ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಹರಾಜಿನಲ್ಲಿ ಅಭ್ಯರ್ಥಿಗಳನ್ನು ಆರಿಸುವ ಕ್ರಮ ವಿರೋಧಿಸಿದವರ ಮೇಲೆ ಹಲ್ಲೆ

ಚುನಾವಣೆಗೆ ನಿಲ್ಲದಂತೆ ತಡೆಯಲು ಜಾತಿನಿಂದನೆ, ಬಹಿಷ್ಕಾರದ ಅಸ್ತ್ರ ಬಳಕೆಯ ಆರೋಪ
Last Updated 6 ಡಿಸೆಂಬರ್ 2020, 11:13 IST
ಅಕ್ಷರ ಗಾತ್ರ

ಹೊಸಪೇಟೆ: ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಹರಾಜಿನ ಮೂಲಕ ಆಯ್ಕೆ ಮಾಡಲು ಮುಂದಾದ ಕ್ರಮವನ್ನು ಪ್ರಶ್ನಿಸಿದವರ ಮೇಲೆಯೇ ಹಲ್ಲೆ ನಡೆಸಿ, ಅವರನ್ನು ಗ್ರಾಮದಿಂದ ಬಹಿಷ್ಕರಿಸಲು ಮುಂದಾಗಿರುವ ಘಟನೆ ತಾಲ್ಲೂಕಿನ ಪೋತಲಕಟ್ಟೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

ತಾಲ್ಲೂಕಿನ ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪೋತಲಕಟ್ಟೆ ಗ್ರಾಮದ ಐದು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ಸಭೆ ವೇಳೆ ಈ ಘಟನೆ ಜರುಗಿದೆ.

ಗ್ರಾಮದಲ್ಲಿ ಅನೇಕ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ‘ಸಮೂಹ ಶಕ್ತಿ’ ಸಂಘಟನೆಯ ಕಾರ್ಯಕರ್ತರು ಈ ಸಲದ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅರ್ಹರಾದವರನ್ನು ಚುನಾವಣೆಗೆ ನಿಲ್ಲಿಸಲು ನಿರ್ಧರಿಸಿದ್ದಾರೆ. ಅದಕ್ಕೆ ಗ್ರಾಮಸ್ಥರಿಂದ ದೊಟ್ಟ ಮಟ್ಟದ ಬೆಂಬಲ ವ್ಯಕ್ತವಾಗಿದೆ. ಇದಕ್ಕೆ ಗ್ರಾಮದ ಹಿರಿಯರು, ‘ಚುನಾವಣೆ ಬದಲು ಸಭೆ ಸೇರಿ, ಅವಿರೋಧವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸೂಕ್ತ’ ಎಂದು ಹೇಳಿ ಭಾನುವಾರ ಸಭೆ ಸೇರಿದ್ದಾರೆ.

‘ಹರಾಜಿನ ಮೂಲಕ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಸೂಕ್ತ. ಇದರಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲ. ಗ್ರಾಮದಲ್ಲಿ ವಾತಾವರಣ ಕೆಡುವುದಿಲ್ಲ’ ಎಂದು ಹೇಳಿದ್ದಾರೆ. ಅದಕ್ಕೆ ‘ಸಮೂಹ ಶಕ್ತಿ’ ಸಂಘಟನೆಯ ಮುಖಂಡ ದೇವರಾಜ ಸೇರಿದಂತೆ ಇತರರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಹೀಗೆ ಮಾಡಿದರೆ ದುಡ್ಡು ಇರುವವರು ಪಂಚಾಯಿತಿಗೆ ಆಯ್ಕೆಯಾಗುತ್ತಾರೆ. ಅದರ ಬದಲು ಅರ್ಹ, ವಿದ್ಯಾವಂತರ ಪಟ್ಟಿ ಮಾಡೋಣ. ನಂತರ ಚೀಟಿ ಮೂಲಕ ಐದು ಸದಸ್ಯರನ್ನು ಆಯ್ಕೆ ಮಾಡೋಣ’ ಎಂದು ದೇವರಾಜ ಹೇಳಿದ್ದಾರೆ. ಅದರಿಂದ ಕೆರಳಿ ಅಲ್ಲಿದ್ದ ಕೆಲವರು ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಮೊಬೈಲ್‌ನಲ್ಲಿ ಸಭೆಯ ಚಿತ್ರೀಕರಣ ಮಾಡುತ್ತಿದ್ದ ಸಂಘಟನೆಯ ಕಾರ್ಯಕರ್ತ ತಾಯಪ್ಪ ಎಂಬುವರ ಮೇಲೆ ಬಸವರಾಜ ಎನ್ನುವವರು ಹಲ್ಲೆ ನಡೆಸಿದ್ದರಿಂದ ಅವರು ಗಾಯಗೊಂಡಿದ್ದಾರೆ. ನಂತರ ದೇವರಾಜ ಅವರ ಮೇಲೆ ಹಲ್ಲೆಗೂ ವಿಫಲ ಯತ್ನ ನಡೆಸಿದ್ದಾರೆ. ಬಳಿಕ ಬೆದರಿಕೆಯೊಡ್ಡಿದ್ದಾರೆ.

‘ಚುನಾವಣೆ ನ್ಯಾಯಸಮ್ಮತವಾಗಿ ನಡೆಯಬೇಕು ಎನ್ನುವುದು ನಮ್ಮ ಬಯಕೆ. ಆದರೆ, ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬರಲು ಗ್ರಾಮದ ಕೆಲವು ಮುಖಂಡರು ಯತ್ನಿಸುತ್ತಿದ್ದಾರೆ. ಹಿರಿಯರು ಅನಿಸಿಕೊಂಡವರು ಈ ರೀತಿ ಮಾಡುತ್ತಿರುವುದು ಸರಿಯಲ್ಲ. ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಅವರು, ನಮ್ಮ ವಿರುದ್ಧ ಜಾತಿ ನಿಂದನೆ ಕೇಸ್‌ ಹಾಕಿಸುವ ಬೆದರಿಕೆಯೊಡ್ಡಿದ್ದಾರೆ. ಗ್ರಾಮದಲ್ಲಿ ಅಪಪ್ರಚಾರ ನಡೆಸಿ, ನಮ್ಮನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ’ ಎಂದು ದೇವರಾಜ ಆರೋಪಿಸಿದ್ದಾರೆ.

‘ನಮ್ಮ ಹೋರಾಟದ ಫಲವಾಗಿ ಟೋಲ್‌ಗೇಟ್‌ನಲ್ಲಿ ಗ್ರಾಮಸ್ಥರಿಂದ ಹಣ ತೆಗೆದುಕೊಳ್ಳುತ್ತಿಲ್ಲ. ಉಚಿತ ರಕ್ತದಾನ ಶಿಬಿರ, ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪನೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದ ಅಕ್ರಮ ಬಯಲಿಗೆ ತಂದಿದ್ದೇವೆ. ಗ್ರಾಮ ಪಂಚಾಯಿತಿಯ ಎಲ್ಲ ಸವಲತ್ತುಗಳು ಗ್ರಾಮಸ್ಥರಿಗೆ ಸಿಗಬೇಕು ಎನ್ನುವುದು ನಮ್ಮ ಆಶಯ. ಹಾಗಾಗಿ ಚುನಾವಣೆಗೆ ಉತ್ತಮ ಅಭ್ಯರ್ಥಿಗಳನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ. ಆದರೆ, ನಮಗೆ ಹೆದರಿಸಿ, ನಾನಾ ರೀತಿಯ ಒತ್ತಡ ಹೇರುತ್ತಿದ್ದಾರೆ. ಮೊದಲಿನಿಂದಲೂ ಇದು ನಡೆದುಕೊಂಡೇ ಬಂದಿದೆ. ಚುನಾವಣಾ ಆಯೋಗ ಮಧ್ಯಪ್ರವೇಶಿಸಿ, ನ್ಯಾಯಸಮ್ಮತ ಚುನಾವಣೆಗೆ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT