ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಉತ್ಸಾಹ ಮರೆಸಿದ ಕೊರೆವ ಚಳಿ; ಮಾತು ಕೇಳದವರಿಗೆ ಕಪಾಳಮೋಕ್ಷ

ಸೂರ್ಯೋದಯಕ್ಕೂ ಮುನ್ನವೇ ನೆರೆದಿದ್ದ ಅಪಾರ ಜನ
Last Updated 30 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಸುತ್ತಲೂ ಬೆಟ್ಟ ಗುಡ್ಡಗಳಿಂದ ಕೂಡಿರುವ ಪ್ರದೇಶವದು. ಎಲ್ಲೆಡೆ ಮಂಜು ಮುಸುಕಿದ ವಾತಾವರಣ. ಕೊರೆವ ಚಳಿ ಬೇರೆ. ಇನ್ನಷ್ಟೇ ಸೂರ್ಯೋದಯ ಆಗಬೇಕಿತ್ತು. ಅಷ್ಟಾರಲ್ಲಾಗಲೇ ಅಲ್ಲಿ ಅಪಾರ ಜನ ನೆರೆದಿದ್ದರು.

ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ನಡೆದ ನಗರ ಹೊರವಲಯದ ಸಂಡೂರು ರಸ್ತೆಯಲ್ಲಿನ ಲಿಟ್ಲ್‌ ಫ್ಲವರ್‌ ಶಾಲೆ (ಎಲ್‌ಎಫ್‌ಎಸ್‌) ಎದುರಿನ ಬಯಲಿನಲ್ಲಿ ಬುಧವಾರ ಕಂಡ ದೃಶ್ಯಗಳಿವು.

ಚುನಾವಣೆಗೆ ಸ್ಪರ್ಧಿಸಿದವರು ಗೆಲುವಿನ ಉಮೇದಿನೊಂದಿಗೆ ಬುಧವಾರ ಬೆಳಿಗ್ಗೆ ಅವರ ಸಂಬಂಧಿಕರು, ಬೆಂಬಲಿಗರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದರು. ಅದಕ್ಕೂ ಮುನ್ನ ಅವರ ಮನೆದೇವರು, ಇಷ್ಟದೇವರಿಗೆ ಪೂಜೆ ನೆರವೇರಿಸಿದರು. ಕೆಲವರು ಕಾಯಿ ಒಡೆದು, ಕರ್ಪೂರ ಬೆಳಗಿ ಬಂದರೆ, ಮತ್ತೆ ಕೆಲವರು ಕಿಸೆಯಲ್ಲಿ ಮಂತ್ರಿಸಿದ ನಿಂಬೆ ಹಣ್ಣು ಇಟ್ಟುಕೊಂಡು ಬಂದಿದ್ದರು. ಆದರೆ, ಅವರಿಗೆ ನಿರಾಸೆ ಕಾದಿತ್ತು. ಮತ ಎಣಿಕೆ ಕೇಂದ್ರದ ಪ್ರವೇಶ ದ್ವಾರದಲ್ಲಿ ಪೊಲೀಸರು ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ, ಒಳಬಿಟ್ಟರು. ಈ ವೇಳೆ ನಿಂಬೆ ಹಣ್ಣು ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಿಲ್ಲ. ಹೀಗಾಗಿ ಅದನ್ನು ಅನಿವಾರ್ಯವಾಗಿ ಹೊರಗೆ ಎಸೆದು ಹೋದರು. ಮತ್ತೆ ಕೆಲವರು ಅವರ ಬೆಂಬಲಿಗರ ಕಿಸೆಯಲ್ಲಿ ಇಟ್ಟು ಹೋದರು. ಕೆಲವರು ಗೆಲುವಿನ ಅತಿ ವಿಶ್ವಾಸದೊಂದಿಗೆ ಹೂಮಾಲೆಗಳೊಂದಿಗೆ ಕೇಂದ್ರಕ್ಕೆ ಬಂದಿದ್ದರು.

ಪೊಲೀಸರಿಂದ ಕಪಾಳಮೋಕ್ಷ:ಸೂರ್ಯ ಕಣ್ಣು ಮಿಟುಕಿಸಿ ಬಿಸಿಲು ಏರುತ್ತಿದ್ದಂತೆ ಮತಗಳ ಎಣಿಕೆಯೂ ಬಿರುಸು ಪಡೆಯಿತು. ಮುನ್ನಡೆ ಸಾಧಿಸಿದವರ ಮೊಗದಲ್ಲಿ ಮಂದಹಾಸ ಅರಳಿದರೆ, ಹಿಂದೆ ಬಿದ್ದವರ ಮುಖಗಳು ಬಾಡಿ ಹೋದವು. ಕ್ಷಣ ಕ್ಷಣಕ್ಕೂ ಉತ್ಸಾಹ ಮೇರೆ ಮೀರುತ್ತಿತ್ತು. ಲೆಕ್ಕಾಚಾರಗಳು ಬದಲಾಗುತ್ತ ಹೋದವು. ಮತ ಎಣಿಕೆ ಕೇಂದ್ರದ ಎದುರು ನೂಕಾಟ ತಳ್ಳಾಟ ಹೆಚ್ಚಾಯಿತು. ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ವ್ಯಕ್ತಿಯೊಬ್ಬರನ್ನು ಡಿವೈಎಸ್ಪಿ ವಿ. ರಘುಕುಮಾರ ಕಪಾಳಮೋಕ್ಷ ಮಾಡಿ, ವಶಕ್ಕೆ ಪಡೆದರು. ಇನ್ನು ಪೊಲೀಸ್‌ ಕಾನ್‌ಸ್ಟೆಬಲ್‌ ಸಹ ವ್ಯಕ್ತಿಯೊಬ್ಬರಿಗೆ ಎಷ್ಟೇ ಹೇಳಿದರೂ ಕೇಳದಿದ್ದಾಗ ಅವರು ಕೂಡ ಡಿವೈಎಸ್ಪಿ ಅವರ ಮಾರ್ಗವೇ ಅನುಸರಿಸಿದರು. ಅದಾದ ನಂತರವಷ್ಟೇ ಜನಜಂಗುಳಿ ನಿಯಂತ್ರಣಕ್ಕೆ ಬಂತು.

ಫಲಿತಾಂಶ ಹೊರಬಿದ್ದಂತೆ ಅಭ್ಯರ್ಥಿಗಳ ಬೆಂಬಲಿಗರು ಗೆಲುವಿನ ಕೇಕೆ ಹಾಕಿದರು. ಜಯಘೋಷ ಹಾಕಿ, ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಗೆದ್ದವರನ್ನು ಭುಜದ ಮೇಲೆ ಹೊತ್ತು ಕುಣಿದರು.

ಡಿ.22ರಂದು ತಾಲ್ಲೂಕಿನ ನಾಗೇನಹಳ್ಳಿ, ಮಲಪನಗುಡಿ, ಹಂಪಿ, ಗಾದಿಗನೂರು, ಬುಕ್ಕಸಾಗರ, ಪಾಪಿನಾಯಕನಹಳ್ಳಿ, ಬೈಲುವದ್ದೀಗೇರಿ, ಡಣಾನಾಯಕನಕೆರೆ, ಜಿ.ನಾಗಲಾಪುರ, ಡಣಾಪುರ, ಕಲ್ಲಹಳ್ಳಿ, ಚಿಲಕನಹಟ್ಟಿ ಹಾಗೂ ಹೊಸೂರು ಒಟ್ಟು 13 ಗ್ರಾಮ ಪಂಚಾಯತಿಯ 84 ಕ್ಷೇತ್ರಗಳ 233 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 653 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಂಜೆ ಏಳು ಗಂಟೆಯ ವರೆಗೆ 35 ಕ್ಷೇತ್ರಗಳ ಫಲಿತಾಂಶವಷ್ಟೇ ಹೊರಬಂದಿತ್ತು. ಎಲ್.ಎಫ್.ಎಸ್ ಶಾಲೆಯ ಆರು ಕೊಠಡಿಯ 24 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT