ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠೆ ವಿಷಯವಾದ ವಿಜಯನಗರ ಜಿಲ್ಲೆ ರಚನೆ

ಆನಂದ್‌ ಸಿಂಗ್‌ ಕೈಮೇಲಾಗದಂತೆ ತಡೆಯಲು ಬಿಜೆಪಿ ಶಾಸಕರ ಯತ್ನ
Last Updated 29 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ಮಾಡಬೇಕೆಂಬ ವಿಚಾರವೂ ಈಗ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ.

ಅಷ್ಟೇ ಅಲ್ಲ, ಪರ–ವಿರೋಧಕ್ಕೂ ಕಾರಣವಾಗಿದೆ. ಇನ್ನಷ್ಟೇ ಬಿಜೆಪಿ ಸೇರಲಿರುವ ಅನರ್ಹ ಶಾಸಕ ಆನಂದ್‌ ಸಿಂಗ್‌ ಹೊಸ ಜಿಲ್ಲೆ ಪರ ವಕಾಲತ್ತು ಮಾಡುತ್ತಿದ್ದರೆ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಜಿ. ಸೋಮಶೇಖರ್‌ ರೆಡ್ಡಿ, ಜಿ. ಕರುಣಾಕರ ರೆಡ್ಡಿ ಅವರು ಜಿಲ್ಲೆ ವಿಭಜನೆಗೆ ವಿರೋಧ ದಾಖಲಿಸಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋಗಿರುವ ಸೋಮಶೇಖರ್‌ ರೆಡ್ಡಿ, ‘ಜಿಲ್ಲೆ ವಿಭಜನೆ ಮಾಡಿದರೆ ರಾಜೀನಾಮೆ ಕೊಡುತ್ತೇನೆ’ ಎಂದು ಹೇಳಿದ್ದಾರೆ. ಭಾನುವಾರ ಇದೇ ಧಾಟಿಯಲ್ಲಿ ಮಾತನಾಡಿರುವ ಕರುಣಾಕರ ರೆಡ್ಡಿ, ‘ಒಬ್ಬ ವ್ಯಕ್ತಿಯ ಹಿತಾಸಕ್ತಿಗಾಗಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಗಳು ಮುಂದುವರೆಯಬೇಕು’ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.

ಹೀಗಾಗಿ ಈ ವಿಷಯ ಇದೀಗ ಕಗ್ಗಂಟಾಗಿ ಪರಿಣಮಿಸಿದೆ. ಉಪಚುನಾವಣೆಯಲ್ಲಿ ಮೇಲುಗೈ ಸಾಧಿಸುವುದು, ರಾಜಕೀಯವಾಗಿ ಮುಂಚೂಣಿಗೆ ಬರಬೇಕೆಂಬ ಉದ್ದೇಶದಿಂದ ಆನಂದ್‌ ಸಿಂಗ್‌ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವುದು ಗುಟ್ಟಾಗೇನೂ ಉಳಿದಿಲ್ಲ.

ಸೆ.18ರಂದು ಸ್ವಾಮೀಜಿಗಳು, ಕೆಲ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ಕರೆದೊಯ್ದು ವಿಜಯನಗರ ಜಿಲ್ಲೆ ರಚನೆಗೆ‌ ಹಕ್ಕೊತ್ತಾಯ ಮಾಡಿದರು. ಅದರ ಬೆನ್ನಲ್ಲೇ ಸಿ.ಎಂ. ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಜಿಲ್ಲೆಗೆ ಸಂಬಂಧಿಸಿದ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ನಿರ್ದೇಶನ ಕೊಟ್ಟಿದ್ದರು. ನಂತರ ಬಳ್ಳಾರಿ ಜಿಲ್ಲಾಧಿಕಾರಿಯಿಂದಲೂ ಮಾಹಿತಿ ತರಿಸಿಕೊಂಡಿದ್ದರು.

ಇನ್ನೇನು ವಿಜಯನಗರ ಜಿಲ್ಲೆ ಘೋಷಣೆಯಾಗಿಯೇ ಬಿಡಬಹುದು ಎಂಬ ಮಾತುಗಳು ಎಲ್ಲೆಡೆ ಕೇಳಿ ಬಂದಿದ್ದವು. ಈ ಸುದ್ದಿ ಕಿವಿಗೆ ರಾಚುತ್ತಿದ್ದಂತೆ ರೆಡ್ಡಿ ಸಹೋದರರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿರೋಧವೇಕೇ:‘ವಿಜಯನಗರ ಜಿಲ್ಲೆ ರಚನೆಯಾದರೆ ಬಿಜೆಪಿಯಲ್ಲಿ ಆನಂದ್‌ ಸಿಂಗ್‌ ಕೈ ಮೇಲಾಗುತ್ತದೆ. ಉಪಚುನಾವಣೆಯಲ್ಲಿ ಗೆದ್ದ ನಂತರ ಮತ್ತೆ ಸಚಿವರಾದರೆ ಅವರ ಶಕ್ತಿ ಇನ್ನಷ್ಟು ವೃದ್ಧಿಯಾಗುತ್ತದೆ. ತಾವು ಹಿನ್ನಲೆಗೆ ಸರಿಯಬೇಕಾಗುತ್ತದೆ’ ಎಂಬ ಆತಂಕದಿಂದ ರಾಮುಲು, ರೆಡ್ಡಿ ಸಹೋದರರು ಹೊಸ ಜಿಲ್ಲೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಈ ವಿಷಯ ಶಾಸಕರ ಮಟ್ಟಿಗೆ ಸೀಮಿತವಾಗಿಲ್ಲ. ಜಿಲ್ಲೆ ಪರವಾಗಿ ಒಂದು ದಶಕದಿಂದ ಹೋರಾಟ ನಡೆಸುತ್ತಿರುವ ವಿಜಯನಗರ ಜಿಲ್ಲಾ ಹೋರಾಟ ಸಮಿತಿ, ಜಿಲ್ಲೆಯ ಎಲ್ಲಾ ಪಶ್ಚಿಮ ತಾಲ್ಲೂಕುಗಳ ಹೋರಾಟಗಾರರು ಕೂಡ ಸಿಂಗ್‌ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ.

‘ಸ್ಥಳೀಯವಾಗಿ ಹತ್ತು ವರ್ಷಗಳಿಂದ ಜಿಲ್ಲೆ ಪರ ಹೋರಾಟ ನಡೆಸುತ್ತಿದ್ದೇವೆ. ಆದರೆ, ಸಮಿತಿಯ ಯಾರೊಬ್ಬರನ್ನೂ ಸಂಪರ್ಕಿಸದೆ, ತಮಗೆ ಬೇಕಾದವರನ್ನು ಆನಂದ್‌ ಸಿಂಗ್‌ ನಿಯೋಗದಲ್ಲಿ ಕರೆದೊಯ್ದಿದ್ದಾರೆ. ಮೂರು ಸಲ ಅವರು ಶಾಸಕರಾಗಿದ್ದರು. ಒಮ್ಮೆಯೂ ಅದರ ಪರ ದನಿ ಎತ್ತಿಲ್ಲ. ಬರುವ ಉಪಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಈಗ ಅದರ ಬಗ್ಗೆ ಎಲ್ಲಿಲ್ಲದ ಕಾಳಜಿ ತೋರಿಸುತ್ತಿದ್ದಾರೆ’ ಎಂದು ಸಮಿತಿಯ ಮುಖಂಡ ನಿಂಬಗಲ್‌ ರಾಮಕೃಷ್ಣ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT