ಸೋಮವಾರ, ಮಾರ್ಚ್ 8, 2021
20 °C

ಗಮನಸೆಳೆದ ವಾರ್ತಾ ಇಲಾಖೆಜನಜಾಗೃತಿ ವಸ್ತು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ವಿವಿಧ ಆರೋಗ್ಯ ಸೇವೆಗಳು ಮತ್ತು ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜನಜಾಗೃತಿ ವಸ್ತುಪ್ರದರ್ಶನ ಏರ್ಪಡಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವರಾಜ್ ಹೆಡೆ ಹೇಳಿದರು.

ವಾರ್ತಾ ಇಲಾಖೆ ವತಿಯಿಂದ ನಗರದ ಹೊಸ ಬಸ್ ನಿಲ್ದಾಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಜನಜಾಗೃತಿ ವಸ್ತುಪ್ರದರ್ಶನಕ್ಕೆ  ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆಯನ್ನು ತಡೆಗಟ್ಟಲು ರಾಜ್ಯದಲ್ಲಿ 32 ಪೌಷ್ಟಿಕ ಆಹಾರ ಪುನಶ್ಚೇತನಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿ ವಿಮ್ಸ್ ಆಸ್ಪತ್ರೆ ಮತ್ತು ಹೊಸಪೇಟೆಯ ತಾಲ್ಲೂಕು ಆಸ್ಪತ್ರೆಯಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 57 ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಾಗುವ ಸೇವೆಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ವಸ್ತು ಪ್ರದರ್ಶನದಲ್ಲಿ ಇರಿಸಿದ್ದ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತ ಮಾಹಿತಿ ಫಲಕಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಅದರಲ್ಲಿ, ವಿದ್ಯುತ್ ಲೈನ್‍ಮ್ಯಾನ್‍ಗಳು ಸುರಕ್ಷತಾ ಕ್ರಮಗಳನ್ನು ಪಾಲಿಸಲು ನಿಮ್ಮ ಸುರಕ್ಷಿತೆ ನಮ್ಮ ಆದ್ಯತೆಯ ಕಡೆ ಗಮನವಹಿಸುವುದು, ರಾಷ್ಟ್ರೀಯ ಫ್ಲೋರೋಸಿಸ್ ತಡೆಗಟ್ಟುವಿಕೆ, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ, ಪ್ರತಿ ಜಿಲ್ಲೆಯಲ್ಲೂ ಮಾನಸಿಕ ಆರೋಗ್ಯ ಕಾರ್ಯಕ್ರಮ ತಂಡದಿಂದ 24X7 ಆರೋಗ್ಯ ಮತ್ತು ಕ್ಷೇಮ ತಂಡಗಳ ಕಾರ್ಯಚರಣೆ, ತಾಯಂದಿರ ಸಂಪೂರ್ಣ ವಾತ್ಸಲ್ಯ, ಮನೆಯ ಹೊರಗಡೆ ಶೌಚಾಲಯ ನಿರ್ಮಾಣ ಸೇರಿ ಹಲವು ಕಾರ್ಯಕ್ರಮಗಳ ಫಲಕಗಳು ಜನರನ್ನು ಆಕರ್ಷಿಸಿದವು.

ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಟಿಒ ಕೃಷ್ಣಮೂರ್ತಿ, ಡಿಪೊ ವ್ಯವಸ್ಥಾಪಕ ಅಯಾಜ್, ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ವಿ.ಸಿ.ಗುರುರಾಜ್, ಶಾಂತವ್ವ ಉಪ್ಪಾರ್, ಖುರ್ಷಿದಾ ಬೇಗಂ, ನರಸಿಂಹಮೂರ್ತಿ ಇದ್ದರು.‌

ವಸ್ತುಪ್ರದರ್ಶನದಲ್ಲಿ...

ಜನಜಾಗೃತಿ ವಸ್ತು ಪ್ರದರ್ಶನದಲ್ಲಿ ನವಜಾತ ಶಿಶುಗಳ ಆರೈಕೆ, ಮಕ್ಕಳ ಅಪೌಷ್ಠಿಕತೆ ತಡೆಗೆ ಜಿಲ್ಲಾ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಪುನಶ್ಚೇತನಾ ಕೇಂದ್ರ ಸ್ಥಾಪಿಸಿರುವುದು, ಕೇಂದ್ರಗಳ ಮೂಲಕ ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಕುರಿತ ಅಂಶಗಳ ವಿವರಣೆ 5 ವರ್ಷದಲ್ಲಿ 7 ಬಾರಿ ಲಸಿಕೆ ತಪ್ಪದೆ ಹಾಕಿಸುವುದು, ರಕ್ತಹೀನತೆ ತಡೆಗಟ್ಟುವ ಬಗೆ, ಕ್ಷಯರೋಗದ ಲಕ್ಷಣಗಳು ಮತ್ತು ನಿಯಂತ್ರಣದ ಕ್ರಮ, ಡೆಂಗಿ ಮತ್ತು ಚಿಕೂನ್‌ಗುನ್ಯ ಲಕ್ಷಣಗಳು ಮತ್ತು ಮುನ್ನಚ್ಚೆರಿಕೆ ಕ್ರಮಗಳು, ಆರೋಗ್ಯ ಉಪಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾದರಿ ಸೌಲಭ್ಯ ಒದಗಿಸುವಿಕೆ, ಮಾನಸಿಕ ಆರೋಗ್ಯ, ಜನನಿ–ಶಿಶು ಸುರಕ್ಷಾ, ತಾಯಿ ಕಾರ್ಡ್, ಮಕ್ಕಳಿಗೆ, ಬಾಣಂತಿಯರಿಗೆ ಪೌಷ್ಟಿಕಾಂಶದ ಆಹಾರ ಸೇವನೆಯ ಕ್ರಮಗಳ ಕುರಿತ ಸಂಪೂರ್ಣ ಮಾಹಿತಿ ಒಳಗೊಂಡ ಬೃಹತ್ ಫಲಕಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.