ಸೋಮವಾರ, ಅಕ್ಟೋಬರ್ 26, 2020
23 °C
ದಸ್ತಾಪುರ, ಅಂಕಲಗಾ, ಸಿರಗಾಪುರ, ಕುದಮೂಡ ಮನೆಗೆ ನುಗ್ಗಿದ ನೀರು

ಕಮಲಾಪುರ, ಕುರಿಕೋಟಾ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ತಾಲ್ಲೂಕಿನಾದ್ಯಂತ ಸುರಿದ ಕುಂಭದ್ರೋಣಮ್ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಆಲಾಶಯ, ಕೆರೆ, ಕಟ್ಟೆ, ಹಳ್ಳ, ನಾಲೆಗಳೆಲ್ಲ ತುಂಬಿ ಹರಿದಿದೆ, ಊರು, ಕೇರಿ, ಹೊಲ, ಗದ್ದೆ ಕಣ್ಣು ಹಾಯಿಸಿದೆಲ್ಲೆಡೆ ನೀರೆ ನೀರು.

ಬೆಳಕೋಟಾ ಜಲಾಶಯ ಭರ್ತಿಯಾಗಿರುವುದರಿಂದ ಬೆಳಿಗ್ಗೆ 30 ಸಾವಿರ ಕ್ಯುಸೆಕ್ ನೀರು ಬಿಡಲಾಗಿತ್ತು. ಇದರಿಂದ ದಸ್ತಾಪುರ, ಮಹಾಗಾಂವ, ಕುರಿಕೋಟಾ ಗ್ರಾಮಗಳಲ್ಲಿ ಪ್ರವಾಹದ ನೀರು ನುಗ್ಗಿದೆ. ಮಹಾಗಾಂವ ಸೇತುವೆ ಮೇಲೆ ಪ್ರವಾಹ ಉಂಟಾಗಿರುವುದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ಬೆಣ್ಣೆ ತೊರಾ ಹಿನ್ನೀರು ಕುರಿಕೋಟಾ ಗ್ರಾಮದಲ್ಲಿ ಹೊಕ್ಕಿದ್ದು, ದವಸ ಧಾನ್ಯ, ಮಕ್ಕಳ ಪುಸ್ತಕ, ನಿತ್ಯ ಬಳಕೆಯ ವಸ್ತುಗಳೆಲ್ಲ ಜಲ ಸಮಾಧಿಯಾಗಿವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು. ಸುಮಾರು 20 ಮನೆಗೆಳ ಪ್ರವಾಹದಿಂದ ಹಾನಿಯಾಗಿದ್ದು, ಅವರನ್ನು ಸರ್ಕಾರಿ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಪರಿಹಾರ ಕೇಂದ್ರ ಆರಂಭಿಸಿ ಊಟೋಪಚಾರ ಮಾಡಲಾಗುತ್ತಿದೆ.

ಕಮಲಾಪುರದ ಹಳ್ಳಕ್ಕೆ ಅಂಟಿಕೊಂಡಿರುವ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. 2 ಬೈಕ್ ಕೊಚ್ಚಿ ಹೋಗಿದೆ. ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಮೇಕೆ, ಕೋಳಿಗಳು ಕೊಚ್ಚಿಕೊಂಡು ಹೋಗಿರುವುದು ವರದಿಯಾಗಿದೆ.

ಕುದಮೂಡ ಗ್ರಾಮ ಮೂರುಕಡೆಯಿಂದ ಪ್ರವಾಹ ಉಂಟಾಗಿದ್ದು ಮನೆಗಳಿಗೆ ನೀರು ನುಗ್ಗಿದೆ. ಗುಂಡಮ್ಮ ಅಮೃತ ಹಾದಿಮನಿ ಎಂಬುವವರ ಶಡ್ನಲ್ಲಿ ಹಾಕಿದ್ದ 50 ಕ್ವಿಂಟಾಲ್ ಈರುಳ್ಳಿ ಕೊಚ್ಚಿ ಹೋಗಿದೆ. ಸೋಯಾಬಿನ್ ಬಣವೆ, 3 ಜಾನುವಾರುಗಳು ಕಿಚ್ಚಿ ಹೋಗಿವೆ. ದಸ್ತಾಪುರ ಸಂಪೂರ್ಣ ಜಲಾವೃತ ಗೊಂಡು ಸಂಚಾರ ಸ್ಥಗಿತ ಗೊಂಡಿದೆ. ಭುಂಯಾರ ರಸ್ತೆ ಶೀಥಿಲಗೊಂಡು ಸಂಚಾರ ಸ್ಥಗಿತಗೊಂಡಿದೆ.

ಶ್ರೀಚಂದ, ಜವಳಗಾ (ಬಿ) 20 ಮನೆಗಳಿಗೆ ನೀರು ನುಗ್ಗಿದೆ. ಹಳೆ ಅಂಕಲಗಾ, ಸಿರಗಾಪುರ ಗ್ರಾಮಗಳಲ್ಲೂ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಗ್ರಾಮದಲ್ಲಿ ಮನೆಗಳಿಗೆ ಹೊಲ ಗದ್ದೆಗಳಲ್ಲಿ ನೀರು ಹೊಕ್ಕು ಬಾಳೆ, ಕಬ್ಬು ಸೇರಿದಂತೆ ಅಳಿದುಳಿದ ಮತ್ತಿತರ ಬೆಳೆಗಳು ನೆಲಕಚ್ಚಿವೆ. ತಾಲ್ಲೂಕಿನಾದ್ಯಂತ ಪ್ರವಾಹ ಉಂಟಾಗಿ ಸೇತುವೆಗಳು ರಸ್ತೆಗಳು ಕೊಚ್ಚಿ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಸುಮಾರು 10 ಗಂಟೆಗಳ ಕಾಲ ವಿದ್ಯುತ್‌ ಕಡಿತಗೊಳಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು