ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ದಾಳಿಂಬೆ ಬೆಳೆದು ಜೇಬು ತುಂಬಿಸಿಕೊಂಡ ರೈತ

Last Updated 10 ಆಗಸ್ಟ್ 2021, 15:37 IST
ಅಕ್ಷರ ಗಾತ್ರ

ಬಳ್ಳಾರಿ: ಕಳೆದ ಒಂದು ವರ್ಷದಲ್ಲಿ ಕೋವಿಡ್‌ ತಂದೊಡ್ಡಿದ ಕಷ್ಟಕಾರ್ಪಣ್ಯ ಅಷ್ಟಿಷ್ಟಲ್ಲ. ಸಾವಿರಾರು ಜನ ಜೀವ ಕಳೆದುಕೊಂಡರು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು. ನೂರಾರು ಕುಟುಂಬಗಳು ಬೀದಿಗೆ ಬಿದ್ದವು. ಆದರೆ, ಇಲ್ಲೊಬ್ಬ ರೈತ ಸಂಕಷ್ಟದ ನಡುವೆಯೂ ದಾಳಿಂಬೆ ಬೆಳೆದು, ಜೇಬು ತುಂಬಿಸಿಕೊಂಡು ಸಂಭ್ರಮದಲ್ಲಿದ್ದಾರೆ.

ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕೇಳಿಸುವುದು ಬರೀ ಸಿಡಿಮದ್ದುಗಳ ಸ್ಫೋಟ... ಅಕ್ರಮ ಗಣಿಗಾರಿಕೆಯಿಂದ ಗಣಿನಾಡಿನ ‘ಖ್ಯಾತಿ’ ಇಡೀ ದೇಶಕ್ಕೆ ಪಸರಿಸಿತು. ಕಳೆದ ಹತ್ತು ವರ್ಷಗಳಲ್ಲಿ ಜನ ಕಂಡಿದ್ದು, ಕೇಳಿದ್ದು ಕಪ್ಪು ದೂಳಿನ ಕಥೆ ಮಾತ್ರ. ಆದರೆ, ಇದರಾಚೆಗೆ ಜಿಲ್ಲೆಯಲ್ಲಿ ನೂರಾರು ಪ್ರಗತಿಪರ ರೈತರಿದ್ದಾರೆ. ಸದ್ದುಗದ್ದಲವಿಲ್ಲದೆ ತಮ್ಮ ಪಾಡಿಗೆ ಕೃಷಿ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ...

ಬಳ್ಳಾರಿ ತಾಲೂಕಿನ ಕೃಷ್ಣಾನಗರ ಕ್ಯಾಂಪ್‌ನ 45 ವರ್ಷದ ರೈತ ಶ್ರೀಧರ್‌, ರೂಪನಗುಡಿ ಹೋಬಳಿಯ ಬುರ್ರನಾಯಕನಹಳ್ಳಿಯಲ್ಲಿ 14 ಎಕರೆ ಲಾವಣಿ ಭೂಮಿಯಲ್ಲಿ ದಾಳಿಂಬೆ ಬೆಳೆದು ಅತ್ಯಧಿಕ ಲಾಭ ಮಾಡಿದ್ದಾರೆ. ಇದಕ್ಕೆ ಅವರು ಖರ್ಚು ಮಾಡಿದ್ದು ₹ 40 ಲಕ್ಷ; ಬೆಳೆದಿದ್ದು 75 ಟನ್ ದಾಳಿಂಬೆ. ತಮಿಳುನಾಡು ವ್ಯಾಪಾರಿಗಳು ತೋಟಕ್ಕೇ ಬಂದು ಪ್ರತಿ ಟನ್‌ಗೆ ₹ 1.07 ಲಕ್ಷದಂತೆ ಖರೀದಿಸಿದ್ದಾರೆ.

ಕೋವಿಡ್‌ ಮೊದಲ ಅಲೆ ಸಮಯದಲ್ಲಿ ಶ್ರೀಧರ್‌ ಅವರೂ ಕಷ್ಟನಷ್ಟ ಅನುಭವಿಸಿದರು. ಸೋಂಕಿನ ಭಯದಿಂದಾಗಿ ತೋಟಕ್ಕೇ ಹೋಗಲಿಲ್ಲ. ಮಳೆಯೂ ಸಿಕ್ಕಾಪಟ್ಟೆ ಆಗಿತ್ತು. ಹೀಗಾಗಿ, ಬೆಳೆ ನಷ್ಟವಾಯಿತು. ಕೇವಲ 20 ಟನ್‌ ಬಂದಿತ್ತು. ಹಣ್ಣು ಕಿತ್ತು ಅಲ್ಲೇ ಬಿಸಾಡಿದರು. ಆನಂತರ, ಗಿಡಗಳನ್ನು ಸವರಿ, ಪುನಃ ಪೋಷಣೆ ಮಾಡಿದರು. ಎರಡನೇ ಸಲ 75 ಟನ್‌ ಹಣ್ಣು ಬಂತು. ಹೋದ ವಾರ ಹಣ್ಣುಗಳನ್ನು ಮಾರಿದ್ದಾರೆ.

14 ಎಕರೆಯಲ್ಲಿ 5.500 ಗಿಡಗಳನ್ನು ಹಾಕಲಾಗಿದೆ. ಆಂಧ್ರದ ಗಡಿ ಹಳ್ಳಿಯಿಂದ ಪ್ರತಿ ಸಸಿಗೆ (ಭಗ್ವಾ ತಳಿ) ₹ 30 ಕೊಟ್ಟು ತರಲಾಗಿದೆ. ಹನಿ ನೀರಾವರಿ ಸೌಲಭ್ಯಕ್ಕಾಗಿ ₹ 1.5 ಲಕ್ಷ, ಹಣ್ಣುಗಳಿಗೆ ನೆರಳು ಕೊಡುವ ಬಿಳಿ ನೆಟ್‌ಗೆ ₹ 10 ಲಕ್ಷ, ಹಣ್ಣು ಸಂಸ್ಕರಿಸಿ, ಪ್ಯಾಕಿಂಗ್‌ ಮಾಡುವ ಶೆಡ್‌ ನಿರ್ಮಾಣಕ್ಕೆ ₹ 4 ಲಕ್ಷ ಎಲ್ಲವೂ ಸೇರಿ ₹ 40 ಲಕ್ಷ ಖರ್ಚಾಗಿದೆ. ಸರ್ಕಾರದಿಂದ ₹ 8 ಲಕ್ಷ ಸಹಾಯ ಧನವೂ ಅವರಿಗೆ ಬಂದಿದೆ.

‘ಒಂದು ಎಕರೆಗೆ ಬಿಳಿ ನೆಟ್‌ ಹಾಕಿರಲಿಲ್ಲ. ಇದರಿಂದಾಗಿ ಹಣ್ಣುಗಳಿಗೆ ರೋಗ ಬಂದು ನಷ್ಟವಾಗಿದೆ. ನೆಟ್‌ ಹಾಕಿದ್ದ ಮಣ್ಣಿನಲ್ಲಿ ಪ್ರತಿ ದಾಳಿಂಬೆ 300ರಿಂದ 400 ಗ್ರಾಂ ತೂಗಿದೆ. ಬಣ್ಣ, ರುಚಿ, ಗುಣಮಟ್ಟ ಸೊಗಸಾಗಿದೆ. ಮೊಳಕಾಲ್ಮೂರಿನ ತೋಟವೊಂದರಲ್ಲಿ ಹಸಿರು ನೆಟ್‌ ಹಾಕಿದ್ದರು. ಹಸಿರು ನೆಟ್‌ ದುಬಾರಿ. ಖರ್ಚು ತಗ್ಗಿಸುವ ಉದ್ದೇಶದಿಂದ ನಾವು ಬಿಳಿ ನೆಟ್‌ ಹಾಕಿದೆವು’ ಎಂದು ಶ್ರೀಧರ್‌ ತಮ್ಮ ಯಶೋಗಾಥೆ ವಿವರಿಸಿದರು.

ಕೈ ಕೆಸರಾದರೆ...
‘ಶ್ರೀಧರ್‌ ಪ್ರಗತಿಪರ ರೈತ. ಕಷ್ಟಪಟ್ಟು ದಾಳಿಂಬೆ ಬೆಳೆದಿದ್ದಾರೆ. ಮೊದಲ ಬೆಳೆ ಕೈಕೊಟ್ಟಿದೆ. ಆದರೂ ತಲೆ ಕೆಡಿಸಿಕೊಳ್ಳದೆ ದುಡಿದಿದ್ದಾರೆ. ಗಿಡಗಳನ್ನು ಸವರಿ, ನೀರು, ಮೂಲ ಪೋಷಕಾಂಶ ಕೊಟ್ಟು, ಮೂರು ತಿಂಗಳು ಬಿಟ್ಟಿದ್ದರು. ಈಗ ಉತ್ತಮ ಇಳುವರಿ ಬಂದಿದೆ’ ಎಂದು ತಾಲೂಕು ತೋಟಗಾರಿಕೆ ಅಧಿಕಾರಿ ಸರೋಧೆ ಸುರೇಖಾ ಹೇಳಿದರು.

‘ನಮ್ಮ ಪ್ರದೇಶದಲ್ಲಿ ಶ್ರೀಧರ್‌ ಮತ್ತು ಜೋಳದರಾಶಿ ಪಂಪನಗೌಡರು ಅದ್ಭುತವಾಗಿ ದಾಳಿಂಬೆ ಬೆಳೆದಿದ್ದಾರೆ. ಪಂಪನಗೌಡರು ಪ್ರತಿ ಕೆ.ಜಿಗೆ ₹ 112ರಿಂದ ₹120ಕ್ಕೆ ಮಾರಾಟ ಮಾಡಿದ್ದಾರೆ. ಪಂಪನಗೌಡರು ಮೂರು ಬೆಳೆ ತೆಗೆದಿದ್ದಾರೆ ಎಂದೂ ಸುರೇಖಾ ವಿವರಿಸಿದರು. ಸುರೇಖಾ ಶ್ರೀಧರ್‌ ತೋಟಕ್ಕೆ ಭೇಟಿ ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT