ಸೋಮವಾರ, ಜುಲೈ 4, 2022
21 °C
ಹಂಪಿ ದರ್ಶನ ಮಾಡಿಸುವ ಸರ್ಕಾರಿ ಕಾಲೇಜು

ಸರ್ಕಾರಿ ಕಾಲೇಜು ಗೋಡೆಯಲ್ಲಿ ಹಂಪಿ ದರ್ಶನ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರು ನಾಲ್ಕು ಹೆಜ್ಜೆ ನಡೆದುಕೊಂಡು ಹೋದರೆ ಸಾಕು ಇಡೀ ಹಂಪಿಯ ದರ್ಶನವಾಗುತ್ತದೆ!

ಹೌದಾ? ಎಂದು ಯಾರಿಗಾದರೂ ಅಚ್ಚರಿ ಆಗಬಹುದು. ಆದರೆ ನಿಜ. ಕಾಲೇಜು ಮೇಲ್ದರ್ಜೆಗೇರಿಸುವ ಕೆಲಸ ಅಂತಿಮ ಹಂತದಲ್ಲಿದೆ. ಇಡೀ ಕಾಲೇಜಿಗೆ ಹೊಸ ಸ್ವರೂಪ ನೀಡಲಾಗುತ್ತಿದೆ. ಕಾಲೇಜಿನ ಎದುರು ಕೌಂಪೌಂಡ್‌ ನಿರ್ಮಿಸಲಾಗಿದ್ದು, ಈಗ ಅದು ಎಲ್ಲರ ಆಕರ್ಷಣೆಯ ಕೇಂದ್ರವಾಗಿ ಬದಲಾಗಿದೆ. ಕಾರಣವಿಷ್ಟೇ ಆ ಗೋಡೆಯ ಮೇಲೆ ಹಂಪಿಯ ಸ್ಮಾರಕಗಳು ಅರಳಿ ನಿಂತಿರುವುದು.

ಕಾಂಪೌಂಡ್‌ನಲ್ಲಿ ಒಟ್ಟು 25 ಬ್ಲಾಕ್‌ಗಳಿವೆ. 23 ಬ್ಲಾಕ್‌ಗಳಲ್ಲಿ ಹಂಪಿ ಸ್ಮಾರಕಗಳ ಕಲಾಕೃತಿಗಳನ್ನು ಬಿಡಿಸಲಾಗಿದೆ. ಆಯಿಲ್‌ ಪೇಟಿಂಗ್‌ಗಿಂತ ಉತ್ಕೃಷ್ಟ ಗುಣಮಟ್ಟದಿಂದ ಕೂಡಿರುವ ವಾಟರ್‌ ಬೇಸ್‌ ಅಪೆಕ್ಸ್‌ ಪೇಟಿಂಗ್‌ ಮಾಡಿರುವುದು ವಿಶೇಷ. ಪ್ರತಿಯೊಂದು ಬ್ಲಾಕ್‌ ಅನ್ನು ಫೋಟೊ ಫ್ರೇಮ್‌ ಮಾದರಿಯಲ್ಲಿ ನಿರ್ಮಿಸಲಾಗಿದೆ, ಅದರೊಳಗೆ ಚಿತ್ರ ಬಿಡಿಸಿದ ನಂತರ ಥೇಟ್‌ ಗಾಜಿನ ಫ್ರೇಮಿನಂತೆ ಆಕರ್ಷಿಸುತ್ತಿದೆ.

ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನ ವರಾಹ, ಗಜಶಾಲೆ, ಕಲ್ಲಿನ ರಥ, ಕಮಲ ಮಹಲ್‌, ಉಗ್ರ ನರಸಿಂಹ, ಮಂಟಪಗಳು, ಬಂಡೆಗಲ್ಲುಗಳನ್ನು ಚಿತ್ರಿಸಲಾಗಿದೆ. ನ್ಯೂಮ್ಯಾನ್‌ ಆರ್ಟ್ಸ್‌ನ ಕಲಾವಿದ ಪರಶುರಾಮ ಒಬ್ಬರೇ ಎಲ್ಲ ಕಲಾಕೃತಿಗಳನ್ನು ಬಿಡಿಸಿರುವುದು ವಿಶೇಷ. 30 ವರ್ಷಗಳಿಂದ ಪರಶುರಾಮ ಈ ವೃತ್ತಿಯಲ್ಲಿದ್ದಾರೆ.

23 ಕಲಾಕೃತಿಗಳನ್ನು ಅವರು 12 ದಿನಗಳಲ್ಲಿ ಅಚ್ಚುಕಟ್ಟಾಗಿ ಬಿಡಿಸಿದ್ದಾರೆ. ದಾರಿ ಹೋಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಕೆಲಹೊತ್ತು ಅಲ್ಲಿ ನಿಂತು ಅವುಗಳನ್ನು ಕಣ್ತುಂಬಿಕೊಳ್ಳುವಂತೆ ಮಾಡಿರುವುದಂತೂ ಸತ್ಯ. ಕಾಲೇಜು ಅಭಿವೃದ್ಧಿ ಸಮಿತಿಯ ಭಿನ್ನ ಆಲೋಚನೆಯಿಂದ ಇದು ಸಾಧ್ಯವಾಗಿದೆ.

‘ಸಚಿವ ಆನಂದ್‌ ಸಿಂಗ್‌ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರ ಸಲಹೆ ಮೇರೆಗೆ ಕಾಂಪೌಂಡ್‌ ಮೇಲೆ ಹಂಪಿ ಸ್ಮಾರಕಗಳ ಚಿತ್ರ ಬಿಡಿಸಲಾಗಿದೆ’ ಎಂದು ಕಾಲೇಜು ಪ್ರಾಚಾರ್ಯ ಪ್ರೊ.ಬಿ.ಜಿ. ಕನಕೇಶಮೂರ್ತಿ ತಿಳಿಸಿದರು.

ಮೂರು ಪ್ರತಿಕೃತಿ: ಕಾಲೇಜಿನ ಮುಂಭಾಗದಲ್ಲಿ ವಿದ್ಯಾದೇವತೆ ಸರಸ್ವತಿ, ಕನ್ನಡದ ಮೊದಲ ಶಾಸನ ಹಲ್ಮಿಡಿ ಹಾಗೂ ಅದರ ಮೇಲೆ ಕನ್ನಡ ಅನುವಾದ, ಹಂಪಿ ಕಲ್ಲಿನ ರಥದ ಮೂರು ಕಲ್ಲಿನ ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಕಾಲೇಜು ಆವರಣದಲ್ಲಿ ಬಯಲು ರಂಗಮಂದಿರ ಸಿದ್ಧಗೊಂಡಿದೆ. ಹೊಸ ಕೊಠಡಿಗಳು, ಲ್ಯಾಬ್‌ಗಳ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಲಿಫ್ಟ್‌ ಕೂಡ ಸಿದ್ಧವಾಗಿದ್ದು, ಇಷ್ಟರಲ್ಲೇ ಉದ್ಘಾಟನೆ ಕಾಣಲಿದೆ. ಹೀಗೆ ಸರ್ಕಾರಿ ಕಾಲೇಜಿಗೆ ಹೈಟೆಕ್‌ ಸ್ಪರ್ಶ ನೀಡಿ, ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಸದ್ಯ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು