿದರು.

ತಪಾಸಣೆ ಮುಂದುವರಿಕೆ: ‘ಕಾಲೇಜಿಗೆ ಬರುವ ಎಲ್ಲ ವಿದ್ಯಾರ್ಥಿಗಳ ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಅದರಂತೆ ನಿಯಮಿತವಾಗಿ ದ್ರವ ಮಾದರಿಗಳನ್ನು ಸಂಗ್ರಹಿಸುತ್ತಿದ್ದೇವೆ’ ಎಂದು ಆರೋಗ್ಯ ಸಿಬ್ಬಂದಿಯೊಬ್ಬರು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು