ಗುರುವಾರ , ಸೆಪ್ಟೆಂಬರ್ 16, 2021
25 °C
ತಪಾಸಣೆಗೆ ಒಳಪಡದೆ ಹಂಪಿಗೆ ಬಂದು ಹೋಗುತ್ತಿರುವ ಪ್ರವಾಸಿಗರು

ವಿಜಯನಗರ: ವಿಶ್ವಪ್ರಸಿದ್ಧ ತಾಣದಲ್ಲಿಲ್ಲ ಕೋವಿಡ್‌ ಪರೀಕ್ಷೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಹೊರಗಿನಿಂದ ಬರುವ ಪ್ರವಾಸಿಗರನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು ಎಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ. ಆದರೆ, ವಿಶ್ವಪ್ರಸಿದ್ಧ ಹಂಪಿಯಲ್ಲಿ ಅಂತಹ ಯಾವುದೇ ವ್ಯವಸ್ಥೆ ಇದುವರೆಗೆ ಮಾಡಿಲ್ಲ.

ಪ್ರವಾಸಿಗರು ಯಾವುದೇ ಅಡೆತಡೆಯಿಲ್ಲದೆ ಹಂಪಿಗೆ ಭೇಟಿ ನೀಡುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಈಗಾಗಲೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತರರಾಜ್ಯ ಪ್ರವಾಸಿಗರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು. ಪ್ರವಾಸಿ ತಾಣ ಹಾಗೂ ಅದರ ಸುತ್ತಮುತ್ತಲಿನ ರೆಸಾರ್ಟ್‌, ಹೋಂ ಸ್ಟೇಗಳಲ್ಲಿ ವಾಸ್ತವ್ಯ ಮಾಡುವ ಪ್ರವಾಸಿಗರ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಬೇಕು. ಇಲ್ಲವೇ ಎರಡರಿಂದ ಮೂರು ದಿನಗಳ ಹಿಂದೆ ಕೋವಿಡ್‌ ಪರೀಕ್ಷೆಗೆ ಒಳಗಾದ ವರದಿ ಪ್ರಸ್ತುತಪಡಿಸಿದರೆ ಅಂತಹವರಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ. ಆದರೆ, ಇದ್ಯಾವುದೂ ಪಾಲನೆ ಆಗುತ್ತಿಲ್ಲ.

ರೈಲು ನಿಲ್ದಾಣದಲ್ಲಿಯೂ ಯಾವುದೇ ರೀತಿಯ ತಪಾಸಣೆ ಮಾಡುತ್ತಿಲ್ಲ. ಪರೀಕ್ಷೆ ಮಾಡುವ ವ್ಯವಸ್ಥೆಯೂ ಇಲ್ಲ. ಕನಿಷ್ಠ ಥರ್ಮಲ್‌ ಸ್ಕ್ರೀನಿಂಗ್‌ ಕೂಡ ನಡೆಸುತ್ತಿಲ್ಲ.

ಕಮಲಾಪುರದ ಮೂಲಕ ಹಾಗೂ ಕಡ್ಡಿರಾಂಪುರ ಮಾರ್ಗವಾಗಿ ಹಂಪಿಗೆ ತೆರಳಬಹುದು. ಆದರೆ, ಎರಡೂ ರಸ್ತೆಗಳಲ್ಲಿ ಪರೀಕ್ಷೆ ನಡೆಸುವುದಾಗಲಿ, ಪರೀಕ್ಷೆಗೆ ಒಳಪಟ್ಟಿದ್ದಾರೋ ಇಲ್ಲವೋ ಎನ್ನುವುದು ಖಾತ್ರಿ ಪಡಿಸಿಕೊಳ್ಳುತ್ತಿಲ್ಲ. ಮಾಸ್ಕ್‌ ಧರಿಸದೇ ಓಡಾಡುತ್ತಿರುವವರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ಅದು ಅಷ್ಟಕ್ಕೆ ಸೀಮಿತವಾಗಿದೆ.

ರೆಸಾರ್ಟ್‌, ಹೋಂ ಸ್ಟೇಗಳಲ್ಲೂ ಇದೇ ಪರಿಸ್ಥಿತಿ ಇದೆ. ಪೂರ್ವಾಪರ ವಿಚಾರಿಸುತ್ತಿಲ್ಲ. ಕೋವಿಡ್‌ ವರದಿ ಕೇಳುತ್ತಿಲ್ಲ. ಲಾಕ್‌ಡೌನ್‌ ತೆರವಾದ ನಂತರ ಹಂಪಿಗೆ ನಿತ್ಯ ಎರಡರಿಂದ ಮೂರು ಸಾವಿರ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ವಾರಾಂತ್ಯಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟೊಂದು ಸಂಖ್ಯೆಯ ಜನ ಬಂದು ಹೋಗುತ್ತಿದ್ದರೂ ಅವರನ್ನು ಪರೀಕ್ಷೆಗೆ ಒಳಪಡಿಸದೇ ಓಡಾಡಲು ಬಿಡುತ್ತಿರುವುದಕ್ಕೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

‘ಪ್ರವಾಸಿಗರ ಮೇಲೆಯೇ ನಮ್ಮ ಬದುಕು ನಿಂತಿದೆ. ಹಾಗಂತ ಪರೀಕ್ಷೆಗೆ ಒಳಪಡಿಸದೆ ಪ್ರವಾಸಿಗರಿಗೆ ಬಿಟ್ಟರೆ ಸ್ಥಳೀಯರು ತೊಂದರೆಗೆ ಸಿಲುಕಬಹುದು. ಹಾಗಾಗಿ ಪ್ರತಿಯೊಬ್ಬರನ್ನೂ ಹಂಪಿಯಲ್ಲೇ ಪರೀಕ್ಷಿಸಬೇಕು’ ಎನ್ನುತ್ತಾರೆ ಸ್ಥಳೀಯರಾದ ರಾಜು, ರಮೇಶ.

‘ರಾಜ್ಯದ ಗಡಿಗಳಲ್ಲಿ ಹೆಚ್ಚಿನ ಕಟ್ಟುನಿಟ್ಟಿನಿಂದ ಪ್ರತಿಯೊಬ್ಬರ ತಪಾಸಣೆ ಮಾಡುತ್ತಿರುವುದರಿಂದ ಪರೀಕ್ಷಾ ವರದಿ ಇಲ್ಲದೆ ಜಿಲ್ಲೆಯೊಳಗೆ ಬರುವುದು ಬಹಳ ಕಠಿಣ. ಹೀಗಿದ್ದರೂ ರೈಲು ನಿಲ್ದಾಣ, ಪ್ರವಾಸಿ ಕೇಂದ್ರಗಳಲ್ಲಿ ಇಷ್ಟರಲ್ಲೇ ಆರ್‌ಟಿಪಿಸಿಆರ್‌ ಟೆಸ್ಟ್‌ ಆರಂಭಿಸಲಾಗುವುದು’ ಎಂದು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು