ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಅಭಿವೃದ್ಧಿಗೆ ಕೆಇಎಂಆರ್‌ಸಿ ಹಣ: ಸಚಿವ ಆನಂದ್‌ ಸಿಂಗ್‌

ಜಿಲ್ಲಾಡಳಿತ ಭವನದ ಜಾಗ ಪರಿಶೀಲಿಸಿದ ಹಜ್‌ ಖಾತೆ ಸಚಿವ ಆನಂದ್‌ ಸಿಂಗ್‌ ಹೇಳಿಕೆ
Last Updated 13 ಫೆಬ್ರುವರಿ 2021, 9:57 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ ಜಿಲ್ಲೆ): ‘ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಇಎಂಆರ್‌ಸಿ) ಹಣ ವಿನಿಯೋಗಿಸುವ ಚಿಂತನೆ ನಡೆದಿದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಹೇಳಿದರು.

ನಗರದ ಟಿ.ಬಿ. ಡ್ಯಾಂ ರಸ್ತೆಯ ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌‌ಗೆ (ಟಿಎಎಸ್‌ಪಿ) ಸೇರಿದ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಜಿಲ್ಲಾಡಳಿತ ಭವನದ ಸ್ಥಳ ಶನಿವಾರ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಟಿಎಸ್‌ಪಿಗೆ ಸೇರಿದ ಒಟ್ಟು 83 ಎಕರೆ ಜಾಗ ಈ ಹಿಂದೆ ಗೃಹ ಮಂಡಳಿ ಹರಾಜಿನಲ್ಲಿ ಪಡೆದುಕೊಂಡಿತ್ತು. ಈಗ ಅದನ್ನು ಕಂದಾಯ ಇಲಾಖೆಯು ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ನೀಡಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವೈದ್ಯಕೀಯ ಕಾಲೇಜು ಸೇರಿದಂತೆ ಇತರೆ ಕಚೇರಿಗಳನ್ನು ಇಲ್ಲಿ ನಿರ್ಮಿಸಲಾಗುವುದು. ತಿಂಗಳೊಳಗೆ ಡಿ.ಸಿ., ಎಸ್ಪಿ, ಹಾಗೂ ಸಿಇಒ ಬರುವರು. ತಾತ್ಕಾಲಿಕವಾಗಿ ಜಿಲ್ಲಾಧಿಕಾರಿ ಕಚೇರಿಯು ಟಿಎಸ್ಪಿಯ ಹಳೆಯ ಕಟ್ಟಡದಲ್ಲೇ ಕೆಲಸ ನಿರ್ವಹಿಸಲಿದೆ. ಟಿಎಸ್ಪಿ ಎದುರು ಅನೇಕ ವರ್ಷಗಳ ಹಳೆಯ ಬೃಹತ್‌ ಮರಗಳಿವೆ. ಅವುಗಳನ್ನು ಹಾಗೆಯೇ ಉಳಿಸಿಕೊಂಡು ಬೇರೆಡೆ ರಸ್ತೆ ವಿಸ್ತರಣೆ ಮಾಡಲಾಗುವುದು’ ಎಂದು ಹೇಳಿದರು.

‘ವಿಜಯನಗರ ಸಂಸ್ಕೃತಿ, ಪರಂಪರೆ ಬಿಂಬಿಸುವ ರೀತಿಯಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲಾಗುವುದು. ಅನುದಾನದ ಕೊರತೆ ಇಲ್ಲ. ರಾಜ್ಯ ಸರ್ಕಾರದ ವಿಶೇಷ ಅನುದಾನದ ಅಗತ್ಯವಿಲ್ಲ. ಕೆಇಎಂಆರ್‌ಸಿ ಹಣ ಸಿಕ್ಕರೆ ಸಾಕು. ಒಡಿಶಾ ರಾಜ್ಯವು ಸುಪ್ರೀಂಕೋರ್ಟ್‌ಗೆ ವಿಶೇಷ ಕೋರಿಕೆ ಸಲ್ಲಿಸಿ, ಆ ಹಣ ಬಳಸಿಕೊಂಡಿದೆ. ರಾಜ್ಯವು ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿ, ಹಣ ಬಳಸಿಕೊಳ್ಳಲು ಮುಂದಾಗಿದೆ’ ಎಂದು ಮಾಹಿತಿ ನೀಡಿದರು.

‘ನೂತನ ಜಿಲ್ಲೆ, ಆಯಾ ತಾಲ್ಲೂಕುಗಳಲ್ಲಿ ಯಾವ ಕಚೇರಿಗಳ ನಿರ್ಮಾಣ ಮಾಡಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಎಲ್ಲ ತಾಲ್ಲೂಕುಗಳ ಜನಪ್ರತಿನಿಧಿಗಳ ಜತೆ ಕೂತು ಚರ್ಚಿಸಿ, ಮುಂದುವರೆಯಲಾಗುವುದು’ ಎಂದರು.

‘ಅನಂತಶಯನಗುಡಿ ಮೇಲ್ಸೇತುವೆಗೆ ₹45 ಕೋಟಿ’

‘ನಗರದ ಅನಂತಶಯನಗುಡಿ ರೈಲ್ವೆ ಗೇಟ್‌ ಬಳಿ ರೈಲ್ವೆ ಇಲಾಖೆಯು ₹45 ಕೋಟಿಯಲ್ಲಿ ಮೇಲ್ಸೇತುವೆ ನಿರ್ಮಿಸಲಿದ್ದು, ವರ್ಷದೊಳಗೆ ಕಾಮಗಾರಿ ಆರಂಭವಾಗಲಿದೆ’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

‘ಮೇಲ್ಸೇತುವೆಗೆ ಕೇಂದ್ರ ಸರ್ಕಾರ ₹11 ಕೋಟಿ, ಮಿಕ್ಕುಳಿದ ಹಣ ರಾಜ್ಯ ಸರ್ಕಾರವು ಜಿಲ್ಲಾ ಖನಿಜ ನಿಧಿಯಿಂದ ಕೊಡಲಿದೆ. ರೈಲ್ವೆ ಇಲಾಖೆಯೇ ಕೆಲಸ ಪೂರ್ಣಗೊಳಿಸಲಿದೆ. ಅಲ್ಲಿರುವ ಕೆಲ ಕಟ್ಟಡಗಳು ತೆರವಾಗಲಿದ್ದು, ಅವರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಲಾಗುವುದು’ ಎಂದು ಹೇಳಿದರು.

‘ಹೊಸಪೇಟೆ–ಬಳ್ಳಾರಿ ಹೆದ್ದಾರಿ ಶೇ 50ರಷ್ಟು ಕೆಲಸ ಪೂರ್ಣಗೊಂಡಿದೆ. ತಾಂತ್ರಿಕ, ಆರ್ಥಿಕ ಸಮಸ್ಯೆಗಳಿಂದ ಸ್ವಲ್ಪ ವಿಳಂಬವಾಗಿದೆ. ಈ ವಿಷಯ ಕೇಂದ್ರ ಹೆದ್ದಾರಿ ಸಚಿವರ ಗಮನಕ್ಕೆ ತಂದ ನಂತರ ಪುನಃ ಕೆಲಸ ಆರಂಭಗೊಂಡಿದೆ. ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

‘ಪುನರ್ವಸತಿಗೆ ಸಿದ್ಧ’

‘ನ್ಯಾಯಾಲಯದ ಆದೇಶದಂತೆ ಹಂಪಿಯ ಜನತಾ ಪ್ಲಾಟ್‌ನಲ್ಲಿ ತಾತ್ಕಾಲಿಕವಾಗಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ವಾಣಿಜ್ಯ ಚಟುವಟಿಕೆ ನಡೆಸದಂತೆ ಷರತ್ತು ವಿಧಿಸಿಯೇ ಅಲ್ಲಿರಲು ಅವಕಾಶ ಕೊಡಲಾಗಿತ್ತು. ಒಂದುವೇಳೆ ಅಲ್ಲಿರುವವರು ಬೇರೆ ಕಡೆ ಹೋಗಲು ಮುಂದೆ ಬಂದರೆ ಅವರಿಗೆ ‘ಹೊಸ ಹಂಪಿ’ ಮಾದರಿಯಲ್ಲಿ ಪುನರ್ವಸತಿ ಕಲ್ಪಿಸಿಕೊಡಲು ಸಿದ್ಧ’ ಎಂದು ಸಚಿವ ಆನಂದ್ ಸಿಂಗ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT