ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗೆ ನೀರಿಲ್ಲ,ಕುಡಿಯುವ ನೀರಿನ ಕೆರೆ ಖಾಲಿ–ಕಾಲುವೆಗೆ ನೀರು ಹರಿಸಲು ವಾರದ ಗಡುವು

Last Updated 23 ಜುಲೈ 2019, 8:36 IST
ಅಕ್ಷರ ಗಾತ್ರ

ಬಳ್ಳಾರಿ: ‘ಜಿಲ್ಲೆಯಲ್ಲಿ ಬೆಳೆಗಳಿಗೆ ನೀರಿಲ್ಲ. ಕುಡಿಯುವ ನೀರಿನ ಕೆರೆಗಳು ಒಣಗಿವೆ. ಹೀಗಾಗಿ ಒಂದು ವಾರದೊಳಗೆ ನೀರಾವರಿ ಸಲಹಾ ಸಮಿತಿಯ ತುರ್ತು ಸಭೆ ನಡೆಸಿ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನೀರು ಹರಿಸಬೇಕು’ ಎಂದು ತುಂಗಭದ್ರ ರೈತಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇನ್ನೊಂದು ವಾರದೊಳಗೆ ನೀರು ಪೂರೈಸದಿದ್ದರೆ ಹತ್ತಿ ಬೆಳೆ ಒಣಗುತ್ತದೆ. ಬಳ್ಳಾರಿ ನಗರದಲ್ಲಿ 15–20ದಿನಗಳಿಗೆ ನೀರು ಪೂರೈಸುತ್ತಿದ್ದು ಜನರ ಸಂಕಷ್ಟವನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿದರು.

‘ಈವರೆಗೆ ಜಲಾಶಯದಲ್ಲಿ 17.5 ಟಿಎಂಸಿ ನೀರು ಶೇಖರಣೆಯಾಗಿದ್ದು, 5,500 ಕ್ಯೂಸೆಕ್ ನೀರಿನ ಒಳ ಹರಿವು ಇರುವುದು ಕೊಂಚ ಸಮಾಧಾನ ತಂದಿದ್ದರೂ, ಹಿಂದಿನ ವರ್ಷ ಇದೇ ವೇಳೆಯಲ್ಲಿ 94 ಟಿಎಂಸಿ ನೀರು ಮತ್ತು 52 ಸಾವಿರ ಕ್ಯುಸೆಕ್ ಒಳಹರಿವು ಇತ್ತು.
ಬೆಳೆಗಳ ನಾಟಿಯೂ ಪ್ರಾರಂಭಗೊಂಡಿತ್ತು. ಆದರೆ, ಈ ಬಾರಿ ಈವರೆಗೂ ಯಾವುದೇ ಕೃಷಿ ಚಟವಟಿಕೆಗಳು ಆರಂಭವಾಗಿಲ್ಲ. 2017ರ ಪರಿಸ್ಥಿತಿ ಮರುಕಳಿಸಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈ ಬಾರಿ ಕುಡಿಯುವ ನೀರಿಗೂ ತತ್ವಾರ ಇದೆ. ರಾಯಚೂರು ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಮೂರು ದಿನಗಳಿಂದ 1200 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಆದರೆ, ಜಿಲ್ಲೆಗೆ ಕುಡಿಯುವ ನೀರಿಗೆ ಬರ ಬಂದಿದೆ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ದೂರಿದರು.

‘ಕೃಷ್ಣಾ ನದಿ ಜೋಡಣೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಕೃಷ್ಣಾ ನದಿಯ ನೀರನ್ನು ನದಿ ಜೋಡಣೆ ಮೂಲಕ ತಂದರೆ, ಆಂದ್ರಪ್ರದೇಶ, ತೆಲಗಾಣ, ಕರ್ನಾಟಕ ಸೇರಿ ಮೂರೂ ರಾಜ್ಯಗಳ ಜನರು ಸಮನಾಗಿ ನೀರು ಹಂಚಿಕೆ ಮಾಡಿಕೊಳ್ಳಬಹುದು’ ಎಂದ ಅವರು, ‘ತುಂಗಭದ್ರಾ ಜಲಾಶಯದ ಹೂಳು ತೆಗೆಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಶ್ರೀಧರಗೌಡ, ಶರಣನಗೌಡ, ವೀರೇಶ್, ಗಾದಿವೀರನಗೌಡ, ಸಣ್ಣ ಮಲ್ಲಯ್ಯ, ಶ್ರಿಧರ, ಭೀಮನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT