ಸೋಮವಾರ, ಜೂನ್ 1, 2020
27 °C
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಪ್ರಸ್ತಾವ ತಿರಸ್ಕರಿಸಿದ ಕೇಂದ್ರ; ಪರ–ವಿರೋಧದ ಅಭಿಪ್ರಾಯ

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ: ‘ಹಿಂದೂ ಧರ್ಮದ ಶಕ್ತಿ ಕುಗ್ಗಿಸುವ ಹುನ್ನಾರ’

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಬೇಕೆಂದು ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸನ್ನು ತಿರಸ್ಕರಿಸಿದ್ದಾಗಿ ಕೇಂದ್ರ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿರುವ ವಿಷಯಕ್ಕೆ ಜಿಲ್ಲೆಯ ಸ್ವಾಮೀಜಿಗಳಿಂದ ಪರ–ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.

‘ಈ ನಿರ್ಧಾರದಿಂದ ಹಿಂದೂ ಧರ್ಮದ ಅಖಂಡತೆ, ಭಾವೈಕ್ಯತೆ ಉಳಿಯುವಂತಾಗಿದೆ’ ಎಂದು ಕೇಂದ್ರದ ನಿರ್ಧಾರವನ್ನು ಕೆಲವರು ಸ್ವಾಗತಿಸಿದರೆ, ‘ಕೇಂದ್ರ ಸರ್ಕಾರದಿಂದ ಇಂತಹುದೇ ನಿರೀಕ್ಷೆಯಿತ್ತು. ಸುಪ್ರೀಂಕೋರ್ಟ್‌ ಮೊರೆ ಹೋಗಿ ನ್ಯಾಯಯುತ ಹಕ್ಕು ಪಡೆದುಕೊಳ್ಳಲಾಗುವುದು’ ಎಂದು ಪ್ರತ್ಯೇಕ ಧರ್ಮದ ಪರ ಇರುವವರು ಹೇಳಿದ್ದಾರೆ.

‘ವೀರಶೈವ–ಲಿಂಗಾಯತ ಎರಡೂ ಒಂದೇ ಎಂಬುದನ್ನು ಕೇಂದ್ರ ಮನಗಂಡಿದೆ. ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬುವವರಿಗೆ ಸೋಲಾಗಿದೆ. ಎರಡೂ ಒಂದೇ ಎಂದು ಹೇಳುತ್ತಿದ್ದ ವೀರಶೈವರಿಗೆ ಗೆಲುವಾಗಿದೆ. ವೀರಶೈವ–ಲಿಂಗಾಯತ ಹಿಂದೂ ಧರ್ಮದ ಒಂದು ಅಂಗ. ಜೈನ, ಸಿಖ್‌ ಸೇರಿದಂತೆ ಇತರೆ ಧರ್ಮಗಳು ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆದುಕೊಂಡರೂ ಸಹ ಅವುಗಳೆಲ್ಲ ಹಿಂದೂ ಧರ್ಮದ ಭಾಗಗಳೇ ಆಗಿವೆ. ಅವುಗಳೆಲ್ಲ ಹಿಂದೂ ಧರ್ಮದೊಳಗೆ ಅಂತರ್ಗತವಾಗಿವೆ’ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

‘ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಟ್ಟರೆ ಭವಿಷ್ಯದಲ್ಲಿ ನಾಯಕರು, ಹಾಲುಮತದವರು ಆ ಬೇಡಿಕೆ ಸಲ್ಲಿಸಬಹುದು. ಹೀಗಾದರೆ ಹಿಂದೂ ಧರ್ಮ ಎಲ್ಲಿ ಉಳಿಯುತ್ತದೆ. ಹಿಂದೂ ಧರ್ಮ ವಿಭಜನೆಗೊಂಡರೆ ಅಲ್ಪಸಂಖ್ಯಾತರ ಶಕ್ತಿ ಹೆಚ್ಚಾಗುತ್ತದೆ. ಬಹುಸಂಖ್ಯಾತರ ಶಕ್ತಿ ಕುಸಿಯುತ್ತದೆ. ಮತ ಗಳಿಕೆಗಾಗಿ ನಿರಂತರವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಯುತ್ತಿದೆ’ ಎಂದರು.

‘ಪ್ರತ್ಯೇಕ ಧರ್ಮ ಮಾಡುವುದರಿಂದ ಬಸವಣ್ಣನವರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಆಶಯ ಈಡೇರುವುದಿಲ್ಲ. ವೀರಶೈವ–ಲಿಂಗಾಯತರು ಸಮಗ್ರವಾಗಿರಬೇಕೆಂದರೆ ಪ್ರತ್ಯೇಕ ಧರ್ಮ ಬೇಕಿಲ್ಲ. ಕೇಂದ್ರದ ನಿರ್ಧಾರ ಸ್ವಾಗತಾರ್ಹವಾದುದು’ ಎಂದು ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮೀಜಿ ತಿಳಿಸಿದರು.

‘ಕೆಲವರು ಬಸವಣ್ಣನವರನ್ನು ಗುತ್ತಿಗೆ ಹಿಡಿದುಕೊಂಡವರಂತೆ ಮಾತಾಡುತ್ತಿದ್ದಾರೆ. ಆದರೆ, ಬಸವಣ್ಣ ಎಲ್ಲರಿಗೂ ಬೇಕಾದವರು. ವೀರಶೈವ–ಲಿಂಗಾಯತ ಎರಡೂ ಒಂದೇ. ಅದು ಬೇರೆಯಲ್ಲ’ ಎಂದರು.

‘ವೀರಶೈವ ಲಿಂಗಾಯತ ಯಾವತ್ತಿಗೂ ಎರಡು ಒಂದೇ. ಬೇರೆ ಬೇರೆಯಾಗುವುದಕ್ಕೆ ಸಾಧ್ಯವಿಲ್ಲ. ಒಂದೇ ನಾಣ್ಯದ ಎರಡು ಮುಖಗಳು. ಭಿನ್ನತೆ ಇಲ್ಲ. ವೀರಶೈವ ಪರಭಾಷಿಕ ಶಬ್ದ. ಲಿಂಗಾಯತ ರೂಢವಾಚಕ ಪದ. ಎಲ್ಲರೂ ಐಕ್ಯಮತದಿಂದ ಒಟ್ಟಾಗಿ ಹೋಗಬೇಕು. ಸನಾತನವಾದ ಸಾವಿರ ವರ್ಷದ ಪರಂಪರೆಯನ್ನು ಸಂಕುಚಿತಗೊಳಿಸದೆ ಸಮಾನ ಭಾವದಿಂದ ಉಳಿಸಿಕೊಂಡು ಹೋಗಬೇಕು’ ಎಂದು ಉಜ್ಜಯಿನಿ ಸಿದ್ಧಲಿಂಗ ಶಿವಚಾರ್ಯ ರಾಜದೇಶಿ ಕೇಂದ್ರ ಸ್ವಾಮೀಜಿ ಹೇಳಿದರು.

‘ಲಿಂಗಾಯತ ಸ್ವತಂತ್ರ ಧರ್ಮ. ಅದರ ಸಂಸ್ಥಾಪಕರು ಬಸವಣ್ಣನವರು ಎನ್ನುವುದಕ್ಕೆ ಬ್ರಿಟಿಷರ ಕಾಲದಲ್ಲೇ ಆಧಾರಗಳು ಸಿಕ್ಕಿವೆ. ಲಿಂಗಾಯತಕ್ಕೆ ಜಾಗತಿಕ ಧರ್ಮದ ಸ್ಥಾನಮಾನ ಸಿಗಬೇಕು ಎನ್ನುವುದು ಬಸವ ಭಕ್ತರ ಆಶಯವಾಗಿದೆ. ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯಲು ಸುಪ್ರೀಂಕೋರ್ಟ್‌ ಮೊರೆ ಹೋಗಲಾಗುವುದು’ ಎಂದು ಸಂಡೂರು ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭು ಸ್ವಾಮೀಜಿ ‘ಪ್ರತಿಕ್ರಿಯಿಸಿದರು’.

‘ಈ ಹಿಂದೆ ಕೇಂದ್ರ ಸರ್ಕಾರ ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಲು ನಿರಾಕರಿಸಿತು. ಆಗ, ಜೈನ ಧರ್ಮೀಯರು ಸುಪ್ರೀಂಕೋರ್ಟ್‌ ಮೊರೆ ಹೋಗಿ ಧರ್ಮದ ಸ್ಥಾನಮಾನ ಪಡೆದುಕೊಂಡಿದ್ದರು. ಈಗ ನಾವು ಅದೇ ಮಾರ್ಗ ಅನುಸರಿಸುತ್ತೇವೆ. ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕೆಂಬುದು ಬೇರೆ ವಿಷಯ. ಅದಕ್ಕೆ ಜಾಗತಿಕ ಮನ್ನಣೆ ಸಿಗಬೇಕು ಎನ್ನುವುದು ನಮ್ಮ ಹೋರಾಟದ ಮುಖ್ಯ ಉದ್ದೇಶ. ಅದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಹೇಳಿದರು.

‘ಕೇಂದ್ರ ಇಂತಹುದೇ ತೀರ್ಮಾನ ಕೈಗೊಳ್ಳುತ್ತದೆ ಎಂಬ ನಿರೀಕ್ಷೆ ಇತ್ತು. ಅದು ಈಗ ಸತ್ಯವಾಗಿದೆ. ನ್ಯಾಯಾಲಯದ ಮೂಲಕ ನಮ್ಮ ಹಕ್ಕು ಪಡೆದುಕೊಳ್ಳುತ್ತೇವೆ. ಕೇಂದ್ರದ ನಿರ್ಧಾರವೇ ಅಂತಿಮವಲ್ಲ’ ಎಂದು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಸಕ್ರಿಯರಾಗಿರುವ ಬಸವ ಬಳಗದ ಟಿ.ಎಚ್‌. ಬಸವರಾಜ ತಿಳಿಸಿದರು.

‘2011ರ ಜನಗಣತಿ ಸಂದರ್ಭದಲ್ಲಿ ಕೊಟ್ಟೂರು ಮಠದ ಸಂಗನಬಸವ ಸ್ವಾಮೀಜಿಗಳು ಸೇರಿದಂತೆ ಹಲವರು, ‘ಜನಗಣತಿಯಲ್ಲಿ ಲಿಂಗಾಯತ ಎಂದು ಬರೆಸಬೇಕು. ಯಾರು ಹಿಂದೂ ಎಂದು ಬರೆಸಬಾರದು’ ಎಂದು ಹೇಳಿದ್ದರು. ಕರ ಪತ್ರಗಳನ್ನು ಮುದ್ರಿಸಿ ಹಂಚಿಸಿದ್ದರು. ಸಂಗನಬಸವ ಸ್ವಾಮೀಜಿಗಳೇ ಪ್ರಚಾರದ ನೇತೃತ್ವ ಕೂಡ ವಹಿಸಿದ್ದರು. ಈಗ ಅವರು ವ್ಯತಿರಿಕ್ತವಾದ ಹೇಳಿಕೆ ನೀಡಿರುವುದು ನೋಡಿದರೆ ಆಶ್ಚರ್ಯವಾಗುತ್ತಿದೆ’ ಎಂದರು.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು