ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೇಲೆ ದೌರ್ಜನ್ಯದ ಆರೋಪ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

Last Updated 1 ಡಿಸೆಂಬರ್ 2020, 8:29 IST
ಅಕ್ಷರ ಗಾತ್ರ

ಹೊಸಪೇಟೆ: ಕೃಷಿ ಕಾಯ್ದೆ ವಿರೋಧಿಸಿ ವಿವಿಧ ರಾಜ್ಯಗಳಿಂದ ಪ್ರತಿಭಟನೆ ನಡೆಸಲು ನವದೆಹಲಿಗೆ ತೆರಳುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯವೆಸಗುತ್ತಿದೆ ಎಂದು ಆರೋಪಿಸಿ ಸಿಪಿಐಎಂ, ರೈತ–ಕಾರ್ಮಿಕ–ದಲಿತ–ಜನಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಶ್ರಮಿಕ ಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಮಹಾತ್ಮ ಗಾಂಧಿ ವೃತ್ತ, ಬಸ್‌ ನಿಲ್ದಾಣದ ಮೂಲಕ ಹಾದು ರೋಟರಿ ವೃತ್ತದಲ್ಲಿ ಕೊನೆಗೊಂಡಿತು. ಬಳಿಕ ಅಲ್ಲಿಯೇ ಇರುವ ತಹಶೀಲ್ದಾರ್‌ ಕಚೇರಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಕೃಷಿ ಕಾಯ್ದೆ ವಿರುದ್ಧ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರ ಜಗ್ಗದ ಕಾರಣ ಸಹಸ್ರಾರು ಸಂಖ್ಯೆಯ ರೈತರು ನವದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಕೇಂದ್ರ ಸರ್ಕಾರ ಅಮಾಯಕ ರೈತರ ಮೇಲೆ ಲಾಠಿ ಪ್ರಹಾರ, ಜಲಫಿರಂಗಿ, ಅಶ್ರುವಾಯು ಸಿಡಿಸಿ ದೌರ್ಜನ್ಯ ಎಸಗಿದೆ. ಅವರಿಗೆ ದೆಹಲಿಯೊಳಗೆ ತೆರಳಲು ಬಿಡುತ್ತಿಲ್ಲ. ಇದು ಸರ್ವಾಧಿಕಾರಿ ಧೋರಣೆ. ಉದ್ಧಟತನದ ಪರಮಾವಧಿ. ಅದಕ್ಕೆ ಭವಿಷ್ಯದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೃಷಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ವಿದ್ಯುತ್‌ ತಿದ್ದುಪಡಿ ಮಸೂದೆ, ಕಾರ್ಮಿಕ ವಿರೋಧಿ ಸಂಹಿತೆ ಕೂಡಲೇ ಹಿಂಪಡೆಯಬೇಕು. ಬೆಂಬಲ ಬೆಲೆ ನಿಗದಿಪಡಿಸುವ ಡಾ. ಎಂ.ಎಸ್‌. ಸ್ವಾಮಿನಾಥನ್‌ ನೇತೃತ್ವದ ಕೃಷಿ ಆಯೋಗದ ಸಲಹೆ ಜಾರಿಗೆ ತರಬೇಕು. ಕೋವಿಡ್‌ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್‌. ಭಾಸ್ಕರ್‌ ರೆಡ್ಡಿ, ಜನಪರ ಸಂಘಟನೆಗಳ ಮುಖಂಡರಾದ ಜೆ. ಕಾರ್ತಿಕ್‌, ಮರಡಿ ಜಂಬಯ್ಯ ನಾಯಕ, ಎಂ. ಗೋಪಾಲ, ಎ. ಕರುಣಾನಿಧಿ, ಶಕುಂತಲಮ್ಮ, ಕೆ.ಎಂ. ಸ್ವಪ್ನ, ವಿ. ಸ್ವಾಮಿ, ಕೆ.ಎಂ. ಸಂತೋಷ್‌ ಕುಮಾರ್‌, ಸುಮಂಗಲ, ಮೋಹನ್‌ ಕುಮಾರ್‌, ಎಚ್‌.ಎಚ್‌. ಹನುಮಂತ, ಬಿ. ಮಹೇಶ್‌, ಈ. ಮಂಜುನಾಥ, ಶಿವಕುಮಾರ, ರಮೇಶ್‌ ಕುಮಾರ್‌, ಸತ್ಯಮೂರ್ತಿ, ಯಲ್ಲಮ್ಮ, ಹಂಪಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT