ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಕೋವಿಡ್ ಕಾಲದಲ್ಲಿ ತಾಳ್ಮೆ ಮೈವೆತ್ತ ಚಾಲಕ

Last Updated 31 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ತಾಳ್ಮೆ ಮೈವೆತ್ತ ಚಾಲಕ

ಬಳ್ಳಾರಿ: ಲಾಕ್‌ಡೌನ್ ಸಮಯದಲ್ಲಿ ವಲಸಿಗರಿಗೆ, ಸೋಂಕಿತರಿಗೆ ನಿಯಮಿತವಾಗಿ ಊಟ, ಉಪಾಹಾರ, ನೀರು ಪೂರೈಸುವ ಹೊಣೆ ಹೊತ್ತಿದ್ದ ಬಳ್ಳಾರಿಯ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಹಾಗೂ ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್‌ ಅವರ ವಾಹನ ಚಾಲಕ ಕೆ.ನರಸಿಂಹರೆಡ್ಡಿ 24*7 ವಾಹನ ಚಾಲನೆ ಮಾಡಲು ಸಜ್ಜಾಗಿರುತ್ತಿದ್ದರು.

ವೇಳಾಪಟ್ಟಿಗೆ ತಕ್ಕಂತೆ ಸಜ್ಜಾಗುತ್ತಿದ್ದುದಷ್ಟೇ ಅಲ್ಲ, ತುರ್ತು ಸಂದರ್ಭಗಳಲ್ಲಿ ಕರೆ ಬಂದ ಹತ್ತು ನಿಮಿಷದಲ್ಲಿ ಮನೆಯಿಂದ ಗೃಹರಕ್ಷಕ ದಳದ ಕಚೇರಿಗೆ ಹಾಜರಾಗುತ್ತಿದ್ದವರು. ಲಾಕ್‌ಡೌನ್‌ ಸಂಪೂರ್ಣ ಮುಗಿದು, ಆಹಾರ ಪೂರೈಕೆ ಕೆಲಸ ನಿಲ್ಲುವವರೆಗೂ ಅವರು ನಿದ್ದೆ ಮಾಡಿದ್ದು ಕಡಿಮೆ. ಚಾಲಕರಾಗಿಯಷ್ಟೇ ಅವರು ಇರಲಿಲ್ಲ. ಊಟ, ಉಪಾಹಾರ ಸಾಮಗ್ರಿಗಳ ರವಾನೆ, ವಿತರಣೆಯಲ್ಲೂ ಅವರ ಶ್ರಮದಾನ ಮಾಡಿದ್ದಾರೆ.

ಪತ್ನಿ, ಇಬ್ಬರು ಮಕ್ಕಳ ಕುಟುಂಬಕ್ಕಿಂತಲೂ ರೆಡ್ಡಿ ಸಮುದಾಯವನ್ನೇ ಕುಟುಂಬವೆಂದು ಭಾವಿಸಿದವರು. ಬೆಳಗಿನ ಜಾವ 5ರಿಂದ ರಾತ್ರಿ 11ರ ವರೆಗೆ ಸತತ ವಾಹನ ಚಾಲನೆ ಮಾಡುತ್ತಿದ್ದರು.

‘ಡ್ರೈವರ್ ಕೆಲಸವನ್ನಷ್ಟೇ ಅಲ್ಲದೆ ರೆಡ್ಡಿವರು ಅಗತ್ಯವಿರುತ್ತಿದ್ದ ಎಲ್ಲ ಕೆಲಸವನ್ನೂ ನಗುನಗುತ್ತಲೇ ಮಾಡುತ್ತಿದ್ದರು. ಅವರು ಬೇಸರ ಮಾಡಿಕೊಂಡಿದ್ದು ನಾನು ನೋಡಲಿಲ್ಲ‘ ಎನ್ನುತ್ತಾರೆ ಅಧಿಕಾರಿ ಷಕೀಬ್‌.

ಎಲ್ಲರಿಗೂ ಉಪಾಹಾರ ಕೊಟ್ಟರು

ಬಳ್ಳಾರಿ: ಬಳ್ಳಾರಿಯ ಜೈನ್‌ ಮಾರ್ಕೆಟ್‌ ಅಸೋಸಿಯೇಶನ್‌ನ ಮುಖಂಡ ಚಗನ್‌ಲಾಲ್‌ 62 ದಾಟಿದ್ದರೂ ತಮ್ಮ ವಯಸ್ಸು ಲೆಕ್ಕಿಸದೇ, ಕೊರೊನಾ ಸೋಂಕಿತರಿಗೆ ಬೆಳಗಿನ ಉಪಾಹಾರವನ್ನು ಸುಮಾರು 2 ತಿಂಗಳ ಕಾಲ ಪೂರೈಸಿದವರು.

ಒಂದೆಡೆ ಅಸೋಸಿಯೇಶನ್ ಪರಿಹಾರ ಕಾರ್ಯ ಮಾಡುತ್ತಿರುವಾಗಲೇ, ಚಗನ್‌ಲಾಲ್‌ ತಮ್ಮ ಆಪ್ತರಾದ ಎಸ್‌.ಅಶೋಕ್‌ಕುಮಾರ್‌ ಜೈನ್‌, ಪ್ರಕಾಶ್‌ ಕುಮಾರ್‌ ಜೈನ್‌, ಪಿ.ಅಶೋಕ್‌ಕುಮಾರ್‌ ಜೈನ್‌ ಮತ್ತು ಗೌತಮ್‌ಚಂದ್‌ ಜೈನ್‌ ಅವರೊಂದಿಗೆ ಸೇರಿ ಇನ್ನೊಂದು ಬಗೆಯಲ್ಲಿ ನೆರವಾದವರು.

ವಿಪರ್ಯಾಸವೆಂದರೆ, ಇತರೆ ಸಂತ್ರಸ್ತರಿಗೆ ಉಪಾಹಾರ ಕೊಡುತ್ತಿದ್ದ ಅವರು, ಲಾಕ್‌ಡೌನ್‌ ಸಮಯದಲ್ಲಿ ಅಹಮದಾಬಾದ್‌ನಿಂದ ಬಳ್ಳಾರಿಗೆ ಬಂದು ಕ್ವಾರಂಟೈನ್‌ ಕೇಂದ್ರದಲ್ಲಿದ್ದ ತಮ್ಮ ಮಗ ಮತ್ತು ಸೊಸೆಗೆ ತಮ್ಮ ಮನೆಯೂಟ ಕೊಡಲು ಆಗದೆ ಸಂಕಟಪಟ್ಟರು!

‘ಗೃಹರಕ್ಷಕದ ದಳದಿಂದ ಸಂಜೆ ಕರೆ ಬರುತ್ತಲೇ ನಾವು ಗ್ಲಾಸ್‌ಬಜಾರ್‌ನ ಅಡುಗೆ ಸಿಬ್ಬಂದಿಗೆ ಹೇಳಿಬಿಡುತ್ತಿದ್ದೆವು. ಬೆಳಿಗ್ಗೆ ಹೊತ್ತಿಗೆ ಉಪಾಹಾರದ ಪೊಟ್ಟಣಗಳು ಸಿದ್ಧವಾಗಿರುತ್ತಿದ್ದವು. ನಾವೇ ಹೋಗಿ ಕೊಟ್ಟುಬರುತ್ತಿದ್ದೆವು. ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ, ವಡೆಯನ್ನು ವಿತರಿಸಿದೆವು. ಸುಮಾರು₹1.25 ಲಕ್ಷ ಖರ್ಚಾಯಿತು’ ಎಂದು ಚಗನ್‌ಲಾಲ್‌ ಹೇಳಿದರು.

ಉಪಾಹಾರ ವಿತರಣೆಯ ಫೋಟೋಗಳನ್ನೂ ತೆಗೆಸಿಕೊಂಡಿಲ್ಲ. ದಾನಕಾರ್ಯದ ಬಗ್ಗೆ ನಮಗೆ ಯಾವ ಪ್ರಚಾರವೂ ಬೇಡ ಎಂದು ಸಂಕೋಚ ವ್ಯಕ್ತಪಡಿಸಿದರು.

ಕ್ವಾರಂಟೈನ್‌ ಕೇಂದ್ರದಲ್ಲಿದ್ದು ಕೆಲಸ

ಹೊಸಪೇಟೆ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್‌ ಚಾಲಕ ಜಿ. ರಾಮಬಾಬು ಅವರು ಕ್ವಾರಂಟೈನ್‌ ಕೇಂದ್ರದಲ್ಲಿದ್ದುಕೊಂಡೇ ಕೆಲಸ ನಿರ್ವಹಿಸುವುದರ ಮೂಲಕ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಯ ಮೆಚ್ಚುಗೆಗೆ ಪಾತ್ರರಾದವರು.

ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ ಏಪ್ರಿಲ್‌ ತಿಂಗಳಿಂದ ಇದುವರೆಗೆ ಅವರು ರಜೆ ಪಡೆದಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಹಗಲಿರುಳು ಕೆಲಸ ನಿರ್ವಹಿಸಿದ್ದಾರೆ. ಸೋಂಕು ಪೀಡಿತ ಪ್ರದೇಶದಿಂದ ಅಸಂಖ್ಯ ಕೋವಿಡ್‌ ರೋಗಿಗಳನ್ನು ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ ಆಂಬುಲೆನ್ಸ್‌ನಲ್ಲಿ ಕೊಂಡೊಯ್ದಿದ್ದಾರೆ. ಇಷ್ಟೇ ಅಲ್ಲ, 30ಕ್ಕೂ ಹೆಚ್ಚು ರೋಗಿಗಳ ಶವ ಸಾಗಣೆಗೆ ನೆರವಾಗಿದ್ದಾರೆ. ಪಿಪಿಇ ಕಿಟ್‌ ಧರಿಸಿಕೊಂಡು ಮೃತರ ಅಂತ್ಯಸಂಸ್ಕಾರಕ್ಕೂ ಸಹಾಯಮಾಡಿದ್ದಾರೆ.

‘ಆರಂಭದ ಮೂರ್ನಾಲ್ಕು ತಿಂಗಳು ಹಗಲು–ರಾತ್ರಿಯೆನ್ನದೆ ಕೆಲಸ ಮಾಡಿರುವೆ. ಯಾವಾಗ ಎಲ್ಲಿ, ಯಾರಿಗೆ ಸೋಂಕು ಬರುತ್ತಿತ್ತೋ ಗೊತ್ತಿರಲಿಲ್ಲ. ವಿಷಯ ಗೊತ್ತಾದ ತಕ್ಷಣ ಆಂಬುಲೆನ್ಸ್‌ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದರು. ಸೋಂಕುಪೀಡಿತ ಪ್ರದೇಶದಲ್ಲಿ ಓಡಾಡುತ್ತಿದ್ದ ಕಾರಣ ಮನೆಯವರಿಗೆ ತೊಂದರೆ ಆಗಬಾರದು ಎಂದು ಕ್ವಾರಂಟೈನ್‌ ಕೇಂದ್ರದಲ್ಲಿಯೇ ಉಳಿದುಕೊಳ್ಳುತ್ತಿದ್ದೆ. ಮೂರ್ನಾಲ್ಕು ತಿಂಗಳಲ್ಲಿ ಒಂದು ದಿನವೂ ಕುಟುಂಬದವರೊಂದಿಗೆ ಕುಳಿತು ಆರಾಮಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ’ ಎನ್ನುತ್ತಾರೆ ರಾಮಬಾಬು.

38 ವರ್ಷ ವಯಸ್ಸಿನ ರಾಮಬಾಬು ಅವರು ಇಲ್ಲಿನ ಪಾರ್ವತಿ ನಗರದ ನಿವಾಸಿ. ಆರು ವರ್ಷಗಳಿಂದ ಚಾಲಕರಾಗಿ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

* ವರದಿ: ಕೆ.ನರಸಿಂಹಮೂರ್ತಿ, ಶಶಿಕಾಂತ ಎಸ್‌. ಶೆಂಬೆಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT